ADVERTISEMENT

ಹುಣಸಗಿ | ಮಳೆಗೆ ಬೆಳೆ ಹಾನಿ; ಮನೆ ಕುಸಿದು ಮೂವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 4:15 IST
Last Updated 29 ಸೆಪ್ಟೆಂಬರ್ 2025, 4:15 IST
ಹುಣಸಗಿ ತಾಲ್ಲೂಕಿನ ಕೋಟೆಗುಡ್ಡ ಗ್ರಾಮದಲ್ಲಿ ಬೆಳೆ ಹಾನಿ ಪ್ರದೇಶಕ್ಕೆ ಶಾಸಕ ರಾಜಾ ವೇಣುಗೋಪಾಲ್ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಹುಣಸಗಿ ತಾಲ್ಲೂಕಿನ ಕೋಟೆಗುಡ್ಡ ಗ್ರಾಮದಲ್ಲಿ ಬೆಳೆ ಹಾನಿ ಪ್ರದೇಶಕ್ಕೆ ಶಾಸಕ ರಾಜಾ ವೇಣುಗೋಪಾಲ್ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಹುಣಸಗಿ: ‘ತಾಲ್ಲೂಕಿನಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಶಾಸಕ ರಾಜಾ ವೇಣುಗೋಪಾಲ್ ನಾಯಕ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲ್ಲೂಕಿನ ನಾರಾಯಣಪುರ, ಮದಲಿಂಗನಾಳ, ಕೋಟೆಗುಡ್ಡ ಸೇರಿದಂತೆ ಇತರ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ, ಹಾನಿಯಾದ ಹತ್ತಿ, ತೊಗರಿ ಬೆಳೆಹಾನಿಯನ್ನು ಪರಿಶೀಲಿಸಿದರು.

ನಂತರ ಮಾತನಾಡಿದ ಅವರು, ‘ತಾಲ್ಲೂಕಿನಲ್ಲಿ ಮಳೆಯಿಂದಾಗಿ ತೊಗರಿ, ಹತ್ತಿ ಸೇರಿದಂತೆ ಇತರ ಬೆಳೆಗಳು ಹಾನಿಯಾಗಿದ್ದು, ರೈ ತರು ಸಂಕಷ್ಟದಲ್ಲಿದ್ದಾರೆ. ಹಾನಿಯ ಕುರಿತು ಈಗಾಗಲೇ ಅಧಿಕಾರಿಗಳು ಸಮೀಕ್ಷಾ ಕಾರ್ಯ ಕೈಗೊಂಡಿದ್ದಾರೆ. ಶೀಘ್ರ ಸಮೀಕ್ಷೆ ಕೆಲಸ ಪೂರ್ಣಗೊಳಿಸಿ ವರದಿ ನೀಡುವಂತೆ ಕಂದಾಯ ಇಲಾಖೆಗೆ ಸೂಚಿಸಿದ್ದೇನೆ’ ಎಂದರು.

ADVERTISEMENT

‘ಹಾನಿಯ ಕುರಿತು ಅಧಿಕಾರಿಗಳ ಹಾಗೂ ಸಚಿವರ ಗಮನಕ್ಕೆ ತಂದು ಸೂಕ್ತ ಪರಿಹಾರ ನೀಡುವಲ್ಲಿ ಪ್ರಯತ್ನಿಸುತ್ತೇನೆ’ ಎಂದು ಹೇಳಿದರು.

ಹುಣಸಗಿ ತಹಶೀಲ್ದಾರ್ ಎಂ. ಬಸವರಾಜ್, ಉಪ ತಹಶೀಲ್ದಾರ್ ಕಲ್ಲಪ್ಪ ಜಂಜನಗಡ್ಡಿ, ಮುಖಂಡರಾದ ರವಿಚಂದ್ರ ಅಲ್ದಾಳ, ನಿಂಗರಾಜು ಬಾ, ಹಣಮಂತ್ರಾಯ ಮಕಾಶಿ ಇದ್ದರು.

ಮನೆ ಕುಸಿದು ಮೂವರಿಗೆ ಗಾಯ: ಮಳೆಯಿಂದಾಗಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಅಲ್ಲಲ್ಲಿ ಮನೆ ಕುಸಿದು ಮೂವರಿಗೆ ಗಾಯಗಳಾಗಿದೆ.

ತಾಲ್ಲೂಕಿನ ಮಾಳನೂರು ಗ್ರಾಮದಲ್ಲಿ ಸುಮಾರು ಎಂಟು ಮನೆಗಳಿಗೆ ಹಾನಿಯಾಗಿದೆ. ಮನೆ ಕುಸಿದು ಲಕ್ಷ್ಮಿಬಾಯಿ ರಾಮಪ್ಪ ಚಲವಾದಿ ಎನ್ನುವರಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಆಸ್ಪತ್ರೆಗೆ ಕಳುಹಿಸಲಾಗಿದೆ.

ತಾಲ್ಲೂಕಿನ ಹನುಮಸಾಗರ ಗ್ರಾಮದಲ್ಲಿ ರಾತ್ರಿ ಮನೆ ಚಾವಣಿ ಕುಸಿದು ಬಸಣ್ಣ ಬಿರಾದಾರ ಹಾಗೂ ಗಂಗಮ್ಮ ಎನ್ನುವವರಿಗೆ ಗಾಯವಾಗಿದೆ. ಗಾಯಾಳುಗಳನ್ನು ಲಿಂಗಸುಗೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಹುಣಸಗಿ ತಾಲ್ಲೂಕಿನ ಕೋಟೆಗುಡ್ಡ ಗ್ರಾಮದಲ್ಲಿ ಬೆಳೆ ಹಾನಿ ಪ್ರದೇಶಕ್ಕೆ ಶಾಸಕ ರಾಜಾ ವೇಣುಗೋಪಾಲ್ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.