ADVERTISEMENT

ಬೆಳೆಹಾನಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿ: ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರು

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 5:31 IST
Last Updated 9 ಸೆಪ್ಟೆಂಬರ್ 2025, 5:31 IST
   

ವಡಗೇರಾ: ‘ವಿಪರೀತ ಮಳೆಯಿಂದ ರೈತರ ಜಮೀನುಗಳಲ್ಲಿ ಬೆಳೆಹಾನಿಯಾಗಿದ್ದು, ಕೂಡಲೇ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕು’ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು. ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

‘ರೈತರು ಹತ್ತಿ ಬಿತ್ತನೆ ಮಾಡಿದ್ದು, ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ರೈತರಿಗೆ ಯೂರಿಯಾ ಗೊಬ್ಬರ ಅವಶ್ಯಕತೆ ಇದ್ದು, ಯಾವ ಕಾರಣಕ್ಕೂ ರೈತರಿಗೆ ಯೂರಿಯಾ ಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಬೇಕು’ ಎಂದರು.

‘ವಡಗೇರಾ ಪಟ್ಟಣದ ಆಸ್ಪತ್ರೆಯನ್ನು 30 ಬೆಡ್‌ಗಳಿಂದ 50 ಬೆಡ್‌ಗಳಿಗೆ ಮೇಲ್ದರ್ಜೆಗೇರಿಸಲು ಈಗಿರುವ ಆಸ್ಪತ್ರೆಯಲ್ಲಿ ಸಾಧ್ಯವಿಲ್ಲ. ಕೂಡಲೇ ಹೊಸ ಕಟ್ಟಡಕ್ಕಾಗಿ ಮಂಜೂರಾದ 3.5 ಎಕರೆ ಜಮೀನಿನಲ್ಲಿ ನೂತನ ಕಟ್ಟಡದ ಕಾಮಗಾರಿಗೆ ಚಾಲನೆ ನೀಡಲು ಕ್ರಮವಹಿಸಬೇಕು’ ಎಂದು ಸೂಚಿಸಿದರು.

ADVERTISEMENT

‘ಅನುದಾನಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವರೊಂದಿಗೆ ಮಾತನಾಡಿದ್ದೇನೆ, ಮುಂದಿನ ದಿನಗಳಲ್ಲಿ ಬೇಕಾದ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಈಗಿರುವ ಅನುದಾನದಲ್ಲಿ ಕೆಲಸ ಪ್ರಾರಂಭಿಸಿ’ ಎಂದು ಸೂಚಿಸಿದರು. ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸುವ ಕುರಿತು ಲಿಖಿತ ರೂಪದಲ್ಲಿ ಮಾಹಿತಿ ನೀಡಿಲು ಸಂಬಂಧಿಸಿದ ಅಧಿಕಾರಿಗೆ ತಿಳಿಸಿದರು. 

ಪುರುಷ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆಯಿದ್ದು, ಅದನ್ನು ಹೋಗಲಾಡಿಸಲು ಜಾಗೃತಿ ಅವಶ್ಯ. ಜನರಲ್ಲಿ ಜಾಗೃತಿ ಮೂಡಿಸಿಸುವ ಕೆಲಸ ಮಾಡಬೇಕು ಎಂದರು. ತಾ.ಪಂ ಇಒ ಮಲ್ಲಿಕಾರ್ಜುನ ಸಂಗ್ವಾರ, ತಹಶೀಲ್ದಾರ್‌ ಮಂಗಳಾ, ಯಾದಗಿರಿ ತಾ.ಪಂ ಇಒ ಮಾಹದೇವ ಬಾಗ್ಲಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಅಧಿಕಾರಿಗಳ ಗೈರು; ಅಸಮಾಧಾನ ಪಟ್ಟಣದ ತಾ.ಪಂ ಕಚೇರಿ ಆವರಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಗೈರಾದ ಬಿಇಒ ಅವರಿಗೆ ಕೂಡಲೇ ನೋಟಿಸ್‌ ನೀಡುವಂತೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅಧಿಕಾರಿಗಳಿಗೆ ಸೂಚಿಸಿದರು. ಇನ್ನು ಯಾದಗಿರಿ ತಹಶೀಲ್ದಾರ್‌ ಅವರು ಗೈರಾದ ಕಾರಣ ಅವರಿಗೆ ಕರೆ ಮಾಡಿ ಇಂಥ ಮಹತ್ವದ ಸಭೆಗೆ ಹಾಜರಾಗದಿದ್ದರೆ ನಿಮ್ಮಿಂದ ಏನು ಅಭಿವೃದ್ಧಿ ನಿರೀಕ್ಷೆ ಮಾಡಲು ಸಾಧ್ಯ ಎಂದು ಶಾಸಕ ಚೆನ್ನಾರೆಡ್ಡಿ ತುನ್ನೂರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.