ಯಾದಗಿರಿ: ‘ರಾಜ್ಯ ಸರ್ಕಾರದ ಚರ್ಮ ದಪ್ಪವಾಗಿದ್ದು, ಎಷ್ಟೇ ಜೋರಾಗಿ ತಿವಿದರೂ ಎಚ್ಚರವಾಗುತ್ತಿಲ್ಲ. ಹೆಚ್ಚಿನ ಬೆಳೆ ಪರಿಹಾರಕ್ಕಾಗಿ ಸಮಯ ಬಂದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು’ ಎಂದು ಶರಣಗೌಡ ಕಂದಕೂರ ಎಚ್ಚರಿಸಿದರು.
ಗುರುಮಠಕಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡ ರೈತರ ಜಮೀನುಗಳಿಗೆ ಸೋಮವಾರ ಭೇಟಿ ನೀಡಿ ಅವರು ಮಾತನಾಡಿದರು.
‘ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಾಗಿ ಬೆಳೆಹಾನಿಯ ಸಮೀಕ್ಷೆ ನಡೆಯುತ್ತಿದೆ ಎಂದು ಎಸಿ ರೂಮ್‌ನಲ್ಲಿ ಕುಳಿತು ಹೇಳುತ್ತಿದ್ದಾರೆ. ಆದರೆ, ಬೆರಳೆಣಿಕೆಯಷ್ಟು ಅಧಿಕಾರಿಗಳು ಸಮೀಕ್ಷೆ ಕಾರ್ಯ ಮಾಡುತ್ತಿದ್ದಾರೆ. ಇನ್ನೂ ಕೆಲವರು ರೈತರಿಗೆ ಫೋಟೊಗಳನ್ನು ತಂದು ಕೊಡುವಂತೆ ಸೂಚಿಸುತ್ತಿದ್ದಾರೆ. ಇಂತಹದ್ದು ನೋಡಿದರೆ ಸಮೀಕ್ಷೆ ಹೇಗೆ ನಡೆಯುತ್ತಿದೆ ಎಂಬುದು ಗೊತ್ತಾಗುತ್ತಿದೆ’ ಎಂದು ಕಿಡಿಕಾರಿದರು.
‘ಎನ್‌ಡಿಆರ್‌ಎಫ್ ನಿಯಮದ ಅನುಸಾರ ಸರ್ಕಾರ ಎರಡು ಹೆಕ್ಟೇರ್‌ಗೆ ₹8,500 ಮಾತ್ರ ನೀಡುತ್ತದೆ. ಪರಿಹಾರ ಈ ಹಣ ಜಮೀನಿನಲ್ಲಿ ಬೆಳೆದ ಕಳೆ ತೆಗೆಯಲೂ ಸಾಲುವುದಿಲ್ಲ. ಸಮೀಕ್ಷೆ ಕಾರ್ಯ ಇನ್ನೂ ಪ್ರಗತಿಯಲ್ಲಿದೆ. ವರದಿ ಬಂದ ತಕ್ಷಣವೇ ನನ್ನ ಕ್ಷೇತ್ರದಲ್ಲಿಯಾದ ಹಾನಿಯ ಕುರಿತು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕಂದಾಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರುತ್ತೇನೆ. ಹೆಚ್ಚಿನ ಪರಿಹಾರಕ್ಕೂ ಒತ್ತಾಯ ಮಾಡುತ್ತೇನೆ’ ಎಂದು ಭರವಸೆ ನೀಡಿದರು.
ಅಳಲು ತೋಡಿಕೊಂಡ ರೈತರು: ಶಾಸಕರು ಮತಕ್ಷೇತ್ರದ ಕೌಳೂರು, ಮಲ್ಹಾರ್, ಸಾವೂರು, ಆನೂರ.ಕೆ, ಆನೂರು ಬಿ. ಸೇರಿದಂತೆ ಇತರೆ ಗ್ರಾಮಗಳಲ್ಲಿನ ಬೆಳೆಹಾನಿಯಾದ ಜಮೀನುಗಳಿಗೆ ಭೇಟಿ ನೀಡಿದರು. ಬೆಳೆ ಕಳೆದುಕೊಂಡು ರೈತರು ತಮ್ಮ ಅಳಲು ತೋಡಿಕೊಂಡರು.
‘ನಮ್ಮ ಮಳೆ ನೀರು ನಿಂತು ಬೆಳೆಗಳು ಸರ್ವನಾಶವಾಗಿ, ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಬೆಳೆಗಾಗಿ ಮಾಡಿದ್ದ ಸಾಲ ಹೇಗೆ ತೀರಿಸುವುದು ಗೊತ್ತಾಗುತ್ತಿಲ್ಲ’ ಎಂದು ರೈತ ಮಹಾದೇವಪ್ಪ ಅಲವತ್ತುಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ‘ರೈತರ ಪರಿಸ್ಥಿತಿಯ ನಿಜಾಂಶ ತಿಳಿಯಲು ಪ್ರತಿಯೊಂದು ಹಳ್ಳಿಗಳಿಗೆ ಭೇಟಿ ನೀಡಬೇಕು. ಯಾವುದೇ ಗ್ರಾಮಗಳ ಜಮೀನಿನಲ್ಲಿ ಹಾಳಾದ ಬೆಳೆ ಸಮೀಕ್ಷೆಯಿಂದ ಕೈಬಿಡಬೇಡಿ’ ಎಂದು ಸ್ಥಳದಲ್ಲಿದ್ದ ತಹಶೀಲ್ದಾರ್ ಸುರೇಶ ಅಂಕಲಗಿ, ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸೂಗುರ ಅವರಿಗೆ ಸೂಚಿಸಿದರು.
ಕೆಲವು ರೈತರು ತಮ್ಮ ಜಮೀನಿನಲ್ಲಿನ ಬೆಳೆಗಳ ಫೋಟೊ ತೆಗೆದು ಅಧಿಕಾರಿಗಳಿಗೆ ಕಳುಹಿಸಿದ್ದಾಗಿ ಶಾಸಕರ ಗಮನಕ್ಕೆ ತಂದರು. ಇದರಿಂದ ಸಿಟ್ಟಾದ ಶಾಸಕ ಕಂದಕೂರ, ‘ಕೃಷಿ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳ ನಡುವಿನ ಸಮನ್ವಯತೆ ಕಾರಣದಿಂದಾಗಿ ರೈತರು ತೊಂದರೆ ಎದುರಿಸುತ್ತಿದ್ದಾರೆ. ಕೆಡಿಪಿ ಸಭೆಯಲ್ಲಿ ಜಿಲ್ಲಾಧಿಕಾರಿ ಬೆಳೆ ಸಮೀಕ್ಷೆ ಗಂಭೀರವಾಗಿ ನಡೆಯುತ್ತಿದೆ ಎಂದಿದ್ದಾರೆ. ಇದೇ ನಾ ಗಂಭೀರತೆ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಶ್ಚಂದ್ರ ಕಟಕಟಿ, ಪ್ರಮುಖರಾದ ಮಲ್ಲಣಗೌಡ ಕೌಳೂರು, ಅಜಯರೆಡ್ಡಿ ಎಲ್ಹೇರಿ, ಶರಣಗೌಡ ಕಾರೆಡ್ಡಿ, ರವಿಗೌಡ ಕಾರೆಡ್ಡಿ ಮಲ್ಹಾರ, ವೆಂಕಟರೆಡ್ಡಿ ಕೌಳೂರು, ಲಕ್ಷ್ಮಣ ನಾಯಕ ಕೂಡ್ಲೂರು, ಸಿದ್ದಣಗೌಡ, ಸಿದ್ದರಾಮರೆಡ್ಡಿಗೌಡ ಲಿಂಗೇರಿ, ಸಂಗಮೇಶ ಲಿಂಗೇರಿ, ಸೋಮರೆಡ್ಡಿ, ಮೈಪಾಲರೆಡ್ಡಿ ಸಾವೂರ, ಬಂಧುಗೌಡ, ರುದ್ರಪ್ಪಗೌಡ ಆನೂರ ಕೆ., ಆಶಪ್ಪ ಆನೂರ ಬಿ., ಬಸರಡ್ಡಿಗೌಡ ಹೆಗ್ಗಣಗೇರಾ ಉಪಸ್ಥಿತರಿದ್ದರು.
ರೈತರು ಕ್ಷೇತ್ರದ ಜನರ ಒಳಿತಾಗಿ ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ. ನವರಾತ್ರಿಯಲ್ಲಿ ದೇವಿಯ ಕೃಪೆಯಾಗಲಿ ಎಂದು ಬರಿಗಾಲಲ್ಲಿ ಒಂಬತ್ತು ದಿನ ದೇವಿಯ ಸ್ಮರಿಸುತ್ತಿದ್ದೇನೆ.- ಶರಣಗೌಡ ಕಂದಕೂರ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.