ADVERTISEMENT

ಯಾದಗಿರಿ | 10 ದಿನಗಳಲ್ಲಿ ಬೆಳೆಹಾನಿ ವರದಿ ಸಲ್ಲಿಸಿ: ಅಧಿಕಾರಿಗಳಿಗೆ ಸಿಎಂ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 5:20 IST
Last Updated 9 ಸೆಪ್ಟೆಂಬರ್ 2025, 5:20 IST
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಡಿಯೊ ಕಾನ್ಫರೆನ್ಸ್‌ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಜಿಲ್ಲಾಧಿಕಾರಿ ಹರ್ಷಲ್ ಬೋಯರ್, ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ ಸೇರಿ ಹಲವರು ಪಾಲ್ಗೊಂಡಿದ್ದರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಡಿಯೊ ಕಾನ್ಫರೆನ್ಸ್‌ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಜಿಲ್ಲಾಧಿಕಾರಿ ಹರ್ಷಲ್ ಬೋಯರ್, ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ ಸೇರಿ ಹಲವರು ಪಾಲ್ಗೊಂಡಿದ್ದರು   

ಯಾದಗಿರಿ: ‘ಬೆಳೆ ಹಾನಿಗೆ ಸಂಬಂಧಿಸಿದ ಜಂಟಿ ಸಮೀಕ್ಷೆಯನ್ನು ದೃಢೀಕರಿಸಿ, 10 ದಿನಗಳ ಒಳಗೆ ಸಮೀಕ್ಷೆಯ ವರದಿಯನ್ನು ಸಲ್ಲಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದಾದ್ಯಂತ ಅತಿವೃಷ್ಟಿಯಿಂದಾದ ಹಾನಿ ಹಾಗೂ ತೆಗೆದುಕೊಂಡ ಕ್ರಮಗಳ ಕುರಿತು ವಿಡಿಯೊ ಕಾನ್ಫರೆನ್ಸ್ ಮೂಲಕ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಪೂರ್ವ ಮುಂಗಾರು ಮಳೆಯಿಂದಾದ ಕೃಷಿ, ತೋಟಗಾರಿಕೆ ಬೆಳೆ ಹಾನಿ, ಮನೆ ಹಾನಿ, ಪ್ರವಾಹ, ಸಿಡಿಲಿನಿಂದಾದ ಜೀವಹಾನಿ, ಜಾನುವಾರು ಪ್ರಾಣ ಹಾನಿ, ಪರಿಹಾರ ವಿತರಣೆ, ವಿವಿಧ ಜಲಾಶಯಗಳ ದುರಸ್ತಿ ಇರುವ ಕ್ರಸ್ಟ್ ಗೇಟ್‌ಗಳ ಮಾಹಿತಿ, ರೈತರಿಗೆ ಅವಶ್ಯಕ ಬೀಜ, ಗೊಬ್ಬರ, ಕೀಟನಾಶಕಗಳ ಬೇಡಿಕೆ, ರಸ್ತೆ ಹಾಗೂ ಮೂಲಸೌಕರ್ಯಗಳ ಹಾನಿ ಕುರಿತು ಮಾಹಿತಿ ಪಡೆದರು.

ADVERTISEMENT

‘10 ದಿನಗಳ ಒಳಗೆ ಸಮೀಕ್ಷೆ ವರದಿ ಸಲ್ಲಿಸಬೇಕು. ಮನೆಹಾನಿ, ಪ್ರಾಣ ಹಾನಿ, ಜಾನುವಾರು ಹಾನಿ ಪ್ರಕರಣಗಳಲ್ಲಿ ತಕ್ಷಣ ಪರಿಹಾರ ಕಲ್ಪಿಸಬೇಕು. ರೈತರಿಗೆ ಬೀಜ, ಗೊಬ್ಬರ, ಕೀಟನಾಶಕಗಳ ಪೂರೈಕೆ ಬಗ್ಗೆಯೂ ಅವಶ್ಯಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

‘ಹಿಂಗಾರಿ ಬಿತ್ತನೆಗೂ ಸಿದ್ಧತೆ ಮಾಡಿಕೊಳ್ಳಬೇಕು. ಅವಶ್ಯಕತೆ ಇರುವಲ್ಲಿ, ಜನಸಂದಣಿ, ವ್ಯಾಪಾರ ವಹಿವಾಟು ಇರುವಕಡೆ ಸ್ಥಳವನ್ನು ನಂದಿನಿ ಪಾರ್ಲರ್‌ಗಳಿಗೆ ಗುರುತಿಸಿ ನೀಡಬೇಕು’ ಎಂದು ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆದ ಹಾನಿ ಕುರಿತು ಮಾಹಿತಿ ನೀಡಿ, ‘ಬೆಳೆ ಹಾನಿಗೆ ಸಂಬಂಧಿಸಿದಂತೆ ಸಮೀಕ್ಷೆ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ರಸ್ತೆಗಳು ಹೆಚ್ಚಿನ ರೀತಿಯಲ್ಲಿ ಹಾನಿಯಾಗಿದ್ದು, ಲಭ್ಯ ಇರುವ ಅನುದಾನವನ್ನು ಬಳಸಿಕೊಳ್ಳಲಾಗುತ್ತಿದೆ. ಇನ್ನೂ ಹೆಚ್ಚಿನ ಅನುದಾನದ ಅವಶ್ಯಕತೆ ಬೀಳಬಹುದು’ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Quote - ಬೆಳೆಹಾನಿ ಸಮೀಕ್ಷೆಯು ಐದು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಹಾನಿಯಾಗಿರುವ ರಸ್ತೆಗಳ ದುರಸ್ತಿಗಾಗಿ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇರಿಸಲಾಗಿದೆ ಶರಣಬಸಪ್ಪ ದರ್ಶನಾಪುರ ಜಿಲ್ಲಾ ಉಸ್ತುವಾರಿ ಸಚಿವ

Cut-off box -  ‘ಪಡಿತರ ಅಕ್ಕಿ: ಅಕ್ರಮಕ್ಕೆ ಕಡಿವಾಣ’ ‘ಬಡವರಿಗಾಗಿ ಜಾರಿಗೆ ತಂದಿರುವ ಪಡಿತರ ಯೋಜನೆ ದುರುಪಯೋಗ ಆಗಬಾರದು. ಅದು ಅರ್ಹ ಫಲಾನುಭವಿಗಳನ್ನು ತಲುಪಬೇಕು. ಹೀಗಾಗಿ ಜಿಲ್ಲೆಯಲ್ಲಿ ಪಡಿತರ ಅಕ್ಕಿಯ ಅಕ್ರಮ ಮಾರಾಟ ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಜಿಲ್ಲಾ ಆಡಳಿತ ಮುಂದಾಳತ್ವ ವಹಿಸಿ ದಾಳಿ ಮಾಡಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು. ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ಕೆಲವೆಡೆ ಅಕ್ರಮ ನಡೆದಿರುವುದು ಗೊತ್ತಾಗಿ ಅವರ ಡೀಲರ್‌ಶಿಪ್‌ ಸಹ ರದ್ದು ಮಾಡಲಾಗಿದೆ. ಕಳಪೆ ಗುಣಮಟ್ಟ ಎಂಬ ಕಾರಣಕ್ಕೆ ಪಡಿತರ ಅಕ್ಕಿ ಮಾರುವುದಿಲ್ಲ. ಜಿಲ್ಲೆಯಲ್ಲಿ ಯಥೇಚ್ಛ ಪ್ರಮಾಣದಲ್ಲಿ ಅಕ್ಕಿ ಬೆಳೆಯುವುದರಿಂದ ಕೆಲವರು ಪಡಿತರ ಅಕ್ಕಿಯನ್ನು ಮಾರಿ ಸೋನಾ ಮಸೂರಿ ಅಕ್ಕಿ ಖರೀದಿಸುತ್ತಾರೆ. ಕಳಪೆಯಾಗಿದ್ದರೆ ಜನರು ಬೀದಿಗೆ ಇಳಿದು ಪ್ರತಿಭಟಿಸುತ್ತಿದ್ದರು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ‘ಅಕ್ಕಿಯ ಬದಲು ಡಿಬಿಟಿ ಮೂಲಕ ಹಣ ಹಾಕುವ ಬಗ್ಗೆ ಎರಡು ಬಾರಿ ಸಚಿವ ಸಂಪುಟದಲ್ಲಿ ತೀರ್ಮಾನ ಆಗಿತ್ತು. ಹೈದರಾಬಾದ್‌ನ ಏಜೆನ್ಸಿಯೂ ಮುಂದೆ ಬಂದಿತ್ತು. ಅಷ್ಟರಲ್ಲಿ ಕೇಂದ್ರ ಸರ್ಕಾರ ಅಕ್ಕಿ ಪೂರೈಸಿದ್ದರಿಂದ ಅದನ್ನು ಕೈಬಿಡಲಾಯಿತು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.