ADVERTISEMENT

ಕಲಬುರ್ಗಿಯಲ್ಲಿ ಸಾಂಸ್ಕೃತಿಕ ಅಕಾಡೆಮಿ ಸ್ಥಾಪಿಸಿ

ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಅಧ್ಯಕ್ಷ ವಿಜಯಕುಮಾರ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 3:37 IST
Last Updated 27 ಜುಲೈ 2021, 3:37 IST
ಸುರಪುರದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಕಾರ್ಯಕ್ರಮವನ್ನು ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ ಉದ್ಘಾಟಿಸಿದರು
ಸುರಪುರದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಕಾರ್ಯಕ್ರಮವನ್ನು ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ ಉದ್ಘಾಟಿಸಿದರು   

ಸುರಪುರ: ‘ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರ್ಗಿಯಲ್ಲಿ ಸಾಂಸ್ಕೃತಿಕ ಅಕಾಡೆಮಿ ಸ್ಥಾಪನೆ ಮಾಡುವುದರ ಮೂಲಕ ರಾಜ್ಯ ಸರ್ಕಾರ ಈ ಭಾಗಕ್ಕೆ ಸಾಂಸ್ಕೃತಿಕ ನ್ಯಾಯ ಒದಗಿಸಬೇಕು’ ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ರಾಜ್ಯ ಸಮಿತಿ ಅಧ್ಯಕ್ಷ ವಿಜಯಕುಮಾರ ಸೋನಾರೆ ಒತ್ತಾಯಿಸಿದರು.

ರಂಗಂಪೇಟೆಯ ಖಾದಿ ಕೇಂದ್ರದ ಆವರಣದಲ್ಲಿ ಸೋಮವಾರ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

‘ಕಳೆದ ಹಲವು ವರ್ಷಗಳಿಂದ ಈ ಭಾಗದ ರಂಗಭೂಮಿ, ಜನಪದ, ಸಂಗೀತ, ನೃತ್ಯ, ಬಯಲಾಟ, ಬುಡಕಟ್ಟು ಸೇರಿದಂತೆ ಇತರೆ ಪ್ರಕಾರದ ಕಲಾವಿದರು ಸೌಲಭ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಂದ ವಂಚಿತರಾಗುತಿದ್ದಾರೆ. ರಾಜ್ಯ, ರಾಷ್ಟ್ರ ಮಟ್ಟದ ಕಲಾವಿದರಿದ್ದು ಅವರನ್ನು ಗುರುತಿಸುವಲ್ಲಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಲೆ ಬಂದಿವೆ’ ಎಂದು ಆರೋಪಿಸಿದರು.

ADVERTISEMENT

ಒಕ್ಕೂಟದ ಉಪಾಧ್ಯಕ್ಷ ಡಿಂಗ್ರಿ ನರೇಶ ಮಾತನಾಡಿ, ‘ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಚಿತ್ರಕಲಾ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರ ಮಾದರಿಯಲ್ಲಿ ರಂಗ ಶಿಕ್ಷಕರು ಹಾಗೂ ಸಂಗೀತ ಶಿಕ್ಷಕರನ್ನು ನೇಮಿಸಬೇಕು. ಸಮಾಜ ಕಲ್ಯಾಣ ಇಲಾಖೆ ಹಾಗೂ ಇತರೆ ಇಲಾಖೆಗಳಿಂದ ನಡೆಯುತ್ತಿರುವ ರಾಜ್ಯದ ಎಲ್ಲಾ ವಸತಿ ಶಾಲೆಗಳಲ್ಲಿ ಜನಪದ ಶಿಕ್ಷಕರನ್ನು ನೇಮಿಸಬೇಕು’ ಎಂದು ಒತ್ತಾಯಿಸಿದರು.

ಕಾರ್ಯದರ್ಶಿ ಪ್ರಕಾಶ ಅಂಗಡಿ ಮಾತನಾಡಿ, ‘ಸಾಂಸ್ಕೃತಿಕ ಉದ್ದೇಶಕ್ಕೆ ಕ್ರಿಯಾಯೋಜನೆ ರೂಪಿಸಿ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ, ಜಿಲ್ಲಾ ಉತ್ಸವಗಳನ್ನು ಆಚರಿಸಬೇಕು. ಹಂಪಿ ಉತ್ಸವ ಮಾದರಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ನಡೆಸಬೇಕು. ಸಂತ ಶಿಶುನಾಳ ಶರೀಫರ ಕ್ಷೇತ್ರದ ಅಭಿವೃದ್ಧಿ ಮಾದರಿಯಲ್ಲಿ ಕಡಕೋಳ ಮಡಿವಾಳಪ್ಪನವರ ಕ್ಷೇತ್ರ ಅಭಿವೃದ್ಧಿ ಪಡಿಸಬೇಕು’ ಎಂದು ಆಗ್ರಹಿಸಿದರು.

ಕಲಾವಿದರಾದ ಶಿವಪ್ಪ ಹೆಬ್ಬಾಳ ಕೊಡೆಕಲ್, ಲಕ್ಷ್ಮಣ ಗುತ್ತೇದಾರ, ಪ್ರಮುಖರಾದ ಬಸಪ್ಪ ಹಣಮಸಾಗರ, ವಿಶಾಲ ಶಿಂಧೆ, ಶಂಕರ ಶಾಸ್ತ್ರಿ, ಯಲ್ಲಪ್ಪ ಭಜಂತ್ರಿ, ಮನೋಹರ ವಿಶ್ವಕರ್ಮ, ಹಣಮಂತ್ರಾಯ ದೇವತ್ಕಲ್, ಮಹಾಂತೇಶ ಗಿಂಡಿ, ಶರಣಪ್ಪ ಮದ್ನಾಳ, ಕಲ್ಯಾಣ ಶೆಟ್ಟಿ ಅಂಗಡಿ, ಸುಭಾಶ, ಪ್ರವೀಣ ಜಕಾತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.