ಸುರಪುರ: ಈ ವರ್ಷ ಸುರಿದ ಉತ್ತಮ ಮಳೆಯಿಂದ ಸೀತಾಫಲ ಹಣ್ಣಿನ ಬಂಪರ್ ಫಸಲು ಬಂದಿದೆ. ನಗರದ ಬಸ್‍ನಿಲ್ದಾಣ, ಗಾಂಧಿವೃತ್ತ, ವಲ್ಲಭಭಾಯಿ ಕಟ್ಟೆ, ಮಾರುಕಟ್ಟೆ ಇತರ ಪ್ರದೇಶ ಸೇರಿದಂತೆ ಗ್ರಾಮಗಳಲ್ಲೂ ಮಾರಾಟ ಕಂಡು ಬರುತ್ತಿದೆ.
ಹೆಚ್ಚಿನ ಇಳುವರಿ ಬಂದಿದ್ದರೂ ದರದಲ್ಲಿ ಇಳಿಕೆಯಾಗಿಲ್ಲ. ಒಂದು ಹಣ್ಣಿಗೆ ₹ 5 ರಿಂದ ₹ 25ರವರೆಗೂ ಇದೆ. 100 ಹಣ್ಣಿಗೆ ₹ 500 ರಿಂದ ₹ 1 ಸಾವಿರದವರೆಗೆ ಬಿಕರಿಯಾಗುತ್ತಿವೆ. ಹೆಚ್ಚಿನ ಬೆಲೆಯಿಂದ ವ್ಯಾಪಾರಿಗಳ ಜೇಬು ತುಂಬುತ್ತಿದೆ.
ಬೆಲೆ ಹೆಚ್ಚಳದಿಂದ ಹಣ್ಣು ಪ್ರಿಯರಿಗೆ ನಿರಾಸೆಯಾಗಿದೆ. ಆದರೂ ತಮಗೆ ಇಷ್ಟವಾದ ಸೀತಾಫಲ ಸವಿಯಲು ಖರೀದಿ ಮಾಡುತ್ತಿರುವ ದೃಶ್ಯ ಎಲ್ಲೆಡೆ ಕಂಡು ಬರುತ್ತಿದೆ. ಕೆಲವರು ಪುಟ್ಟಿಗಟ್ಟಲೆ ಹಣ್ಣುಗಳನ್ನು ಖರೀದಿಸಿ ಕುಟುಂಬದ ಸದಸ್ಯರಿಗೆ, ತಮ್ಮ ಬಂಧು ಬಾಂಧವರಿಗೆ ಕಳಿಸುತ್ತಿದ್ದಾರೆ.
ಕಪ್ಪು ಬಣ್ಣದ ಬೀಜಗಳಿಂದ ಕೂಡಿರುವ, ಬಿಳಿ ತಿರುಳಿನ ಹಸಿರು ಬಣ್ಣದ ಹಣ್ಣು ಸೀತಾಫಲ. ಅಬಾಲವೃದ್ಧರಾಗಿ ಎಲ್ಲರಿಗೂ ಈ ಹಣ್ಣು ಇಷ್ಟ. ಅರಣ್ಯ ಬೆಳೆಯಾದ ಇದು ಹೆಚ್ಚಾಗಿ ಬೆಟ್ಟ ಗುಡ್ಡಗಳಲ್ಲಿ ಬೆಳೆಯುತ್ತದೆ. ಸುರಪುರ ಎಳು ಸುತ್ತು ಬೆಟ್ಟ ಗುಡ್ಡಗಳಿಂದ ಅವೃತ್ತವಾಗಿದೆ. ಈ ಪ್ರದೇಶದಲ್ಲಿ ಸೀತಾಫಲ ಹೆಚ್ಚು ಬೆಳೆಯುತ್ತದೆ.
ಸೀತಾಫಲ ಬೆಳೆಯುವ ರಾಜ್ಯದ ಪ್ರಮುಖ ನಗರಗಳಲ್ಲಿ ಸುರಪುರವೂ ಒಂದು. ಮನೆ ಮನೆಗೂ ತೆರಳಿ ಬಿಕರಿಯಾಗುವ ಈ ಹಣ್ಣು ಹೊರ ರಾಜ್ಯಗಳಿಗೂ ರವಾನೆಯಾಗುತ್ತದೆ.
ಬೆಟ್ಟ ಗುಡ್ಡಗಳಲ್ಲಿ ಇರುವ ಅಳಿಲು ಎಂಬ ಚಿಕ್ಕ ಪ್ರಾಣಿ ಸೀತಾಫಲವನ್ನು ತಿಂದು ಬೀಜವನ್ನು ಅಲ್ಲಲ್ಲಿ ಬೀಸಾಡುವುದರಿಂದ ಸೀತಾಫಲ ಎಲ್ಲೆಡೆ ಬೆಳೆಯುತ್ತದೆ. ನೈಸರ್ಗಿಕ ಬೆಳೆಯಾದ್ದರಿಂದ ಕ್ರಿಮಿನಾಶಕ ಸಿಂಪರಣೆಯ ಭಯವಿಲ್ಲ. ಬೆಟ್ಟ, ಗುಡ್ಡಗಳು ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವುದರಿಂದ ಸೀತಾಫಲವೂ ಅರಣ್ಯ ಇಲಾಖೆಗೆ ಒಳಪಡುತ್ತದೆ. ಎರಡು ವರ್ಷಕ್ಕೊಮ್ಮೆ ಇಲಾಖೆ ಟೆಂಡರ್ ಕರೆದು ವಹಿವಾಟಿಗೆ ಅನುಕೂಲ ಮಾಡಿಕೊಡುತ್ತದೆ.
ಪೌರಾಣಿಕ ಹಿನ್ನೆಲೆ: ವನವಾಸದ ಸಮಯದಲ್ಲಿ ಸೀತೆಗೆ ಹಸಿವಾಗುತ್ತದೆ. ಅನತಿ ದೂರದಲ್ಲಿ ಸೀತೆಗೆ ಹಣ್ಣಿನ ಗಿಡವೊಂದು ಕಾಣುತ್ತದೆ. ಶ್ರೀರಾಮ ಆ ಹಣ್ಣನ್ನು ಹರಿದು ಸೀತೆಗೆ ಕೊಡುತ್ತಾನೆ. ಹಣ್ಣಿನ ಸಿಹಿ ಮತ್ತು ಮಧುರತೆಗೆ ಸೀತೆ ಸಂತೃಪ್ತಳಾಗುತ್ತಾಳೆ. ಶ್ರೀರಾಮ ಆ ಹಣ್ಣಿಗೆ ಸೀತಾಫಲ ಎಂದು ಹೆಸರಿಸುತ್ತಾನೆ ಎಂಬುದು ಪ್ರತೀತಿ. ಅದೇ ರೀತಿ ರಾಮಫಲ ಮತ್ತು ಲಕ್ಷ್ಮಣ ಫಲಗಳು ಇವೆ. ಆದರೆ ಈ ಭಾಗದಲ್ಲಿ ಹೆಚ್ಚಾಗಿ ಸೀತಾಫಲ ಕಂಡು ಬರುತ್ತದೆ.
***
ನಮ್ಮ ಭಾಗದ ಸೀತಾಫಲ ಹೆಚ್ಚು ಪ್ರಸಿದ್ಧವಾಗಿದ್ದು, ಸೂಕ್ತ ಮಾರುಕಟ್ಟೆ ಕಲ್ಪಿಸಬೇಕು. ವ್ಯವಸ್ಥಿತ ಮಾರಾಟ ಜಾಲ ನಿರ್ವಹಣೆ ಮಾಡಬೇಕು. ಅರಣ್ಯ ಪ್ರದೇಶ ನಾಶವಾಗದಂತೆ ರಕ್ಷಿಸಬೇಕು.
-ಶಿವಶರಣ ಸಾಹು ಹಯ್ಯಾಳ, ರೈತ ಮುಖಂಡ, ಸುರಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.