
ಶಹಾಪುರ: ಸುರಪುರದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಮುಂಭಾಗದಲ್ಲಿ ಶಾಸಕರ ಬೆಂಬಲಿಗರು ದಲಿತ ಮುಖಂಡರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ತಾಲ್ಲೂಕಿನ ಹತ್ತಿಗೂಡೂರನ ಡಾ. ಬಿ.ಆರ್.ಅಂಬೇಡ್ಕರ್ ಸರ್ಕಲ್‌ನಲ್ಲಿ ಸಮತಾ ಸೈನಿಕ ದಳದ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿದರು.
ಸರ್ಕಲ್‌ನಲ್ಲಿ ಪ್ರತಿಭಟನಾಕಾರರು ಜಮಾಯಿಸಿ, ರಸ್ತೆ ತಡೆ ನಡೆಸಿದರು. ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ದಲಿತ ಮುಖಂಡರು, ಸಂವಿಧಾನ ಸಮರ್ಪಣೆಯ ದಿನದಂದು ಶಾಸಕರ ಬೆಂಬಲಿಗರು ದಲಿತ ಮುಖಂಡ ಮಾನಪ್ಪ ಕಟ್ಟಿಮನಿ ಅವರ ಮೇಲೆ ಹಲ್ಲೆ ಮಾಡಿದ್ದು ಖಂಡನೀಯ. ಕೂಡಲೇ ಶಾಸಕರು ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡಬೇಕು. ದಲಿತ ಮುಖಂಡರ ಮೇಲೆ ಗೂಂಡಾ ವರ್ತನೆ ತೋರಿದವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಒತ್ತಾಯಿಸಿರು.
ಪ್ರಕರಣ ದಾಖಲಿಸಿಕೊಂಡು ಕ್ರಮ ತೆಗೆದುಕೊಳ್ಳುವಲ್ಲಿ ವಿಳಂಬ ಮಾಡಿದರೆ, ಸುರಪುರ ಚಲೊ ಹೋರಾಟ ಹಮ್ಮಿಕೊಂಡು ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.
ಶಹಾಪುರ ಪಿಐ ಎಸ್.ಎಂ. ಪಾಟೀಲ ಅವರು ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿದ್ದರು. ಕೆಲ ಸಮಯ ಬಸ್ ಸಂಚಾರದಲ್ಲಿ ಅಡ್ಡಿಯಾಗಿದ್ದು, ಪ್ರಯಾಣಿಕರು ಪರದಾಡಿದರು.
ಪ್ರತಿಭಟನೆಯಲ್ಲಿ ಎಸ್‌ಎಸ್‌ಡಿ ಜಿಲ್ಲಾ ಅಧ್ಯಕ್ಷ ಮಾಹಾದೇವ ದಿಗ್ಗಿ, ಪ್ರಧಾನ ಕಾರ್ಯದರ್ಶಿ ಶರಣರಡ್ಡಿ ಹತ್ತಿಗೂಡೂರ, ವಿಭಾಗೀಯ ಅಧ್ಯಕ್ಷ ಮಾನಯ್ಯ ಹತ್ತಿಗೂಡೂರ, ಗೌರಾಧ್ಯಕ್ಷ ಮರೆಪ್ಪ ಪರಮೇಶ್ವರ, ಪ್ರಮುಖರಾದ ಮಹೇಂದ್ರಕುಮಾರ ದಿಗ್ಗಿ, ಭೀಮರಾಯ ಬಡಿಗೇರ, ಮಲ್ಲಯ್ಯ ಹೋಸಮನಿ, ಗುರಪ್ಪ ಸುರಪುರ, ಶರಣಪ್ಪ ಅನುವಾರ, ಶರಣಪ್ಪ, ಷಣ್ಮುಖಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.