ADVERTISEMENT

ಹಿಂಗಾರು ಹಂಗಾಮಿಗೆ ನೀರು ಅಲಭ್ಯ

ಆಲಮಟ್ಟಿಗೆ ಸೆ.13ರಿಂದಲೇ ಒಳಹರಿವು ಸ್ಥಗಿತ; ನಾರಾಯಣಪುರ ಜಲಾಶಯದಲ್ಲಿ ತಗ್ಗಿದ ನೀರಿನ ಸಂಗ್ರಹ

ಮಲ್ಲೇಶ್ ನಾಯಕನಹಟ್ಟಿ
Published 19 ಅಕ್ಟೋಬರ್ 2018, 19:46 IST
Last Updated 19 ಅಕ್ಟೋಬರ್ 2018, 19:46 IST
ಯಾದಗಿರಿ ಜಿಲ್ಲೆ ಹುಣಸಗಿ ತಾಲ್ಲೂಕಿನ ಬಳಿಯ ನಾರಾಯಣಪುರ ಜಲಾಶಯದಲ್ಲಿ ಶುಕ್ರವಾರ ಕಂಡುಬಂದ ನೀರಿನ ಮಟ್ಟ
ಯಾದಗಿರಿ ಜಿಲ್ಲೆ ಹುಣಸಗಿ ತಾಲ್ಲೂಕಿನ ಬಳಿಯ ನಾರಾಯಣಪುರ ಜಲಾಶಯದಲ್ಲಿ ಶುಕ್ರವಾರ ಕಂಡುಬಂದ ನೀರಿನ ಮಟ್ಟ   

ಯಾದಗಿರಿ: ನೆರೆಯ ವಿಜಯಪುರ ಜಿಲ್ಲೆಯ ಲಾಲ್‌ಬಹದ್ದೂರ್‌ ಶಾಸ್ತ್ರಿ ಸಾಗರ ಜಲಾಶಯದಲ್ಲಿ ನೀರಿನಮಟ್ಟ ದಿನಕ್ಕೆ ಕುಸಿಯುತ್ತಿರುವ ಪರಿಣಾಮ, ಜಿಲ್ಲೆಯ ಕೃಷ್ಣಾ ಅಚ್ಚುಕಟ್ಟು ಪ್ರದೇಶದ 15, 698 ಹೆಕ್ಟೇರ್‌ ಭೂಮಿಗೆ ಈ ಬಾರಿ ಹಿಂಗಾರು ಹಂಗಾಮು ಕೃಷಿಗೆ ನೀರಿನ ಕೊರತೆ ಉಂಟಾಗಲಿದೆ.

ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಭೀಮರಾಯನ ಗುಡಿ ಮುಖ್ಯ ಎಂಜಿನಿಯರ್ ಕೃಷ್ಣಗೌಡ ‘ಹಿಂಗಾರು ಹಂಗಾಮಿಗೆ ನೀರು ಹರಿಸಲು, ಅಗತ್ಯ ಇರುವಷ್ಟು ನೀರು ಜಲಾಶಯದಲ್ಲಿ ಲಭ್ಯವಿಲ್ಲ’ ಎಂಬುದಾಗಿ ಈಚೆಗೆ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

‘ಪ್ರಸಕ್ತ ಸಾಲಿನಲ್ಲಿ ಮಳೆಯ ಅಭಾವದಿಂದಾಗಿ ಆಲಮಟ್ಟಿ ಜಲಾಶಯಕ್ಕೆ ಸೆ.13ರಿಂದಲೇ ಒಳಹರಿವು ಸ್ಥಗಿತಗೊಂಡಿದೆ. ಇದರಿಂದ ನೀರಿನ ಸಂಗ್ರಹ ಕಡಿಮೆಯಾಗಿದೆ. ಈ ಎರಡೂ ಜಲಾಶಯಗಳಲ್ಲಿ ನೀರಿನ ಮಟ್ಟವನ್ನು ಎಂಡಿಡಿಎಲ್ ಮಟ್ಟಕ್ಕೆ ಕಾಯ್ದುಕೊಳ್ಳಬೇಕಿದೆ.

ADVERTISEMENT

492 ಮೀಟರ್‌ ಎತ್ತರದ ಒಟ್ಟು 33 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ನಾರಾಯಣಪುರ ಜಲಾಶಯದಲ್ಲಿ ಹೋದ ವರ್ಷ ಅ.19ರಂದು 32.936 ಟಿಎಂಸಿ ನೀರು ಸಂಗ್ರಹ ಇತ್ತು. ಆದರೆ, ಈ ಸಲ 28.168 ಟಿಎಂಸಿ ನೀರಿದೆ. ಅಂದರೆ ಈ ವರ್ಷ 4 ಟಿಎಂಸಿಯಷ್ಟು ನೀರಿನ ಕೊರತೆ ಉಂಟಾಗಿದೆ.

ಇದೇ ಸಮಯದಲ್ಲಿ ಹೋದ ವರ್ಷ ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ ಒಟ್ಟು 37,768 ಕ್ಯುಸೆಕ್‌ ಒಳಹರಿವು ಇತ್ತು. ಈ ಬಾರಿ 14,666ಕ್ಕೆ ತಗ್ಗಿದೆ. ಹೋದ ವರ್ಷ ಹೊರಹರಿವು ಕೇವಲ 862 ಕ್ಯುಸೆಕ್ ಇತ್ತು. ಏಕೆಂದರೆ ಹೆಚ್ಚು ಮಳೆಯಾಗಿದ್ದರಿಂದ ಬೆಳೆಗಳಿಗೆ ನೀರಿನ ಅಗತ್ಯ ಇರಲಿಲ್ಲ. ಆದರೆ, ಈ ಬಾರಿ ನೀರಿನ ಕೊರತೆ ಮಧ್ಯೆಯೂ 11,715 ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದ ಮುಂದೆ ನೀರಿನ ಕೊರತೆ ಉಂಟಾಗಲಿದೆ ಎಂಬುದಾಗಿ ಅಧಿಕಾರಿಗಳು ಹೇಳುತ್ತಾರೆ.

ನ.15ರಂದು ನೀರಾವರಿಗಾಗಿ ಜಲಾಶಯದಲ್ಲಿ ಉಳಿಯುವುದು ಕೇವಲ 2.01 ಟಿಎಂಸಿ ಅಡಿ ನೀರು ಮಾತ್ರ. ಅದನ್ನು ತುರ್ತು ಸಂದರ್ಭದಲ್ಲಿ ಬಳಸಲು ಕಾಯ್ದಿರಿಸಿದರೆ, ಹಿಂಗಾರು ಹಂಗಾಮಿಗೆ ಯಾವುದೇ ನೀರಿನ ಲಭ್ಯತೆ ಇರುವುದಿಲ್ಲ’ ಎಂಬುದಾಗಿ ಮುಖ್ಯ ಎಂಜಿನಿಯರ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರದಲ್ಲಿ ವಿವರಿಸಿದ್ದಾರೆ.

ಜಲಾಶಯಕ್ಕೆ ಹರಿಯಲಿರುವ 37 ಟಿಎಂಸಿ ನೀರು:

ಪ್ರಸಕ್ತ ಮಳೆಗಾಲದ ಅವಧಿಯಲ್ಲಿ 487 ಟಿಎಂಸಿ ಅಡಿ ನೀರು ಮಾತ್ರ ಆಲಮಟ್ಟಿ ಜಲಾಶಯಕ್ಕೆ ಹರಿದು ಬಂದಿದೆ. ಅದರಲ್ಲಿ 377 ಟಿಎಂಸಿ ಅಡಿ ನೀರು ನಾರಾಯಣಪುರ ಜಲಾಶಯಕ್ಕೆ ಹರಿಸಲಾಗಿದೆ. ಸೆ.13ರಿಂದ ಇಲ್ಲಿಯವರೆಗೆ 38 ಟಿಎಂಸಿ ಅಡಿ ನೀರನ್ನು ನಾರಾಯಣಪುರಕ್ಕೆ ಹರಿಸಲಾಗಿದ್ದು, ಇನ್ನೂ 37 ಟಿಎಂಸಿ ಅಡಿ ನೀರು ಹರಿಸಬೇಕಿದೆ’ ಎನ್ನುತ್ತಾರೆ ಅಧಿಕಾರಿಗಳು.

‘ಪ್ರತಿ ವರ್ಷವೂ ವಾರಾಬಂದಿಗೆ ಅನುಗುಣವಾಗಿ (14 ದಿನ ಚಾಲು, 12 ದಿನ ಬಂದ್) ಕಾಲುವೆಗಳಿಗೆ ನೀರು ಹರಿಸಲಾಗುತ್ತಿತ್ತು. ಈ ಬಾರಿ ಒಳಹರಿವು ಇರುವವರೆಗೂ ಜುಲೈ 17ರಿಂದ ಸೆ.13ರವರೆಗೆ ನಿರಂತರವಾಗಿ ನೀರು ಹರಿಸಲಾಗಿದೆ.

ಬಿಸಿಲಿನ ತೀವ್ರತೆ, ತೇವಾಂಶದ ಕೊರತೆ, ಹಿಂಗಾರು ಮಳೆ ಅನಿಶ್ಚಿತತೆ ಕಾರಣ ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆಗಳು ಒಣಗುವ ಹಂತಕ್ಕೆ ತಲುಪಿದ್ದವು. ರೈತರ ಒತ್ತಾಯದ ಮೇರೆಗೆ ವಾರಾಬಂದಿಿ ಅವಧಿಯಲ್ಲಿ ಕಡಿತಗೊಳಿಸಿ, ಸೆ.26ರಿಂದ 2 ದಿನಕ್ಕೆ ಇಳಿಸಲಾಗಿದೆ. ಸದ್ಯ ನ.14ರವರೆಗೆ ಮುಂಗಾರು ಹಂಗಾಮಿಗೆ ನಿರಂತರ ನೀರು ಹರಿಸಲಾಗುತ್ತಿದೆ. ಇದರಿಂದಾಗಿ ಎರಡೂ ಜಲಾಶಯಗಳಲ್ಲಿ ನೀರಿನ ಕೊರತೆ ಉಂಟಾಗಲಿದೆ.

ಅಂಕಿಅಂಶ
* 15,698 ಹೆಕ್ಟೇರ್‌ ಜಲಾಶಯ ವ್ಯಾಪ್ತಿ ನೀರಾವರಿ ಅಚ್ಚುಕಟ್ಟು ಪ್ರದೇಶ

* 132 ಕಿಲೋ ಮೀಟರ್ಜಲಾಶಯದಿಂದ ನದಿ ಮೂಲಕ ನೀರು ಹರಿಯುವ ಉದ್ದ

* 60 ಒಟ್ಟು ಕ್ರಸ್ಟ್‌ಗೇಟ್‌ಗಳ ಸಂಖ್ಯೆ

* 33.313 ಟಿಎಂಸಿ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ

* 28.168 ಟಿಎಂಸಿ ಸದ್ಯ ಈಗಿರುವ ನೀರು ಸಂಗ್ರಹ

* 0.203 ಟಿಎಂಸಿ ಡೆಡ್‌ ಸ್ಟೋರೇಜ್‌

ಮುಖ್ಯಾಂಶಗಳು
* ಆಲಮಟ್ಟಿ ಜಲಾಶಯಕ್ಕೆ ಹರಿದ ಕೇವಲ 487 ಟಿಎಂಸಿ ನೀರು

* ಹಿಂಗಾರು ಹಂಗಾಮಿನ ಕೃಷಿ ವ್ಯಾಪಯ ಭೂಮಿ 15, 698 ಹೆಕ್ಟೇರ್‌

* ನಾರಾಯಣಪುರ ಜಲಾಶಯಕ್ಕೆ 4 ಟಿಎಂಸಿಯಷ್ಟು ನೀರಿನ ಕೊರತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.