ADVERTISEMENT

ನಾರಾಯಣಪುರ ಎಡದಂಡೆ ‌ಮುಖ್ಯಕಾಲುವೆಯಲ್ಲಿ ಬಿರುಕು

ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 9:03 IST
Last Updated 7 ಜುಲೈ 2021, 9:03 IST
ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಯಲ್ಲಿ ಬಿರುಕು ಕಾಣಿಸಿಕೊಂಡಿರುವುದು
ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಯಲ್ಲಿ ಬಿರುಕು ಕಾಣಿಸಿಕೊಂಡಿರುವುದು   

ಹುಣಸಗಿ: ತಾಲ್ಲೂಕಿನ ಗಡಿಗ್ರಾಮ ವಾಗಿರುವ ಮಾಳನೂರು ಗ್ರಾಮದ ಬಳಿ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಅಚ್ಚುಕಟ್ಟು ಪ್ರದೇಶದ ರೈತರಿಗೆ ಮತ್ತೆ ಆತಂಕ ಉಂಟಾಗುವಂತೆ ಮಾಡಿದೆ.

ಮಾಳನೂರು ಗುಳಬಾಳ ಗ್ರಾಮದ ಮುಖ್ಯರಸ್ತೆಯಲ್ಲಿ ಹಾದು ಹೋಗಿರುವ ಈ ಎಡದಂಡೆ ಮುಖ್ಯ ಕಾಲುವೆಯ ಒಳಭಾಗದಲ್ಲಿ 40 ನೇ ಕಿ.ಮೀ ಬಳಿ ಅಲ್ಪ ಪ್ರಮಾಣದ ಬಿರುಕು ಕಂಡು ಬಂದಿದೆ. ಕಾಲುವೆಯಲ್ಲಿ ನೀರು ನಿಲುಗಡೆಗಾಗಿ ತಡೆಗೋಡೆಯ ಅಳವಡಿಸಿರುವ ಮುಂಭಾಗದಲ್ಲಿ ನೀರಿನ ಒತ್ತಡಕ್ಕೆ ಅಲ್ಪ ಪ್ರಮಾಣದ ಕಾಲುವೆ ಮೇಲ್ಭಾಗದ ಆರ್‌ಸಿಸಿ ಲೈನಿಂಗ್ ಪದರ
ಕಿತ್ತು ಹೋಗಿದೆ.

ಕೆಲ ವರ್ಷಗಳ ಹಿಂದೆ ಈ ಎಡದಂಡೆ ಮುಖ್ಯ ಕಾಲುವೆಯನ್ನು ನವೀಕರಿಸಲಾಗಿತ್ತು. ಆದರೆ ಅಲ್ಲಲ್ಲಿ ಪದೇ ಪದೇ ಇಂತಹ ಪ್ರಕರಣಗಳು ಕಂಡು ಬರುತ್ತಲೆ ಇವೆ. ಆದ್ದರಿಂದ ನಾಲ್ಕು ಜಿಲ್ಲೆಗಳ ಲಕ್ಷಾಂತರ ರೈತರಿಗೆ ನೀರು ಒದಗಿಸುವ ಈ ಮುಖ್ಯ ಕಾಲುವೆಯ ಕುರಿತು ಅಧಿಕಾರಿಗಳು ತೀವ್ರ ನಿಗಾ ವಹಿಸಬೇಕು. ರೈತರಿಗೆ ಸಮರ್ಪಕ ನೀರು ಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಜುಮ್ಮಣ್ಣ ಬಲಶೆಟ್ಟಿಹಾಳ ಒತ್ತಾಯಿಸಿದ್ದಾರೆ.

ADVERTISEMENT

ಈ ಕುರಿತು ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಶಂಕರ್ ನಾಯ್ಕೋಡಿ ಮಾತನಾಡಿ, ಇದರ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಒಂದು ವೇಳೆ ಕಾಲುವೆಗೆ ನೀರು ಹರಿಸಿದರೂ ಯಾವುದೆ ತೊಂದರೆ ಆಗುವದಿಲ್ಲ. ಅಚ್ಚುಕಟ್ಟು ಪ್ರದೇಶದ ರೈತರು ಯಾವುದೆ ಆತಂಕಕ್ಕೆ ಒಳಗಾಗಬಾರದು ಎಂದು ಹೇಳಿದ್ದಾರೆ.

2012ರಲ್ಲಿ ಈ ಭಾಗದಲ್ಲಿ ಕಾಲುವೆಗೆ ಆರ್‌ಸಿಸಿ ಲೈನಿಂಗ್ ಹಾಕಲಾಗಿತ್ತು. ಈ ಭಾಗದಲ್ಲಿ ಕಾಲುವೆ ಹರಿಯುವ ಸ್ಥಳದ ಬಳಿ ಆಳವಾದ ಕಠಿಣ ಕಲ್ಲಿನ ಪದರು ಇರುವುದರಿಂದ ಯಾವುದೆ ಹಾನಿಯಾಗುವದು ಸಾಧ್ಯತೆ ಆಗುವುದಿಲ್ಲ. ಮೆಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.