ಕೆಂಭಾವಿ: ‘ವೈಭವದ ಇತಿಹಾಸ ಹೊಂದಿರುವ, ಶರಣರ ಬೀಡು, ಭೋಗಣ್ಣನ ಜನ್ಮಭೂಮಿ ಕೆಂಭಾವಿಯಲ್ಲಿ ಭಾವೈಕ್ಯತೆಯ ದಸರಾ ಆಚರಣೆ ಮಾಡುತ್ತಿರುವ ಯುವಕರ ಕಾರ್ಯ ಪ್ರೇರಣಾದಾಯಕ’ ಎಂದು ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾದ್ಯಕ್ಷ ಸುರೇಶ ಸಜ್ಜನ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ದಸರಾ ಉತ್ಸವ ಸಮಿತಿಯಿಂದ ಹಮ್ಮಿಕೊಂಡಿದ್ದ 5ನೇ ವರ್ಷದ ದಸರಾ ಉತ್ಸವ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಂಭಾವಿ ಪಟ್ಟಣ ಅಣ್ಣ ಭೋಗಣ್ಣ, ಹಜರತ್ ಚಚ್ಚಾ ಮಾಸಾಬಿ, ರೇವಣಸಿದ್ದೇಶ್ವರ, ಬಜಾರ ಬಲಭೀಮಸೇನ ದೇವರು ಸೇರಿದಂತೆ ಹಲವು ಪುರಾತನ ದೇವಸ್ಥಾನಗಳು ಹಾಗೂ ವಿಶಿಷ್ಟ ಇತಿಹಾಸ ಹೆಸರುವಾಸಿಯಾಗಿದೆ ಎಂದರು.
ಸಾಹಿತಿ ಲಿಂಗನಗೌಡ ಮಾಲಿಪಾಟೀಲ ಮಾತನಾಡಿ, ‘ನವರಾತ್ರಿ ಮತ್ತು ಮಹಾನವಮಿ ಹಬ್ಬಗಳು ದೇಶದ ಹೆಮ್ಮೆಯ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದು. ಈ ಹಬ್ಬಕ್ಕೆ ಜಾತಿ, ಧರ್ಮ ಮತ್ತು ಲಿಂಗಭೇದಗಳಿಲ್ಲದೆ ಎಲ್ಲರೂ ಸಮಾನವಾಗಿ ಆಚರಣೆ ಮಾಡುವ ಮತ್ತು ಜಾತಿ-ಧರ್ಮಗಳ ಬಗ್ಗೆ ಭಾವೈಕ್ಯತೆ ಬೆಸೆಯುವ ಒಂದು ಹೃದಯವಂತಿಕೆಯ ಹಬ್ಬ ಇದಾಗಿದೆ’ ಎಂದರು.
ಉತ್ಸವ ಸಮಿತಿಯಿಂದ ವರ್ಷದ ವಿಶೇಷ ವ್ಯಕ್ತಿ, ಆದರ್ಶ ಶಿಕ್ಷಕ ರತ್ನ, ಉತ್ತಮ ಕೃಷಿಕ, ಸೇವಾ ಸರ್ವೋತ್ತಮ, ಕಲಾರತ್ನ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಯಿತು. ಕಾಲ್ನಡಿಗೆಯಲ್ಲಿ ಹಜ್ ಯಾತ್ರೆ ಮುಗಿಸಿ ಬಂದ ಪಟ್ಟಣದ ಸಯ್ಯದ್ ಜಿಲಾನಿ ಹಳಿಸಗರ ಅವರನ್ನು ವಿಶೇಷ ಸನ್ಮಾನಿಸಲಾಯಿತು.
ಸಂಗೀತ ಶಿಕ್ಷಕ ಯಮುನೇಶ ಯಾಳಗಿ ನೇತೃತ್ವದಲ್ಲಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರ ಪೂಜಾ ಕುಣಿತದ ಜಾನಪದ ನೃತ್ಯ ಗಮನ ಸೆಳೆಯಿತು.
ಸಮಿತಿ ಸದಸ್ಯ ಡಿ.ಸಿ. ಪಾಟೀಲ ಮಾತನಾಡಿದರು. ಹಿರೇಮಠದ ಚೆನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪಾಟೀಲ ನಾಡದೇವಿಗೆ ಪುಷ್ಪಾರ್ಚನೆ ಮಾಡಿದರು. ಸಮಿತಿ ಅಧ್ಯಕ್ಷ ಮುದಿಗೌಡ ಮಾಲಿಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಮುಖಂಡ ಅಪ್ಪುಗೌಡ ಪಾಟೀಲ ಯಾಳಗಿ, ಪುರಸಭೆ ಅಧ್ಯಕ್ಷ ರಹೆಮಾನ ಪಟೇಲ ಯಲಗೋಡ, ಉಪಾದ್ಯಕ್ಷೆ ಲಕ್ಷ್ಮೀಬಾಯಿ ಕಂಬಾರ, ವಾಮನರಾವ ದೇಶಪಾಂಡೆ, ಬಾಪುಗೌಡ ಪಾಟೀಲ, ಅಬ್ದುಲ್ ರಜಾಕ್ ನಾಲತವಾಡ, ನೀಲಕಂಠಾರಾಯಗೌಡ ಪಾಟೀಲ, ಮಂಜುನಾಥ ಗುತ್ತೇದಾರ, ಮೋಹನರೆಡ್ಡಿ ಡಿಗ್ಗಾವಿ, ತೋಟಪ್ಪ ಸಾಹು, ರಾಮನಗೌಡ ಪತ್ತೇಪುರ ಇದ್ದರು.
ಬಂದೇನವಾಜ ನಾಲತವಾಡ ನಿರೂಪಣೆ ಮಾಡಿದರು, ಸೂಗೂರಯ್ಯ ಇಂಡಿ ಸ್ವಾಗತಿಸಿದರು, ಸಮಿತಿ ಅಧ್ಯಕ್ಷ ಮಹಿಪಾಲರೆಡ್ಡಿ ಡಿಗ್ಗಾವಿ ವಂದಿಸಿದರು.
ಸಾಧಕರಿಗೆ ಪ್ರಶಸ್ತಿ
ಪ್ರಧಾನ ಸಂಗಣ್ಣ ಸಿದ್ರಾಮಪ್ಪ ತುಂಬಗಿ (ಸಮಾಜಸೇವೆ) ರಾಜಹ್ಮದ ಬಡಿಗೇರ ನಾಗರತ್ನಾ ಕುಲಕರ್ಣಿ ರಮಾಬಾಯಿ ಕುಲಕರ್ಣಿ ರಾಮಕೃಷ್ಣ ಹುಜರತ್ತಿ (ಶಿಕ್ಷಣ ಕ್ಷೇತ್ರ) ಶಿವಶರಣರೆಡ್ಡಿ ಡಿಗ್ಗಾವಿ (ಕೃಷಿ ಕ್ಷೇತ್ರ) ಅರುಣ ಲಕ್ಷ್ಮಣ ಚವ್ಹಾಣ ( ಸರ್ಕಾರಿ ಸೇವೆ) ಪರಶುರಾಮ ಎಂಟಮಾನ (ಕಲೆ) ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.