ಪ್ರಜಾವಾಣಿ ವಾರ್ತೆ
ಬದ್ದೇಪಲ್ಲಿ(ಸೈದಾಪುರ): ಕಳೆದ ಎಂಟು-ಹತ್ತು ದಿನಗಳಿಂದ ಪ್ರತಿದಿನ 5 ರಿಂದ 10 ಕೋಳಿಗಳು ಇದ್ದಕ್ಕಿಂತೆ ಮರಣ ಹೊಂದುತ್ತಿರುವುದು ಬದ್ದೇಪಲ್ಲಿ ಗ್ರಾಮಸ್ಥರಲ್ಲಿ ಭೀತಿ ಮತ್ತು ನಷ್ಟದ ಸಮಸ್ಯೆ ಎದುರಿಸುವಂತಾಗಿದೆ.
ಸಮೀಪದ ಬದ್ದೇಪಲ್ಲಿ ಗ್ರಾಮದ ವಾರ್ಡ್ ಸಂಖ್ಯೆ 2ರಲ್ಲಿನ ಅನೇಕ ಜನರ ಸುಮಾರು 100ಕ್ಕೂ ಹೆಚ್ಚು ನಾಟಿ ಕೋಳಿಗಳು ಸಾವನ್ನಪ್ಪಿವೆ.
ಪ್ರತಿವರ್ಷ ಬೇಸಿಗೆಯ ಬಿಸಿಲಿನ ಝಳಕ್ಕೆ ಮನೆಯಲ್ಲಿರುವ 2-3 ಕೋಳಿಗಳು ಸಾಯುವುದು ಸರ್ವೆ ಸಾಮಾನ್ಯ. ಆದರೆ, ಎರಡು ಮೂರು ದಿನಗಳಲ್ಲಿ ಬಹಳಷ್ಟು ಕೋಳಿಗಳ ಬಾಯಿಯಲ್ಲಿ ಇದ್ದಕ್ಕಿದ್ದಂತೆ ಜೊಲ್ಲು, ರಕ್ತ ಸುರಿದು, ಪಟ ಪಟನೆ ರೆಕ್ಕೆ ಬಡೆದುಕೊಂಡು ಮರಣ ಹೊಂದುತ್ತಿವೆ. ಇದಕ್ಕೆ ನಿಜವಾದ ಕಾರಣ ಏನು ಎಂಬುದು ತಿಳಿಯುತ್ತಿಲ್ಲ. ಇದರಿಂದ ಸುಮಾರು 1,500ರಿಂದ 2,000 ಸಾವಿರ ರೂಪಾಯಿ ಬೆಲೆ ಬಾಳುವ ಸುಮಾರು 35 ರಿಂದ 40 ನಾಟಿ ಕೋಳಿಗಳು ಸಾವನ್ನಪ್ಪಿವೆ. ಇವುಗಳ ಒಟ್ಟಾರೆ ಬೆಲೆ ಅಂದಾಜು ₹ 40 ರಿಂದ 50 ಸಾವಿರ ನಷ್ಟವಾಗಿದೆ. ಕಷ್ಟ ಕಾಲದಲ್ಲಿ ನಮ್ಮ ಕೈಹಿಡಿಯುತ್ತವೆ ಎಂಬ ಉದ್ದೇಶದಿಂದ ದೂರದ ಊರಗಳಿಂದ ಕೋಳಿಗಳನ್ನು ತಂದು ಸಾಕಾಣಿಕೆ ಮಾಡಿದ್ದೆವು ಆದರೆ ಕೋಳಿಗಳ ಸಾವು ಬಡವರ ಪಾಲಿಗೆ ನುಂಗಲಾರದ ತುತ್ತಾಗಿದೆ ಎಂದು ತಾಯಪ್ಪ ಕತ್ತಿ ತಮ್ಮ ಅಳಲು ತೋಡಿಕೊಂಡರು.
ಕೋಳಿಗಳ ಸಾವು ಗ್ರಾಮಸ್ಥರಲ್ಲಿ ಹಕ್ಕಿಜ್ವರದ ಭೀತಿ ಸೃಷ್ಠಿಮಾಡಿದೆ.
ಇನ್ನುಳಿದಂತೆ ಶಕೀಲ್ ಅಹ್ಮದ ಎನ್ನುವರರ ಮನೆಯಲ್ಲಿ ಸಾಕಿದ ಸುಮಾರು 10, ತಾಯಪ್ಪ 9 ಹಾಗೂ ಸುತ್ತಮುತ್ತಲಿನ ಮನೆಗಳಲ್ಲಿರುವ 2-3ಕ್ಕೂ ಹೆಚ್ಚು ಕೋಳಿಗಳು ಗ್ರಾಮದಲ್ಲಿ ನಿತ್ಯ ಮೃತಪಡುತ್ತಿವೆ.
‘ನಮ್ಮ ಗ್ರಾಮದಲ್ಲಿ ಕೋಳಿಗಳು ಸಾವನ್ನಪ್ಪಿರುವುದು ಗ್ರಾಮ ಪಂಚಾಯಿತಿ ಮತ್ತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಇಲ್ಲ. ಅಲ್ಲದೆ ಹಕ್ಕಿ ಜ್ವರದಿಂದ ಕೋಳಿಗಳು ಮೃತಪಟ್ಟಿವೆ ಎಂಬುದು ಇನ್ನು ದೃಢಪಟ್ಟಿಲ್ಲ. ಇದರ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ಶೀಘ್ರದಲ್ಲಿ ಪರಿಶೀಲನೆ ಮಾಡುತ್ತೇವೆ’ ಎಂದು ಅಜಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಣ ಬದ್ದೇಪಲ್ಲಿ ಹೇಳಿದ್ದಾರೆ.
ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಾಳೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಸೂಕ್ತ ಕ್ರಮಕೈಗೊಳ್ಳುತ್ತೇನೆ.ಡಾ. ಸುನೀಲ್ ಕುಮಾರ ಪ್ರಭಾರ ಪಶು ವೈದ್ಯಾಧಿಕಾರಿ ಅಜಲಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.