ADVERTISEMENT

ದೋರನಹಳ್ಳಿ ದುರಂತ| ಶಿವರಾತ್ರಿ ಅಮಾವಾಸ್ಯೆಯಲ್ಲಿ ಸಾವಿನ ಎಣಿಕೆ

ಟಿ.ನಾಗೇಂದ್ರ
Published 3 ಮಾರ್ಚ್ 2022, 3:52 IST
Last Updated 3 ಮಾರ್ಚ್ 2022, 3:52 IST
ಶಹಾಪುರ ತಾಲ್ಲೂಕಿನ ದೋರನಹಳ್ಳಿ ಗ್ರಾಮದ ವೀರಬಸಪ್ಪ ಮನೆಯ ಮುಂದೆ ರೋದಿಸುತ್ತಿರುವ ಸಂಬಂಧಿಕರು
ಶಹಾಪುರ ತಾಲ್ಲೂಕಿನ ದೋರನಹಳ್ಳಿ ಗ್ರಾಮದ ವೀರಬಸಪ್ಪ ಮನೆಯ ಮುಂದೆ ರೋದಿಸುತ್ತಿರುವ ಸಂಬಂಧಿಕರು   

ದೋರನಹಳ್ಳಿ (ಶಹಾಪುರ): ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಯುಕೆಪಿ ಕ್ಯಾಂಪ್‌ನ ಸಾಹೇಬಗೌಡ ಹಗರಟಗಿ ಮನೆಯಲ್ಲಿ ಶುಕ್ರವಾರ ಸೀಮಂತ ಕಾರ್ಯಕ್ರಮದಲ್ಲಿ ಅಡುಗೆ ಅನಿಲ ಸಿಲಿಂಡರ್ ಸೋರಿಕೆಯಿಂದ ಶ್ಯಾಮಿಯಾನ್‌ಗೆ ಬೆಂಕಿ ಹತ್ತಿದ್ದರಿಂದ ಬುಧವಾರ ಐವರು ಅಸುನೀಗಿದ್ದಾರೆ.

ಎಲ್ಲೆಡೆ ಶಿವರಾತ್ರಿ ಅಮಾವಾಸ್ಯೆ ಸಂಭ್ರಮದಲ್ಲಿದ್ದರೆ ದೋರನಹಳ್ಳಿ ಗ್ರಾಮಸ್ಥರು ಮಾತ್ರ ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಈಗಾಗಲೇ ಮೂವರು ಚಿಕ್ಕ ಮಕ್ಕಳು ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಈಗ ಮೃತರ ಸಂಖ್ಯೆ 10ಕ್ಕೆರಿದೆ.

ದುರ್ಘಟನೆಯಲ್ಲಿ ಮೃತಪಟ್ಟವರಲ್ಲಿ ಹೆಚ್ಚಾಗಿ ಗಾಣಿಗ ಸಮುದಾಯದವರೇ ಇದ್ದಾರೆ. ಮನೆಗೆ ಹೊಸ ಅತಿಥಿ ಬರುವ ಸಂಭ್ರಮದ ಕ್ಷಣವು ಮಾಸಿ ಹೋಗಿ ನೋವು ನರಳಾಟವೇ ಕೇಳಿಬರುತ್ತಿದೆ.

ADVERTISEMENT

ಬಡ ಹಾಗೂ ಮಧ್ಯವ ವರ್ಗದ ಕುಟುಂಬದ ಸದಸ್ಯರು, ಬಂಧು ಬಳಗದವರು ಶುಕ್ರವಾರ ಸೀಮಂತ ಕಾರ್ಯಕ್ರಮದಲ್ಲಿ ಸೇರಿ ಖುಷಿಯಾಗಿ ಮಾತನಾಡುತ್ತಾ ಕುಳಿತುಕೊಂಡು ಇನ್ನೇನು ಹೋಳಿಗೆ ಊಟ ಮಾಡಬೇಕು ಎನ್ನುವಷ್ಟರಲ್ಲಿ ಸಿಲಿಂಡರ್ ಸೋರಿಕೆಯ ರೂಪದಲ್ಲಿ ಆಗಮಿಸಿದ ಜವರಾಯ 25 ಜನರನ್ನು ಗಾಯಗೊಳಿಸಿ ಬಿಟ್ಟ. ನಮ್ಮ ಕಣ್‌ ಮುಂದೆಯೇ ನರಳಾಟ ಚೀರಾಟ ನಡೆದು ಅನೇಕರನ್ನು ಆಸ್ಪತ್ರೆಗೆ ದಾಖಲಿಸಿದ್ದೇವು’ ಎನ್ನುತ್ತಾರೆ ಗ್ರಾಮದ ಮಾನಪ್ಪ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಒಬ್ಬೊಬ್ಬರಾಗಿ ಸಾವಿನ ಮನೆಯತ್ತ ಮುಖ ಮಾಡುತ್ತಾ ಸಾಗಿದ್ದಾರೆ. ಬುಧವಾರ ಐವರು ಅಸುನೀಗಿರುವುದು ಕುಟುಂಬದ ಸದಸ್ಯರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೃತಪಟ್ಟ ಕುಟುಂಬದ ಸದಸ್ಯರ ಕತೆಯಂತೂ ಕರುಣಾಜನಕವಾಗಿದೆ. ’ಇಂತಹ ಸಾವಿನ ಸರಣಿಯ ದುರ್ಘಟನೆಯು ಯಾರಿಗೂ ಬರಬಾರದು‘ ಎನ್ನುತ್ತಾರೆ ಗ್ರಾಮದ ಮಲ್ಲಿಕಾರ್ಜುನ.

ಅದರಲ್ಲಿ ಒಂದೇ ಕುಟುಂಬದ ವೀರಬಸಪ್ಪ ಮತ್ತು ಅವರ ತಾಯಿ ಶಾರದಮ್ಮ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದರು. ಬುಧವಾರ ಮಗ ವೀರಬಸಪ್ಪ ಅಸುನೀಗಿದ್ದಾರೆ. ತಾಯಿ ಸಾವಿನ ಜೊತೆ ಸೆಣಸಾಟ ನಡೆಸಿದ್ದಾರೆ. ತಂದೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

ಮುಂದಿನ ತಿಂಗಳ ಏಪ್ರಿಲ್‌ನಲ್ಲಿ ವೀರಬಸಪ್ಪನ ಮದುವೆಯ ಸಿದ್ಧತೆಯು ನಡೆದಿತ್ತು. ದುಃಖ ಮಡುಗಟ್ಟಿರುವ ಕುಟುಂಬದಲ್ಲಿ ಯಾರಿಂದಲೂ ಮಾತು ಹೊರ ಬರುತ್ತಿಲ್ಲ. ಎಲ್ಲರಲ್ಲಿ ಮೌನ ಮನೆ ಮಾಡಿದೆ. ಮುಂದೇನು ಎಂಬ ಪ್ರಶ್ನೆ ವೀರಬಸಪ್ಪನ ಸಹೋದರಾದ ಸಂತೋಷ, ಸುನಿಲ ಅವರನ್ನು ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.