ADVERTISEMENT

ಹಣತೆಗಳ ಮಂದ ಬೆಳಕಿನಲ್ಲಿ ಮಿಂದ ಜನ

ಪೂಜಾ ಸಾಮಗ್ರಿ ಖರೀದಿ ಜೋರು; ಹೂಮಾಲೆಗಳ ದರ ದುಪ್ಪಟ್ಟು

ಮಲ್ಲೇಶ್ ನಾಯಕನಹಟ್ಟಿ
Published 7 ನವೆಂಬರ್ 2018, 11:12 IST
Last Updated 7 ನವೆಂಬರ್ 2018, 11:12 IST
ಯಾದಗಿರಿಯ ಮಹಾತ್ಮ ಗಾಂಧಿ ವೃತ್ತದಲ್ಲಿ ಬುಧವಾರ ದೀಪಾವಳಿ ಅಂಗವಾಗಿ ಹಣತೆ ಖರೀದಿಸಿದರು
ಯಾದಗಿರಿಯ ಮಹಾತ್ಮ ಗಾಂಧಿ ವೃತ್ತದಲ್ಲಿ ಬುಧವಾರ ದೀಪಾವಳಿ ಅಂಗವಾಗಿ ಹಣತೆ ಖರೀದಿಸಿದರು   

ಯಾದಗಿರಿ: ನರಕ ಚತುರ್ದಶಿ ಆಚರಿಸಿದ ನಗರದ ನಾಗರಿಕರು ಬುಧವಾರ ಮಹಾಲಕ್ಷ್ಮಿ ಪೂಜೆಗೆ ನಗರದ ಹಣತೆ ಖರೀದಿಸುವಲ್ಲಿ ನಿರತರಾಗಿದ್ದರು. ಮಾರುಕಟ್ಟೆಯಲ್ಲಿ ತೂಗು ದೀಪ, ಗಣೇಶ ದೀಪ, ನವಿಲು ದೀಪ, ಆನೆ ದೀಪ, ಆಮೆ ದೀಪ, ಸರ್ಪದ ದೀಪ, ಆರದ ದೀಪ, ಗಣಪತಿ ದೀಪ, ಗಿಳಿ ದೀಪ, ನಾಲಿಗೆ ದೀಪ, ಕುಡಿಕೆ ದೀಪ, ದೀಪಾಲೆ ಕಂಬ, ಸುಗಂಧ ದೀಪ ಖರೀದಿಸಿಸುತ್ತಿದ್ದ ದೃಶ್ಯ ಕಂಡುಬಂತು.

ನಗರದಲ್ಲಿ ಕುಂಬಾರಿಕೆ ಮಾಡಿಕೊಂಡು ಬಂದಿರುವ ಕಟುಂಬಗಳು ವೈವಿಧ್ಯ ಹಣತೆಗಳನ್ನು ತಯಾರಿಸಿ ಮಾರಾಟಕ್ಕೆ ಇಟ್ಟಿದ್ದರು. ತೆಂಗಿನ ಕಾಯಿ ದೀಪ, ಚಿಮಣಿ ದೀಪ ಹಾಗೂ ವಿವಿಧ ಮಾದರಿಯ ಮಣ್ಣಿನ ಹಣತೆಗಳ ಈ ಬಾರಿ ಮಾರುಕಟ್ಟೆಯಲ್ಲಿ ಜನರನ್ನು ಆಕರ್ಷಿಸಿದವು. ಹಣತೆಯ ಜತೆಗೆ ಜನರು ಪೂಜಾ ಸಾಮಗ್ರಿ, ಅಡಕೆ ಕಾಯಿ, ನವಮಿ ದಾರ, ಬಳೆ, ಅರಿಶಿಣ ಕೊಂಬು ಹೆಚ್ಚಾಗಿ ಖರೀದಿಸಿದರು.

ದೀಪಲಕ್ಷ್ಮಿ: ದೇವರನ್ನು ಆರಾಧಿಸಲು ದೀಪಗಳನ್ನು ಹಚ್ಚುವುದು ಹಿಂದಿನಿಂದಲೂ ಬಂದ ಸಂಪ್ರದಾಯ. ರೈತರು ಹೊಲದಲ್ಲಿ ದುಡಿದು ತಂದ ಧಾನ್ಯಲಕ್ಷ್ಮಿಯನ್ನು ಪೂಜಿಸಲು ಅಣಿಯಾಗುವ ಹಬ್ಬವೇ ದೀಪಾವಳಿ ಎಂದು ಬಸವೇಶ್ವರ ನಗರದ ಗೃಹಿಣಿ ಜಲಜಾಕ್ಷಿ ನಾಯಕ ತಿಳಿಸಿದರು.

ADVERTISEMENT

ಹಣತೆಯನ್ನು ಗೃಹಿಣಿಯರು ‘ದೀಪಲಕ್ಷ್ಮಿ’ ಎಂದೇ ಭಾವಿಸಿಕೊಂಡು ಬಂದಿದ್ದಾರೆ. ‘ದೀಪವಿಲ್ಲದ ಗುಡಿ ಇಲ್ಲ, ಗುಡಿ ಇಲ್ಲದ ದೀಪವಿಲ್ಲ’ ಎಂಬುದಾಗಿ ದೀಪಾವಳಿ ಆಚರಣೆಯನ್ನು ಗೃಹಿಣಿ ಜಲಜಾಕ್ಷಿ ನಾಯಕ ಅರ್ಥೈಸಿದರು.

ಹೂವಿಗೂ ಬೇಡಿಕೆ:ದೀಪಾವಳಿ, ಕಾರ್ತೀಕ ಮಾಸದ ನಿರೀಕ್ಷೆಯಲ್ಲಿ ಹೂವಿನ ವ್ಯಾಪಾರಿಗಳು ಈ ವಾರ ಕೊಂಚ ನಿರಾಳವಾಗಿದ್ದರು. ಸತತ ದರ ಕುಸಿತದಿಂದ ಕಂಗೆಟ್ಟಿದ್ದ ವ್ಯಾಪಾರಿಗಳು ದೀಪಾವಳಿ ಸಂಭ್ರಮದಲ್ಲಿ ದರ ದುಪ್ಪಟ್ಟಾಗಿದ್ದರೂ, ವ್ಯಾಪಾರ ಜೋರಾಗಿದ್ದರಿಂದ ವ್ಯಾಪಾರಿಗಳು ಖುಷಿಯಾಗಿದ್ದರು. ಮುಂದಿನ 5 ವಾರ ಶುಭ ಸಮಾರಂಭಗಳು ನಡೆಯುವುದರಿಂದ ಹೂವಿಗೆ ಬೇಡಿಕೆ ಇರುತ್ತದೆ ಎನ್ನುತ್ತಾರೆ ಹೂವಿನ ವ್ಯಾಪಾರಿಗಳು. ಅಲ್ಲದೇ, ಈಗ ಹೂವುಗಳ ಉತ್ಪಾದನೆ ಕಡಿಮೆಯಾಗಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಳವಾಗಿದೆ ಎಂದು ಬಿಡಿ ಹೂ–ಗಳ ವ್ಯಾಪಾರಿ ರಾಮು ‘ಪ್ರಜಾವಾಣಿ’ಗೆ ತಿಳಿಸಿದರು.

ಕುಸಿದ ಪಟಾಕಿ ವ್ಯಾಪಾರ:ಪಟಾಕಿ ಹಚ್ಚುವ ಕಾಲಾವಧಿಯನ್ನು ಸುಪ್ರೀಂಕೋರ್ಟ್ ಮೊಟಕುಗೊಳಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಬುಧವಾರ ಪಟಾಕಿ ವ್ಯಾಪಾರ ಅಷ್ಟಾಗಿ ಜೋರು ಪಡೆದಿರಲಿಲ್ಲ.

ನಗರದ ಹೈದರಾಬಾದ್‌ ರಸ್ತೆ ಪಕ್ಕದಲ್ಲಿ ಎಂಟು ಪಟಾಕಿ ಮಳಿಗೆಗಳು ತಲೆಎತ್ತಿದರೂ ಖರೀದಿಸುವವ ಸಂಖ್ಯೆ ವಿರಳವಾಗಿತ್ತು. ಕಳೆಬಾರಿಗೆ ಹೋಲಿಸಿದರೆ ಈ ವರ್ಷ ಪಟಾಕಿ ವ್ಯಾಪಾರ ಕುಸಿದಿದೆ ಎಂದು ಪಟಾಕಿ ವ್ಯಾಪಾರಿ ಸೋಹನ್‌ ಪ್ರಸಾದ್‌ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.