ADVERTISEMENT

ಕಾಯಕ, ದಾಸೋಹದ ಮಹತ್ವ ಸಾರಿದ ಹರಿಕಾರ

ಜಿಲ್ಲೆಯ ವಿವಿಧೆಡೆ ಶ್ರದ್ಧಾ ಭಕ್ತಿಯ ಬಸವ ಜಯಂತಿ; ಮನೆಯಲ್ಲೇ ಆವರಣೆ, ಮಾಸ್ಕ್‌ ವಿತರಣೆ, ಭಾವಚಿತ್ರಕ್ಕೆ ಪೂಜೆ

​ಪ್ರಜಾವಾಣಿ ವಾರ್ತೆ
Published 14 ಮೇ 2021, 16:09 IST
Last Updated 14 ಮೇ 2021, 16:09 IST
ಯಾದಗಿರಿಯ ವೀರಶೈವ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಬಸವ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು
ಯಾದಗಿರಿಯ ವೀರಶೈವ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಬಸವ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು   

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ಬಸವ ಜಯಂತಿಯನ್ನು ಶ್ರದ್ಧಾ–ಭಕ್ತಿಯಿಂದ ಸರಳವಾಗಿ ಆಚರಿಸಲಾಯಿತು.

ಜಯಂತಿ ಅಂಗವಾಗಿ ಬಸವಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮನೆಯಲ್ಲಿ ಸರಳವಾಗಿ ಜಯಂತಿ ಆಚರಣೆ ಮಾಡಲಾಯಿತು. ಕೆಲವರು ಜಯಂತಿ ಅಂಗವಾಗಿ ಪೊಲೀಸರು, ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿದರು.

ಬಸವಣ್ಣ ವಚನಗಳ ಮೂಲಕ ಸಮಾಜದಲ್ಲಿರುವ ಅನಿಷ್ಟ ಆಚರಣೆಗಳನ್ನು ಹೋಗಲಾಡಿಸಲು ಯತ್ನಿಸಿದರು. ಅನುಭವ ಮಂಟಪದ ಮೂಲಕ ಎಲ್ಲರಿಗೂ ಚರ್ಚಿಸಲು ಅವಕಾಶ ನೀಡಿದರು. ಕಾಯಕ, ದಾಸೋಹ ಮೂಲಕ ಸಮ ಸಮಾಜ ಕಟ್ಟಲು ಯತ್ನಿಸಿದರು ಎಂದು ಗಣ್ಯರು ಸ್ಮರಿಸಿದರು.

ADVERTISEMENT

ವೀರಶೈವ ಯುವ ಘಟಕ: ಜಯಂತಿ ಅಂಗವಾಗಿ ನಗರದ ಅಖಿಲ ಭಾರತ ವೀರಶೈವ ಮಹಾಸಭಾದ ಯುವ ಘಟಕದ ಅಧ್ಯಕ್ಷ ಅವಿನಾಶ್ ‌ಜಗನ್ನಾಥ ನೇತೃತ್ವದಲ್ಲಿ ಪೊಲೀಸರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ ಮಾಡಲಾಯಿತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ಅವರಿಗೆ ಮಾಸ್ಕ್‌, ಸ್ಯಾನಿಟೈಸರ್ ನೀಡುವ ಮೂಲಕ ಚಾಲನೆ ನೀಡಲಾಯಿತು.

ಈ ವೇಳೆ ಮಾತನಾಡಿದ ಅವಿನಾಶ ಜಗನ್ನಾಥ, ಕೋವಿಡ್ ಎರಡನೇ ಅಲೆ ಪರಿಣಾಮ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿವೆ. ಈಗಾಗಲೇ ಕೋವಿಡ್‌ಗೆ ಕಡಿವಾಣ ಹಾಕಲು ಸರ್ಕಾರ ಲಾಕ್‌ಡೌನ್ ಜಾರಿ ಮಾಡಿದ್ದು, ಲಾಕ್‌ಡೌನ್ ಸಮಯದಲ್ಲಿ ಬಿಸಿಲಿನಲ್ಲಿ ಜೀವದ ಹಂಗು ತೊರೆದು ಪೊಲೀಸರು‌ ಹಗಲಿರುಳು ಸೇವೆ ಮಾಡಿ ಕೋವಿಡ್ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ ಅವರಿಗೆ ನಮ್ಮ ಕಡೆಯಿಂದ ಮಾಸ್ಕ್‌, ಸ್ಯಾನಿಟೈಸರ್ ವಿತರಿಸಲಾಗಿದೆ ಎಂದರು.

ಶರಣು ಈಡ್ಲೂರ, ಶರಣು ಆಶನಾಳ, ರೂಹನ್ ವಡಿ, ಸುನೀಲ್ ವಾರ, ಸಚಿನ್ ಭಾಪುರೆ, ಸಿದ್ದು ಪಾಟೀಲ, ಬಸನಗೌಡ ಪಾಟೀಲ, ಶರಣು ಪಡಶೆಟ್ಟಿ, ಮಹೇಶ್ ಕುಮಾರ ಇದ್ದರು.

ಬಣಜಿಗ ಸಮಾಜ: ನಗರದ ಶರಣ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಜಿಲ್ಲಾ ಬಣಜಿಗರ ಸಮಾಜದ ವತಿಯಿಂದ ಭಕ್ತಿಭಂಡಾರಿ ಬಸವಣ್ಣನ ಜಯಂತಿ ಸರಳವಾಗಿ ಶುಕ್ರವಾರ ಆಚರಿಸಲಾಯಿತು. ಬಣಜಿಗರ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಸಂಗಪ್ಪ ಲಾಳಸಂಗಿ ಅವರು ಬಸವಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಬಣಜಿಗರ ಸಮಾಜದ ಮುಖಂಡ ಇಂದುಧರ ಸಿನ್ನೂರ, ಬಸವರಾಜ ರಾಜಾಪುರ, ಗುಂಡಪ್ಪ ಕಲಬುರ್ಗಿ, ಸೂರ್ಯಕಾಂತ ಆಕಳ, ಶಿವಶರಣಪ್ಪ ಸಾಹುಕಾರ ವಡಗೇರಾ, ರಾಕೇಶ ಜೈನ್, ಶ್ರೀನಾಥ ಜೈನ್, ಶರಣಪ್ಪ ಜಾಕಾ, ಶರಣು ಮಾಲಿಪಾಟೀಲ ಇದ್ದರು.

ಯುವಾ ಬ್ರಿಗೇಡ್: ಬಸವ ಜಯಂತಿ ಅಂಗವಾಗಿ ಯುವಾ ಬ್ರಿಗೇಡ್ ಹಾಗೂ ವರ್ಧಮಾನ್ ಟ್ರೇಡಿಂಗ್ ಕಂಪನಿ ಸಹಯೋಗದಲ್ಲಿ ನಗರದ ಗಾಂಧಿ ವೃತ್ತದಲ್ಲಿ ಮಾಸ್ಕ್ ವಿತರಿಸಿ ಬಸವ ಜಯಂತಿ ಆಚರಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ಮಾಸ್ಕ್‌ ವಿತರಣೆಗೆ ಚಾಲನೆ ನೀಡಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ವರ್ಧಮಾನ್ ಟ್ರೇಡಿಂಗ್ ಕಂಪನಿಯ ಸುಭಾಷ ಆಯಾರಕರ್, ಪ್ರಶಾಂತ ಎಸ್. ಆಯಾರಕರ್, ಬಸವರಾಜ ಮೋಟ್ನಳ್ಳಿ, ಯುವಾ ಬ್ರಿಗೇಡ್ ವಿಭಾಗೀಯ ಸಂಚಾಲಕ ಸಂಗಮೇಶ ಕೆಂಭಾವಿ, ವೆಂಕಟೇಶ ಕಲ್ಬುರ್ಗಿ, ಜಿಲ್ಲಾ ಸಹ ಸಂಚಾಲಕ ರಾಘವೇಂದ್ರ ನಾಸಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.