ADVERTISEMENT

ಲಲಿತಾ ಸಹಸ್ರನಾಮ ಪಾರಾಯಣದಿಂದ ಆನಂದ

ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ನಿರ್ಭಯಾನಂದ ಶ್ರೀ ಅಭಿಮತ

​ಪ್ರಜಾವಾಣಿ ವಾರ್ತೆ
Published 1 ಜೂನ್ 2019, 15:57 IST
Last Updated 1 ಜೂನ್ 2019, 15:57 IST
ಯಾದಗಿರಿ ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ಭಯಾನಂದ ಸ್ವಾಮೀಜಿ ಮಾತನಾಡಿದರು
ಯಾದಗಿರಿ ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ಭಯಾನಂದ ಸ್ವಾಮೀಜಿ ಮಾತನಾಡಿದರು   

ಯಾದಗಿರಿ: ಲಲಿತಾ ಸಹಸ್ರ ನಾಮಪಾರಾಯಣದಿಂದ ಜೀವನದ ಪರಮಾನಂದದ ಸ್ಥಿತಿ ಅನುಭವಿಸಲು ಸಾಧ್ಯ ಎಂದು ಬೆಂಗಳೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಪ್ರತಿ ಶುಕ್ರವಾರ ನಡೆಸಲಾಗುವ ಲಲಿತಾ ಸಹಸ್ರ ನಾಮ ಪಾರಾಯಣ ವಿಧಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಚಂಚಲವಾದ ಮನಸ್ಸನ್ನು ಏಕಾಗ್ರತೆಗೊಳಿಸಿ ಧರ್ಮಯುಕ್ತ ಜೀವನ ಸಾಗಿಸುವ ಮನುಷ್ಯ ಆನಂದ ಸ್ಥಿತಿ ಅನುಭವಿಸುತ್ತಾನೆ. ಲಲಿತಾ ಸಹಸ್ರ ನಾಮ ಪಾರಾಯಣ ಮಾಡುವುದರಿಂದ ಚಂಚಲವಾದ ಮನಸ್ಸು ಏಕಾಗ್ರಗೊಂಡು ಭಗವಂತನ ದರ್ಶನ ಸಾನಿಧ್ಯಕ್ಕೆ ನೆರವಾಗುತ್ತದೆ. ಮಕ್ಕಳ ವ್ಯಕ್ತಿತ್ವ ಬೆಳವಣಿಗೆಗೆ ಮಹತ್ವ ಕೊಟ್ಟು ಮಕ್ಕಳು ಧರ್ಮ ಮಾರ್ಗದಲ್ಲಿ ಸಾಗುವಂತೆ ಪ್ರೇರೇಪಿಸುವ ಆ ಮಾರ್ಗದಲ್ಲಿ ಸಾಗುವಂತೆ ನೋಡಿಕೊಳ್ಳುವುದು ಪಾಲಕರ ಜವಾಬ್ದಾರಿಯಾಗಿದೆ. ಈ ಜವಾಬ್ದಾರಿ ನಿಭಾಯಿಸುವ ಪಾಲಕರಿಂದ ಒಳ್ಳೆಯ ಮಕ್ಕಳನ್ನು ಭವಿಷ್ಯದ ಒಳ್ಳೆಯ ಪ್ರಜೆಗಳನ್ನು ಕೊಡಲು ಸಾಧ್ಯವಾಗುತ್ತದೆ ಎಂದರು.

ADVERTISEMENT

ಸತ್ಯ ವಾಕ್ಯ ಪರಿಪಾಲನೆ, ಪರಸ್ತ್ರೀಯರಲ್ಲಿ ತಾಯಿಯನ್ನು ಕಾಣುವುದು, ನಮ್ಮದಲ್ಲದ ವಸ್ತುವಿಗೆ ಆಸೆ ಪಡೆದಿರುವುದು, ಕಾರಣವಿಲ್ಲದೇ ಯಾರಿಗೂ ಹಿಂಸೆ ಮಾಡಬಾರದು, ನಿತ್ಯ ಆಧ್ಯಾತ್ಮಿಕ ಸಾಧನೆ (ಪಾರಾಯಣ, ಪೂಜೆ, ಜಪ ತಪ ಇತ್ಯಾದಿ) ಮಾಡಿದಲ್ಲಿ ಭಗವಂತನ ಆನಂದ ಸ್ಥಿತಿಗೆ ಅರ್ಹರಾಗುತ್ತಾರೆ ಎಂದರು.

ಹೊಸಪೇಟೆಯ ಹಂಸಾಂಬ ಶಾರದಾಶ್ರಮ ಅಧ್ಯಕ್ಷೆ ಮಾತಾ ಪ್ರಬೋಧಮಯಿ ಮಾತನಾಡಿ, ಲಲಿತಾ ಸಹಸ್ರ ನಾಮದ ವೈಶಿಷ್ಯ ಪಾರಾಯಣದ ಮಹತ್ವ ಹಾಗೂ ಸಹಸ್ರ ದೇವಿ ನಾಮಾವಳಿಯ ಅಂತರಾರ್ಥವನ್ನು ಸವಿವರವಾಗಿ ವಿಶ್ಲೇಷಿಸಿ ವಿವರಿಸಿದರು.

ಸ್ವಾತಿ ಅಕ್ಕ ಮಾತನಾಡಿ, ಕೇವಲ ಒಂದು ದಿನದ ಕಾರ್ಯಕ್ರಮವಾಗದೇ ನಿತ್ಯ ಜೀವನದ ಭಾಗವಾಗಬೇಕೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ರಾಮಕೃಷ್ಣ ವಿವೇಕಾನಂದ ಆಶ್ರಮದ ಪಿ. ವೇಣುಗೋಪಾಲ ಮಾತನಾಡಿ, ಈ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಭಕ್ತರ ಮನೆಗಳಲ್ಲಿ ಪ್ರತಿ ಶುಕ್ರವಾರ ಆಯೋಜಿಸಲಾಗುವುದು ಎಂದು ಹೇಳಿದರು.

ನಗರಸಭೆ ಸದಸ್ಯ ಅಂಬಯ್ಯ ಶಾಬಾದಿ, ಆರ್ಯವೈಶ್ಯ ಸಮಾಜದ ಅಧ್ಯಕ್ಷ ಕಾಸುಲ ವೆಂಕಟಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.