ADVERTISEMENT

ವಡಗೇರಾ | ಉನ್ನತ ಶಿಕ್ಷಣದಿಂದ ಬಡ ವಿದ್ಯಾರ್ಥಿಗಳು ದೂರ: ಪಿಯು ಕಾಲೇಜಿಗೆ ಕಾತರ

​ಪ್ರಜಾವಾಣಿ ವಾರ್ತೆ
Published 8 ಮೇ 2025, 5:29 IST
Last Updated 8 ಮೇ 2025, 5:29 IST
ವಡಗೇರಾ ಪಟ್ಟಣದ ಪ್ರೌಢಶಾಲೆಯ ಆವರಣದಲ್ಲಿ ಪಿಯು ಕಾಲೇಜು ಆರಂಭಿಲಾಗುತ್ತು.
ವಡಗೇರಾ ಪಟ್ಟಣದ ಪ್ರೌಢಶಾಲೆಯ ಆವರಣದಲ್ಲಿ ಪಿಯು ಕಾಲೇಜು ಆರಂಭಿಲಾಗುತ್ತು.   

ವಡಗೇರಾ: ಪಟ್ಟಣದಲ್ಲಿ ಪಿಯು ಕಾಲೇಜು ಇಲ್ಲದಿರುವುದರಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. 

ವಡಗೇರಾ ಹೋಬಳಿ ಕೇಂದ್ರವಿದ್ದಾಗ ಅಂದಿನ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಡಾ.ಎ.ಬಿ. ಮಾಲಕರಡ್ಡಿ ಅವರು ಪ್ರೌಢಶಾಲೆ ಆವರಣದಲ್ಲಿ ಪಿಯು ಕಾಲೇಜು ಆರಂಭಿಸಿ ಉಪನ್ಯಾಸಕರ ನೇಮಕವನ್ನೂ ಸಹ ಮಾಡಿದ್ದರು. ದಾಖಲಾತಿಯೂ ಉತ್ತಮವಾಗಿತ್ತು.

ದಾಖಲಾತಿಯ ನೆಪ: 2009-10ರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಕಡಿಮೆ ಬಂದ ಕಾರಣ ಪಿಯು ಕಾಲೇಜಿನಲ್ಲಿ ದಾಖಲಾತಿ ಕಡಿಮೆಯಾಯಿತು. ಇದನ್ನೇ ನೆಪ ಮಾಡಿಕೊಂಡು ಶಿಕ್ಷಣ ಇಲಾಖೆಯ ಆಗೀನ ಸಚಿವ, ಹಾಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಇಲ್ಲಿ ಇದ್ದ ಕಾಲೇಜನ್ನು ಸಿಬ್ಬಂದಿ ಸಹಿತವಾಗಿ ದಕ್ಷಿಣ ಕನ್ನಡದ ಶಿರಸಿಗೆ ಸ್ಥಳಾಂತರಿಸಿದರು.

ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷೆ–1ರಲ್ಲಿ ತಾಲ್ಲೂಕು ವ್ಯಾಪ್ತಿಯ ಪ್ರೌಢಶಾಲೆಗಳಿಂದ 810 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 418 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ51.60 ಫಲಿತಾಂಶ ಬಂದಿದೆ. ಇನ್ನೂ ಪರೀಕ್ಷೆ-2, 3 ಬಾಕಿ ಇರುವುದರಿಂದ ಫಲಿತಾಂಶ ಹೆಚ್ಚಾಗುವ ನಿರೀಕ್ಷೆ ಇದೆ.

ಈ ಭಾಗದ ಗ್ರಾಮಗಳಾದ ಶಿವಪೂರ, ಬೆಂಡೆಬೆಂಬಳಿ, ಬಿಳ್ಹಾರ, ತುಮಕೂರ,ವಡಗೇರಾ, ಕೊಂಕಲ್, ಕುರಕುಂದಾ , ಟಿ.ವಡಗೇರಾ, ಹಾಲಗೇರಾ, ವಡಗೇರಾ ಗ್ರಾಮದ ಎಸ್‌ಎಸ್‌ಎಲ್‌ಸಿ ಪಾಸಾದ ವಿದ್ಯಾರ್ಥಿಗಳು ಪಿಯು ಶಿಕ್ಷಣಕ್ಕೆ ದೂರದ ಜಿಲ್ಲಾ ಕೇಂದ್ರವಾದ ಯಾದಗಿರಿಗೇ ಹೋಗಬೇಕು.

ವೆಂಕಟರೆಡ್ಡಿ ಮುದ್ನಾಳ ಶಾಸಕರಾಗಿದ್ದಾಗ ಅವರ ಬಳಿ ಪಟ್ಟಣದ ಸಂಘ–ಸಂಸ್ಥೆಯವರು, ಪಾಲಕರು ಕಾಲೇಜು ಆರಂಭಿಸಲು ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿದ್ದ ಅಂದಿನ ಶಾಸಕರು ವಡಗೇರಾ ಪಟ್ಟಣಕ್ಕೆ ಪಿಯು ಕಾಲೇಜು ಮಂಜೂರು ಮಾಡಿಸಿದ್ದರು. ಆದರೆ ಏಕಾಏಕಿ ಆದೇಶ ರದ್ದಾಯಿತು.

ಹಾಲಿ ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರ ಅವರಿಗೂ ಸಾರ್ವಜನಿಕರು ಮನವಿ ಸಲ್ಲಿಸಿದಾಗ ‘2024-25ರಲ್ಲಿ ಪಟ್ಟಣದಲ್ಲಿ ಕಾಲೇಜು ಆರಂಭಿಸಲು ಕ್ರಮ ತೆಗೆದುಕೊಳ್ಳಲಾಗುವುದು’ ಎನ್ನುವ ಭರವಸೆ ನೀಡಿದ್ದರು. ಆದರೆ ಆ ಭರವಸೆ ಭರವಸೆಯಾಗಿಯೇ ಉಳಿಯಿತು.

ಪಟ್ಟಣದಲ್ಲಿ ಪಿಯು ಕಾಲೇಜು ಇಲ್ಲದಿರುವುದರಿಂದ ಬಹಳಷ್ಟು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಈ ವರ್ಷ ಪಿಯು ಕಾಲೇಜು ಆರಂಭಿಸಲು ಕ್ರಮಗಳನ್ನು ಕೈಗೊಳ್ಳಬೇಕು
-ಸಿದ್ದಣ್ಣಗೌಡ ಕಾಡಂನೋರ ಜಿ.ಪಂ ಮಾಜಿ ಸದಸ್ಯ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಾಸಾಗಿದ್ದೇನೆ ಪಟ್ಟಣದಲ್ಲಿ ಪಿಯು ಕಾಲೇಜು ಇಲ್ಲದಿರುವದರಿಂದ ಮುಂದೇನು ಎಂಬ ಚಿಂತೆ ಕಾಡುತ್ತಿದೆ
-ಪ್ರಜ್ವಲ್ ಸಾಬರಡ್ಡಿ ವಿದ್ಯಾರ್ಥಿ
ಈ ಶೈಕ್ಷಣಿಕ ವರ್ಷದಲ್ಲಿ ಖಂಡಿತವಾಗಿ ವಡಗೇರಾ ಹಾಗೂ ದೋರನಹಳ್ಳಿಯಲ್ಲಿ ಪಿಯು ಕಾಲೇಜು ಆರಂಭಿಸಲಾಗುವದು. ಕಾಲೇಜು ಕಟ್ಟಡ ನಿರ್ಮಾಣಕ್ಕಾಗಿ ಎರಡು ಕಡೆ ತಲಾ ₹3 ಕೋಟಿ ಅನುದಾನ ಕೊಡುತ್ತೇನೆ
-ಚನ್ನಾರಡ್ಡಿ ಪಾಟೀಲ ತುನ್ನೂರ ಯಾದಗಿರಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.