ADVERTISEMENT

ಯಾದಗಿರಿ: ಮಟ್ಕಾ ಹಾವಳಿಗೆ ಕಡಿವಾಣ ಯಾವಾಗ?

ಮಟ್ಕಾ ಬುಕ್ಕಿಗಳ ವಿರುದ್ಧ ಕ್ರಮ ಕೈಗೊ‌ಳ್ಳದ ಪೊಲೀಸ್ ಇಲಾಖೆ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 23 ಜನವರಿ 2022, 6:11 IST
Last Updated 23 ಜನವರಿ 2022, 6:11 IST
ಗಂಗಾಧರನಾಯಕ ತಿಂಥಣಿ
ಗಂಗಾಧರನಾಯಕ ತಿಂಥಣಿ   

ಕಕ್ಕೇರಾ: ಪಟ್ಟಣ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಮಟ್ಕಾ, ಜೂಜಾಟ ಯಾವುದೇ ಅಡತಡೆಯಿಲ್ಲದೇ ನಡೆಯುತ್ತಿದ್ದು, ಇದಕ್ಕೆ ಪೂರ್ಣಪ್ರಮಾಣದಲ್ಲಿ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಮುಖ ಮಾರುಕಟ್ಟೆ ಮತ್ತು ಸ್ಥಳಗಳಲ್ಲಿ ಜೂಜು ರಾಜಾರೋಷವಾಗಿ ಆಡಲಾಗುತ್ತಿದ್ದು, ಪೊಲೀಸ್ ಇಲಾಖೆಯು ಕೂಡ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಆರೋಪಿಸಿದ್ದಾರೆ.

‘ಮಟ್ಕಾ, ಜೂಜಾಟಕ್ಕೆ ದಾಸರಾದ ಹಲವರು ಮನೆ, ಆಸ್ತಿ ಮಾರಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೇರೆ ಊರುಗಳಿಗೆ ತೆರಳಿ, ಕೆಲಸ ಹುಡುಕಿ ಅಲ್ಲೇ ವಾಸಿಸಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಆದರೂ ಜೂಜಾಟದಿಂದ ಜನರು ದೂರವಾಗುತ್ತಿಲ್ಲ. ಅವರಿಗೆ ಯಾರೂ ಕಡಿವಾಣ ಹಾಕುತ್ತಿಲ್ಲ’ ಎಂದು ಪಟ್ಟಣದ ನಿವಾಸಿ ಪರಮಣ್ಣ ವಡಿಕೇರಿ ದೂರಿದರು.

ADVERTISEMENT

‘ಕಕ್ಕೇರಾ ಸೇರಿ ಬಹುತೇಕ ಕಡೆ ಬುಕ್ಕಿಗಳ ಹಾವಳಿ ವ್ಯಾಪಕವಾಗಿದೆ. ಜೂಜಾಟದ ಸಂಪೂರ್ಣ ನಿಯಂತ್ರಣಕ್ಕಾಗಿ ಪೊಲೀಸರಿಗೆ ಮತ್ತು ಜಿಲ್ಲಾಡಳಿತ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಮಾಹಿತಿ ಪಡೆಯುತ್ತಾರೆ ಹೊರತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವುದಿಲ್ಲ’ ಎಂದು ಅವರು ಆರೋಪಿಸಿದರು.

‘ಹೆಸರಿಗೆ ಮಾತ್ರ ಚಪ್ಪಲಿ, ಬೂಟ ಅಂಗಡಿ ಇಡಲಾಗಿದೆ. ಒಂದು ದಿನವೂ ಅಲ್ಲಿ ಪಾದರಕ್ಷೆಗಳ ಮಾರಾಟವಾಗಿಲ್ಲ. ಗ್ರಾಹಕರು ಪಾದರಕ್ಷೆಗಳನ್ನು ಕೇಳಿದರೆ, ಅವರಿಗೆ ಇಲ್ಲ ಎನ್ನಲಾಗುತ್ತದೆ. ಆದರೆ, ಮಟ್ಕಾ ಬರೆಯುವವರು ಒಬ್ಬರು ಒಳಗಿದ್ದರೆ ಮತ್ತೊಬ್ಬರು ಬಾಗಿಲು ಬಳಿ ನಿಂತಿರುತ್ತಾರೆ. ಜನರು ಗುಂಪುಗೂಡಿ ಮಟ್ಕಾ ಬರೆಸುತ್ತಾರೆ. ಸಂಜೆ ವೇಳೆ ದೀಪಗಳನ್ನು ಆರಿಸಿ, ಮೊಬೈಲ್ ಫೋನ್ ಬೆಳಕಲ್ಲಿ ಮಟ್ಕಾ ಬರೆಯಲಾಗುತ್ತದೆ’ ಎಂದು ಪಟ್ಟಣದ ನಿವಾಸಿಗಳು ತಿಳಿಸಿದರು.

‘ಜೂಜಾಡುವವರ ಜೊತೆಗೆ ಪೊಲೀಸ್‌ ಇಲಾಖೆಯು ಶಾಮೀಲಾಗಿರುವ ಬಗ್ಗೆ ಅನುಮಾನಗಳಿವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲು ಪೊಲೀಸರು ಯಾಕೆ ಹಿಂಜರಿಯುತ್ತಾರೆ? ಮಟ್ಕಾ ಬುಕ್ಕಿಗಳನ್ನು ಪೊಲೀಸರು ಶೀಘ್ರವೇ ಬಂಧಿಸದಿದ್ದಲ್ಲಿ, ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ’ ಎಂದು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪರಮಣ್ಣ ಹಡಪದ ಮತ್ತು ಸಂಘಸಂಸ್ಥೆಗಳ ಪ್ರತಿನಿಧಿಗಳು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.