ADVERTISEMENT

ಯಾದಗಿರಿ | ಮತದಾನದಿಂದ ಪ್ರಜಾಪ್ರಭುತ್ವದ ಬಲವರ್ಧನೆ: ಮರುಳಸಿದ್ದಾರಾಧ್ಯ ಎಚ್.ಜೆ.

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 7:53 IST
Last Updated 26 ಜನವರಿ 2026, 7:53 IST
ಯಾದಗಿರಿಯಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಯುವಮತದಾರರಿಗೆ ನ್ಯಾಯಾಧೀಶ ಮರುಳಸಿದ್ದಾರಾಧ್ಯ ಎಚ್.ಜೆ. ಅವರು ಮತದಾನದ ಗುರುತಿನ ಚೀಟಿ ವಿತರಿಸಿದರು. ಅಧಿಕಾರಿಗಳು ಉಪಸ್ಥಿತರಿದ್ದರು 
ಯಾದಗಿರಿಯಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಯುವಮತದಾರರಿಗೆ ನ್ಯಾಯಾಧೀಶ ಮರುಳಸಿದ್ದಾರಾಧ್ಯ ಎಚ್.ಜೆ. ಅವರು ಮತದಾನದ ಗುರುತಿನ ಚೀಟಿ ವಿತರಿಸಿದರು. ಅಧಿಕಾರಿಗಳು ಉಪಸ್ಥಿತರಿದ್ದರು    

ಯಾದಗಿರಿ: ‘ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಬಲವರ್ಧನೆಗೊಂಡು ಯಶಸ್ವಿಯಾಗಲು ಅರ್ಹ ಮತದಾರರು ತಪ್ಪದೇ ಮತ ಚಲಾಯಿಸಬೇಕು’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಮರುಳಸಿದ್ದಾರಾಧ್ಯ ಎಚ್.ಜೆ. ಹೇಳಿದರು.

ಇಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಭಾನುವಾರ ಭಾರತೀಯ ಚುನಾವಣಾ ಆಯೋಗ, ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಕಚೇರಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸದೃಢ ಭಾರತ ನಿರ್ಮಾಣ ಹಾಗೂ ಕಲ್ಯಾಣಕ್ಕಾಗಿ ಅರ್ಹ ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ತಮ್ಮ ಮತ ಚಲಾಯಿಸಬೇಕು. ಶ್ರೇಷ್ಠವಾದ ಮತವನ್ನು ನಿರ್ಭೀತಿಯಿಂದ ಚಲಾಯಿಸಿ ಕರ್ತವ್ಯದ ಪಾಲನೆ ಮಾಡಬೇಕು. ಹನಿ ಹನಿ ಕೂಡಿದರೆ ಹಳ್ಳ ಎಂಬಂತೆ, ಪ್ರತಿಯೊಂದು ಮತ ಅಮೂಲ್ಯವಾಗಿದೆ. ಈ ಹಿನ್ನೆಲೆಯಲ್ಲಿ ತಪ್ಪದೇ ಮತ ಚಲಾಯಿಸಬೇಕು’ ಎಂದರು.

ADVERTISEMENT

‘ಮತದಾನ ಐಚ್ಛಿಕವಾಗಿದೆ. ನನ್ನ ದೇಶ, ನನ್ನ ರಾಷ್ಟ್ರ, ನನ್ನ ಮತ ಮುಖ್ಯ ಎಂದು ಭಾವಿಸಿ ಮತ ಚಲಾಯಿಸಬೇಕು. ದೇಶದಲ್ಲಿ ಈವರೆಗೆ ಹಲವು ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗಳು ನಡೆದಿವೆ. ಭಾರತದ ಯಾವುದೇ ಮೂಲೆಯಲ್ಲಿ ಅತ್ಯುತ್ತಮ ಮತದಾನ ನಡೆದಲ್ಲಿ ಆಡಳಿತವೂ ಅತ್ಯಂತ ಯಶಸ್ವಿಯಾಗಿದೆ. ಮತದಾನ ಸಂವಿಧಾನಿಕ ಹಾಗೂ ಮೂಲಭೂತ ಹಕ್ಕಾಗಿದೆ. ದೇಶದ ಐಕ್ಯತೆ, ಸಮಾನತೆಯ ಪ್ರತೀಕವಾಗಿದೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಮಾತನಾಡಿ, ‘ರಾಜ್ಯ ಹಾಗೂ ರಾಷ್ಟ್ರದ ಅಭಿವೃದ್ಧಿಯಲ್ಲಿ ಚುನಾಯಿತ ಪ್ರತಿನಿಧಿಗಳ ಪಾತ್ರ ಅಪಾರವಾಗಿದೆ. ಐದು ವರ್ಷಗಳವರೆಗೆ ಇರುವ ಚುನಾಯಿತ ಪ್ರತಿನಿಧಿಗಳು ಕಾನೂನು ರೂಪಿಸುವ, ರಾಜ್ಯ ಹಾಗೂ ರಾಷ್ಟ್ರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ನಾಗರಿಕರು ಚುನಾವಣಾ ಪ್ರಕ್ರಿಯೆಗಳಲ್ಲಿ ಉತ್ಸಾಹದಿಂದ ಭಾಗವಹಿಸಬೇಕು’ ಎಂದರು.

‘ಚುನಾವಣಾ ಆಯೋಗವು ಈಚೆಗೆ ದೇಶದ ನಾಗರಿಕರ ಮೇಲೆ ಹೆಚ್ಚಿನ ಜವಾಬ್ದಾರಿ ನೀಡಿದೆ. ಮತದಾರರ ಪಟ್ಟಿ ಪರಿಷ್ಕರಣೆ ಅನ್ವಯ ನಲವತ್ತು ವರ್ಷದೊಳಗಿನ ಹಾಗೂ ನಲವತ್ತು ವರ್ಷ ಮೇಲ್ಪಟ್ಟವರ ಅಧಿಕೃತ ದಾಖಲಾತಿಗಳ ಸಲ್ಲಿಕೆ ಆಧಾರದ ಮೇಲೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅವಕಾಶ ಕಲ್ಪಿಸಿದೆ. ನಿಗದಿತ ಅರ್ಜಿ ನಮೂನೆಗಳ ಮೂಲಕ ಮತದಾರರ ಪಟ್ಟಿಯಲ್ಲಿ ಅರ್ಹರು ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬೇಕು. ನಿಗದಿತ ಆ್ಯಪ್‌ ಮತ್ತು ಆನ್‌ಲೈನ್‌ ಮೂಲಕ ನೋಂದಣಿಗೆ ಅವಕಾಶವಿದೆ’ ಎಂದು ಹೇಳಿದರು 

ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಅತ್ಯುತ್ತಮ ಬೂತ್ ಮಟ್ಟದ ಬಿಎಲ್‌ಒ, ಬಿಎಲ್‌ಒ ಮೇಲ್ವಿಚಾರಕರು, ಅತ್ಯುತ್ತಮ ಚುನಾವಣಾ ಶಿರಸ್ತೇದಾರರು, ಡೇಟಾ ಎಂಟ್ರಿ ಆಪರೇಟರ್‌ಗಳು, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಯುವ ಮತದಾರರಿಗೆ ಮತದಾನದ ಗುರುತಿನ ಚೀಟಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ, ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಕುಮುಲಯ್ಯ, ಡಿವೈಎಸ್ಪಿ ಸುರೇಶ್, ಯುವಸಬಲೀಕರಣ ಹಾಗೂ ಕ್ರೀಡಾಧಿಕಾರಿ ರಾಜು ಭಾವಿಹಳ್ಳಿ, ಶಿಕ್ಷಕ ಗುರುಲಿಂಗಯ್ಯ ಹಿರೇಮಠ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.