ADVERTISEMENT

ಯಾದಗಿರಿ | ಬುದ್ಧನ ಮೂರ್ತಿ ಧ್ವಂಸ: ಜೂನ್‌ 28ರಂದು ಪ್ರತಿಭಟನೆ

ದಲಿತ ಸಂಘಟನೆಗಳ ಒಕ್ಕೂಟದಿಂದ ಮೆರವಣಿಗೆ, ಆರ್‌ಎಫ್‌ಒ ವಜಾಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 5:06 IST
Last Updated 28 ಜೂನ್ 2022, 5:06 IST

ಯಾದಗಿರಿ: ಜಿಲ್ಲೆಯ ಗುರುಮಠಕಲ್‌ ತಾಲ್ಲೂಕಿನ ನಜರಾಪುರ ಗ್ರಾಮದಲ್ಲಿರುವ ಪುರಾತನ ಬುದ್ಧನ ಮೂರ್ತಿ ಹಾಗೂ ಕಟ್ಟೆಯನ್ನು ಧ್ವಂಸ ಮಾಡಿದ ಅರಣ್ಯಧಿಕಾರಿ ಸುನಿಲ್ ಕುಮಾರ್ ಅವರನ್ನು ಸೇವೆಯಿಂದ ವಜಾ ಮಾಡಬೇಕು. ಯಥಾವತ್ತಾಗಿ ಅದೇ ಜಾಗದಲ್ಲಿ ಬುದ್ಧನ ಮೂರ್ತಿಯನ್ನು ಪುನರ್ ಸ್ಥಾಪಿಸಲು ಒತ್ತಾಯಿಸಿ ಜೂನ್ 28ರಂದು ಬೆಳಿಗ್ಗೆ 10 ಗಂಟೆಗೆ ನಗರದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಬೀದರ್‌ನ ಅಣದೂರು ಬುದ್ಧವಿಹಾರ ಪೂಜ್ಯ ಭಂತೆ ವರಜ್ಯೋತಿ ತಿಳಿಸಿದರು.

ಈ ಹಿಂದೆ 2020ರ ಸೆಪ್ಟೆಂಬರ್‌ 18ರಂದು ಅಂದಿನ ಜಿಲ್ಲಾಧಿಕಾರಿ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರೂ ಯಾವುದೇ ಸಂರಕ್ಷಣೆ ಮಾಡಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಇದೇ ಜೂನ್ 24ರಂದು ಸಂಜೆ 4 ಗಂಟೆಗೆ ಅರಣ್ಯಧಿಕಾರಿ ಸುನಿಲ್ ಕುಮಾರ್ ಎಂಬುವವರ ನೇತೃತ್ವದಲ್ಲಿ ಬುದ್ಧನ ಮೂರ್ತಿ, ಕಟ್ಟೆಯನ್ನು ಒಡೆದು ಅವಮಾನ ಮಾಡಿದ್ದಾರೆ. ಅಲ್ಲದೇ ಡಾ.ಬಿ.ಆರ್‌.ಅಂಬೇಡ್ಕರ್ ಅವರ ಮೂರ್ತಿಯನ್ನು ಧ್ವಂಸ ಮಾಡಿ ದೇಶದ ಗೌತಮ ಬುದ್ಧರ ಮತ್ತು ಬಾಬಾಸಾಹೇಬರ ಅನುಯಾಯಿಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಗ್ರಾಮಸ್ಥರು ಅರಣ್ಯಾಧಿಕಾರಿಗಳಾದ ಸುನಿಲ್ ಕುಮಾರ್ ಅವರಿಗೆಕೈಮುಗಿದು ಬೇಡಿಕೊಂಡರೂ ಕೇಳದೆ ಘಟನೆಗೆ ಅವರೇ ನೇರವಾಗಿ ಕಾರಣರಾಗಿದ್ದಾರೆ. ಹೀಗಾಗಿ ಅವರನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ನಗರದ ಸುಭಾಷ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ‍್ರತಿಭಟನೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.

ADVERTISEMENT

ನಜರಾ‍ಪುರ ಗ್ರಾಮದ ಸರ್ವೆ ನಂಬರ್ 139/83/1 ಕೆಲವು ವರ್ಷಗಳಿಂದ ಗ್ರಾಮಸ್ಥರು ಅಲ್ಲಿ ಸಿಕ್ಕಿರುವ ಬುದ್ಧನ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಅಲ್ಲದೆ ಜಿಲ್ಲಾಧಿಕಾರಿ ಹಾಗೂ ಅರಣ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಈ ಜಾಗದಲ್ಲಿ ಪುರಾತನ ಬುದ್ಧನ ಬುದ್ಧನ ಮೂರ್ತಿ ಸಿಕ್ಕಿದೆ. ಈ ಸ್ಥಳವನ್ನು ಪುರಾತತ್ವ ಇಲಾಖೆಯಿಂದ ಸರ್ವೆ ಮಾಡಿಸಿ ಐತಿಹಾಸಿಕ ಬುದ್ಧ ಸ್ಥಳವನ್ನಾಗಿ ಮಾಡಬೇಕೆಂದು ಮನವಿ ಮಾಡಲಾಗಿತ್ತು. ಆದರೂ ಜಿಲ್ಲಾಡಳಿತದಿಂದ ಸರ್ವೇ ಕಾರ್ಯ ಆಗಿಲ್ಲ. ಆಗಿನ ಜಿಲ್ಲಾಧಿಕಾರಿಯಾಗಲಿ, ಅರಣ್ಯಾಧಿಕಾರಿಗಳಾಗಲಿ ಯಾವುದೇ ರೀತಿಯಲ್ಲಿ ಸ್ಪಂದಿಸಲಿಲ್ಲ ಆರೋಪಿಸಿದರು.

ಈ ವೇಳೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ಭೀಮ ಘರ್ಜನೆಯ ರಾಜ್ಯ ಸಂಚಾಲಕ ನಾಗಣ್ಣ ಕಲ್ಲದೇವನಹಳ್ಳಿ, ಡಿಎಸ್ಎಸ್ (ಸಾಗರ ಬಣ) ಜಿಲ್ಲಾ ಸಂಚಾಲಕ ಶಿವಪುತ್ರಪ್ಪ ಜವಳಿ, ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಕೆ.ಬಿ.ವಾಸು ಮಾತನಾಡಿ,ಬುದ್ಧನ ಮೂರ್ತಿಯನ್ನು ಜೆಸಿಬಿಯಿಂದ ಕೆಡವಿರುವುದು ಬುದ್ಧನ ಅನುಯಾಯಿಗಳಿಗೆ ನೋವಾಗಿದೆ. ಇಂಥ ಕೆಲಸವನ್ನು ಮಾಡಿದವರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜ್ಯ ಮತ್ತು ಜಿಲ್ಲೆಯಲ್ಲಿರುವ ಬೌದ್ಧ ಸ್ಮಾರಕವನ್ನು ರಕ್ಷಿಸಬೇಕು. ಇಂಥ ಘಟನೆಯನ್ನು ಖಂಡಿಸುತ್ತೇವೆ ಎಂದು ಹೇಳಿದರು.

ಡಿಎಸ್ಎಸ್ ಜಿಲ್ಲಾ ಸಂಚಾಲಕ ಮರೆಪ್ಪ ಚಟ್ಟರ್‌ಕರ್, ಮೂಲನಿವಾಸಿ ಅಂಬೇಡ್ಕರ್ ಸೇನೆ ರಾಜ್ಯ ಸಂಚಾಲಕ ರಾಹುಲ್ ಹುಲಿಮನಿ, ಜಿಲ್ಲಾ ಸಂಚಾಲಕ ಮುನಿಯಪ್ಪನವರ, ಡಿಎಸ್ಎಸ್ ಜಿಲ್ಲಾ ಸಂಚಾಲಕ ಶರಣು ನಾಟೇಕರ್‌, ಕಾಶಿನಾಥ್ ಬೀರನಾಳ, ಪ್ರಭು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.