ADVERTISEMENT

ಹೊರಗುತ್ತಿಗೆ ಹುದ್ದೆ ನೀಡಲು ಸೂಚನೆ

ಒಂದೇ ಕುಟುಂಬದ 6 ಮಂದಿ ಆತ್ಮಹತ್ಯೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 3:32 IST
Last Updated 5 ಜುಲೈ 2021, 3:32 IST
ಶಹಾಪುರ ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಮೃತ ಭೀಮರಾಯ ಸುರಪುರ ಅವರ ಮನೆ ಮುಂದೆ ಕುಳಿತ ಕುಟುಂಬದ ಹಿರಿಯ ಅಣ್ಣ ಮಲ್ಲಿಕಾರ್ಜುನ
ಶಹಾಪುರ ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಮೃತ ಭೀಮರಾಯ ಸುರಪುರ ಅವರ ಮನೆ ಮುಂದೆ ಕುಳಿತ ಕುಟುಂಬದ ಹಿರಿಯ ಅಣ್ಣ ಮಲ್ಲಿಕಾರ್ಜುನ   

ಶಹಾಪುರ: ತಾಲ್ಲೂಕಿನ ದೋರನಹಳ್ಳಿ ಗ್ರಾಮದ ನಾಲ್ಕು ಮಕ್ಕಳೊಂದಿಗೆ ಭೀಮರಾಯ ಸುರಪುರ ದಂಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಿಲ್ಲಾಡಳಿತ ಮಾನವೀಯತೆ ತೋರಿದೆ. ಭೀಮರಾಯ ಕುಟುಂಬದಲ್ಲಿ ಉಳಿದಿರುವ ಏಕೈಕ ಮಗಳು ಚಂದ್ರಕಲಾ ಅವರನ್ನು ನಗರಸಭೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸಿಪಾಯಿ ಹುದ್ದೆಗೆ ನೇಮಕ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಆರ್.ರಾಗಪ್ರಿಯಾ ನಗರಸಭೆಯ ಪೌರಾಯುಕ್ತರಿಗೆ ಸೂಚಿಸಿದ್ದಾರೆ.

ಶಹಾಪುರ ನಗರಸಭೆಗೆ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ನೀಡಿರುವ ‘ಪೂಜಾ ಲೇಬರ್ ಕಾಂಟ್ರ್ಯಾಕ್ಟರ್’ ಮಾಲೀಕರಿಗೆ ತಕ್ಷಣವೇ ದೋರನಹಳ್ಳಿ ಗ್ರಾಮದ ಚಂದ್ರಕಲಾ ಭೀಮರಾಯ ಸುರಪುರ ಅವರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿ ನಗರಸಭೆಯಲ್ಲಿ ಸಿಪಾಯಿ ಹುದ್ದೆಗೆ ನಿಯೋಜಿಸುವಂತೆ ಜಿಲ್ಲಾಧಿಕಾರಿ ಆದೇಶದಂತೆ ಸೂಚಿಸಲಾಗಿದೆ. ಇನ್ನೆರಡು ದಿನದಲ್ಲಿ ತಾತ್ಕಾಲಿಕ ನೇಮಕಾತಿ ಆದೇಶ ನೀಡಲಾಗುವುದು ಎಂದು ನಗರಸಭೆಯ ಪೌರಾಯುಕ್ತ ರಮೇಶ ಪಟ್ಟೆದಾರ ತಿಳಿಸಿದರು.

ಚಂದ್ರಕಲಾ ಅವರನ್ನು ಕೇವಲ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡರೆ ಸಾಲದು ನಗರಸಭೆಯಲ್ಲಿ ಖಾಯಂ ಹುದ್ದೆ ನೀಡಿ ಬದುಕಿಗೆ ಭದ್ರತೆ ನೀಡಬೇಕು ಎಂದು ಕೃಷಿಕೂಲಿ ಕಾರ್ಮಿಕ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ದಾವಲಸಾಬ್ ನದಾಫ್ ಮನವಿ ಮಾಡಿದ್ದಾರೆ.

ADVERTISEMENT

ಹಿನ್ನೆಲೆ: ಗ್ರಾಮದ ಭೀಮರಾಯ ಸುರಪುರ ದಂಪತಿಯ ಐವರು ಮಕ್ಕಳಲ್ಲಿ ಚಂದ್ರಕಲಾ ಹಿರಿಯ ಮಗಳು. ಮೇ 21ರಂದು ಸಗರ ಗ್ರಾಮದ ವರನಿಗೆ ಮದುವೆ ಮಾಡಿಕೊಟ್ಟಿದ್ದರು. ಜೂನ್‌ 28 ರಂದು ನಾಲ್ಕು ಮಕ್ಕಳೊಂದಿಗೆ ಭೀಮರಾಯ ದಂಪತಿ ಕೃಷಿ ಹೊಂಡದಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಭೀಮರಾಯನ ಕುಟುಂಬದಲ್ಲಿ ಉಳಿದಿರುವ ಏಕೈಕ ಮಗಳು ಚಂದ್ರಕಲಾ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.