ಯಾದಗಿರಿ: ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡಿ, ಕ್ಷೇತ್ರದ ಪಾವಿತ್ರ್ಯತೆ ಕೆಡಿಸಲಾಗುತ್ತಿದೆ ಎಂದು ಆರೋಪಿಸಿ ಶ್ರೀ ಧರ್ಮಸ್ಥಳ ಅಭಿಮಾನಿಗಳ ವೇದಿಕೆಯ ಮುಖಂಡರು ನಗರದಲ್ಲಿ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಇಲ್ಲಿನ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ನೂರಾರು ಪ್ರತಿಭಟನಕಾರರು ಜಮಾಯಿಸಿದರು. ‘ಸತ್ಯ ಮೇವ ಜಯತೆ’, ‘ಧರ್ಮೋ ರಕ್ಷತಿ ರಕ್ಷಿತಃ’, ‘ನಾವು ಧರ್ಮ ಸ್ಥಳದ ಜೊತಗೆ ಇದ್ದೇವೆ’, ‘ನಮ್ಮ ಪೂಜ್ಯರು ನಮ್ಮ ಹೆಮ್ಮೆ’, ‘ಪೂಜ್ಯ ಹೆಗ್ಗಡೆಯವರ ಜೊತೆಗೆ ನಾವಿದ್ದೇವೆ’, ‘ತಪ್ಪು ಸಂದೇಶ ನೀಡುತ್ತಿರುವ ಯೂಟ್ಯೂಬರ್‌ಗಳಿಗೆ ಧಿಕ್ಕಾರ...’ ಎಂಬ ನಾಮಫಲಕಗಳನ್ನು ಹಿಡಿದರು. ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಜಾಥಾ ನಡೆಸಿದರು.
ಅನಾಮಿಕ ಒಬ್ಬರು ನೀಡಿದ ದೂರಿನ ಆಧಾರದ ಮೇಲೆ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ ರಚಿಸಿ ತನಿಖೆ ಮಾಡುತ್ತಿರುವುದನ್ನು ಸ್ವಾಗತಿಸುತ್ತೇವೆ. ತನಿಖೆಯಲ್ಲಿ ಈ ತಂಡಕ್ಕೆ ಏನಾದರೂ ಸಿಕ್ಕಿದೆಯಾ? ಹಾಗಿದರೇ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಬಿಡುತ್ತಿರುವವರ ವಿರುದ್ಧ ಕ್ರಮ ಏಕಿಲ್ಲ? ತಕ್ಷಣವೇ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಸುಮಾರು 800 ವರ್ಷಗಳ ಇತಿಹಾಸವಿರುವ ಧಾರ್ಮಿಕ ಕ್ಷೇತ್ರಕ್ಕೆ ನಿತ್ಯ ಲಕ್ಷಾಂತರ ಭಕ್ತರು ಭೇಟಿ ಕೊಡುತ್ತಾರೆ. ಧರ್ಮಸ್ಥಳ ಮಂಜುನಾಥ ದೇವಾಲಯ ಮತ್ತು ಗುರುಗಳಾದ ಹೆಗ್ಗಡೆ ಅವರ ಬಗ್ಗೆ ಕಿಳ್ಳುಮಟ್ಟದ ಭಾಷೆ ಬಳಸಿ ವಿಡಿಯೊ ತುಣುಕುಗಳನ್ನು ಹರಿಬಿಡಲಾಗುತ್ತಿದೆ. ಇಂತಹ ನೀಚ ಕೆಲಸ ಸರ್ಕಾರಕ್ಕೆ ಕಾಣಿಸುತ್ತಿಲ್ಲವೆ ಎಂದು ಪ್ರಶ್ನಿಸಿದರು.
ಕೋಟ್ಯಂತರ ಭಕ್ತರ ಭಾವನೆಗಳಿಗೆ ಧಕ್ಕೆ ಆಗುತ್ತಿದ್ದರೂ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರನವು ಮೌನಕ್ಕೆ ಶರಣಾಗಿದೆ. ಶಾಂತಿ ಭಂಗ ಮಾಡಿ ಅಶಾಂತಿಯನ್ನೂ ಹುಟ್ಟುಹಾಕುತ್ತಿದೆ. ಕಲುಷಿತ ಮನಸ್ಸಿನವರ ವಿರುದ್ಧ ಕೂಡಲೇ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಎಸ್‌ಐಟಿ ಇದುವರೆಗೆ ನಡೆಸಿರುವ ಶೋಧನೆಯಲ್ಲಿ ಯಾವುದೇ ಮಾನವ ಅಸ್ಥಿಪಂಜರದ ಕುರುಹುಗಳು ದೊರಕಿಲ್ಲದ ಕಾರಣ ತನಿಖೆ ನಿಲ್ಲಿಸಬೇಕು, ಅನಾಮಿಕ ವ್ಯಕ್ತಿಯನ್ನು ಬಂಧಿಸಿ ಶಿಕ್ಷೆ ನೀಡಬೇಕು, ಶ್ರದ್ಧಾ ಕೇಂದ್ರದ ವಿರುದ್ಧ ಅಪಪ್ರಚಾರ ನಡೆಸಿರುವ ನಕಲಿ ಹೋರಾಟಗಾರರ ವಿರುದ್ಧ ಕ್ರಮಕೈಗೊಳ್ಳವೇಕು ಎಂದು ಆಗ್ರಹಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ನಾಗರತ್ನ ಅನಪುರ, ವೀರ ಭಾರತಿ ಪ್ರತಿಷ್ಠಾನದ ಅಧ್ಯಕ್ಷ ವೈಜನಾಥ ಹಿರೇಮಠ, ವಕೀಲ ನಾಗರಾಜ ಬಿರನೂರ ಭಕ್ತರಾದ ಶಾಂತಪ್ಪ ಕಾನಳ್ಳಿ, ಸ್ವಾಮಿದೇವ ದಾಸನಕೇರಿ, ವೀರುಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ, ದೀಪಾ, ದುರ್ಗಾಬಾಯಿ, ನಮೀತಾ, ರೇಣುಕಾ, ಬಾನುಬೇಗಂ, ಶಬಾನಾ ಆಫ್ರಿನ್, ಸೂಗುರೇಶ ವಾರದ, ಪ್ರಕಾಶ ಅಂಗಡಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಸಂಚಾರ ದಟ್ಟಣೆ; ಪರದಾಡಿದ ವಾಹನಗಳ ಸವಾರರು
ನಗರದಲ್ಲಿ ಸರಣಿ ಪ್ರತಿಭಟನಾ ಮೆರವಣಿಗೆಗಳು ನಡೆದಿದ್ದರಿಂದ ಯಾದಗಿರಿ- ಕಲಬುರಗಿ ರಸ್ತೆ ಶಹಾಪುರ- ಯಾದಗಿರಿ ರಸ್ತೆಯಲ್ಲಿ ವಾಹನಗಳ ದಟ್ಟಣೆಯಾಗಿ ವಾಹನ ಸವಾರರು ಪರದಾಡಿದರು. ಸುಭಾಷ್ ವೃತ್ತದಲ್ಲಿ ವಾಲ್ಮೀಕಿ ನಾಯಕರ ಸಮುದಾಯದ ಸಾವಿರಾರು ಜನರು ಜಮಾಯಿಸಿದರು. ಈ ಮಾರ್ಗದ ವಾಹನಗಳನ್ನು ಬೇರೊಂದು ರಸ್ತೆಯ ಮೂಲಕ ತೆರಳುವಂತೆ ಪೊಲೀಸರು ಸೂಚಿಸಿದರು. ಬಹುತೇಕ ವಾಹನಗಳು ಸೇಡಂ ರಸ್ತೆಯ ಮೂಲಕ ಸಾಗಿದವು. ಧರ್ಮಸ್ಥಳದ ಭಕ್ತರು ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಸಮಿತಿ ಮುಖಂಡರು ಸಹ ಪ್ರತಿಭಟನೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.