ADVERTISEMENT

ಹುಣಸಗಿ: ಆಧಾರ್ ನೋಂದಣಿ, ತಿದ್ದುಪಡಿಗಾಗಿ ಪರದಾಟ

ದಿನ ಪೂರ್ತಿ ಸರದಿಯಲ್ಲಿ ಕಾಯುತ್ತಿರುವ ಮಹಿಳೆಯರು, ಮಕ್ಕಳು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2023, 7:32 IST
Last Updated 18 ಅಕ್ಟೋಬರ್ 2023, 7:32 IST
ಹುಣಸಗಿ ಪಟ್ಟಣದ ತಹಶೀಲ್ದಾರ್ ಕಚೇರಿ ಬಳಿಯಿರುವ ಆಧಾರ್ ಸೇವಾ ಕೇಂದ್ರದಲ್ಲಿ ಮುಗಿಬಿದ್ದಿರುವ ಜನರು
ಹುಣಸಗಿ ಪಟ್ಟಣದ ತಹಶೀಲ್ದಾರ್ ಕಚೇರಿ ಬಳಿಯಿರುವ ಆಧಾರ್ ಸೇವಾ ಕೇಂದ್ರದಲ್ಲಿ ಮುಗಿಬಿದ್ದಿರುವ ಜನರು   

–ಭೀಮಸೇನರಾವ ಕುಲಕರ್ಣಿ

ಹುಣಸಗಿ: ಸರ್ಕಾರಿ ಸೌಲಭ್ಯ ಪಡೆದುಕೊಳ್ಳಲು ಆಧಾರ್ ಕಾರ್ಡ್ ಅತ್ಯಂತ ಅಗತ್ಯವಾಗಿ ಬೇಕು. ಆದರೆ ಹುಣಸಗಿ ತಾಲ್ಲೂಕಿನಲ್ಲಿ ಆಧಾರ್ ಕಾರ್ಡ್ ಪಡೆದುಕೊಳ್ಳಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹುಣಸಗಿ ತಾಲ್ಲೂಕು ವ್ಯಾಪ್ತಿಯಲ್ಲಿ ಎರಡು ಹೊಬಳಿಯ ಸಮಾರು 82 ಹಳ್ಳಿಗಳು ಹಾಗೂ ತಾಂಡಾಗಳು ಬರುತ್ತವೆ. ಆದರೆ ಆಧಾರ್ ಕಾರ್ಡ್ ಪಡೆದುಕೊಳ್ಳಲು ಹಾಗೂ ತಿದ್ದುಪಡಿ ಮಾಡಿಬೇಕಾದರೇ ತಿಂಗಳು ಗಟ್ಟಲೇ ಕಾಯುವಂತಾಗಿದೆ. ಹಲವಾರು ಗ್ರಾಮೀಣ ಜನರು ತಮ್ಮ ಸೌಲಭ್ಯಗಳಿಂದ ವಂಚಿತವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ಇಡೀ ತಾಲ್ಲೂಕು ವ್ಯಾಪ್ತಿಯಲ್ಲಿ ಕೇವಲ ಒಂದೇ ಒಂದು ಸೇವಾ ಕೇಂದ್ರ ಹುಣಸಗಿಯಲ್ಲಿ ತಹಶೀಲ್ದಾರ್ ಕಚೇರಿಯ ಬಳಿಯಿದ್ದು, ಆಧಾರ್ ತಿದ್ದುಪಡಿಗಾಗಿ ತಾಲ್ಲೂಕಿನ ಜನರು ಪಟ್ಟಣಕ್ಕೆ ಬೆಳಿಗ್ಗೆಯಿಂದ ಬಂದು ಸರದಿಯಲ್ಲಿ ದಿನ ಪೂರ್ತಿ ಕಾಯುವಂತಾಗಿದೆ. ಆದರೂ ನಿಗದಿತ ಸಮಯದಲ್ಲಿ ಕೆಲಸವಾಗುತ್ತಿಲ್ಲ ಎಂಬ ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ ಎಂದು ಇಲ್ಲಿನ ಸಾರ್ವಜನಿಕರು ಹೇಳುತ್ತಾರೆ.

ತಾಲ್ಲೂಕಿನಲ್ಲಿರುವ ಈ ಏಕೈಕ ಸೇವಾ ಕೇಂದ್ರದಲ್ಲಿ ಅತ್ಯಂತ ಕಡಿಮೆ ಸ್ಥಳಾವಕಾಶ ಇರುವುದರಿಂದಾಗಿ ಮಹಿಳೆಯರು ಮಕ್ಕಳು ವೃದ್ಧರು ನೂಕಾಟ, ತಳ್ಳಾಟದಲ್ಲಿ ಹೈರಾಣಾಗುವಂತಾಗಿದೆ ಎಂದು ಶರಣಬಸು ಕೊಡೇಕಲ್ಲ ಹಾಗೂ ಚನ್ನಪ್ಪ ಹೇಳುತ್ತಾರೆ.

ಗ್ರಾ.ಪಂನ ಬಾಪೂಜಿ ಸೇವಾ ಕೇಂದ್ರದಲ್ಲಿ ಆಧಾರ್ ನೋಂದಣಿ ಕುರಿತು ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು. ಕೊಡೇಕಲ್ಲದಲ್ಲಿ ಎರಡು ದಿನದಲ್ಲಿ ನೋಂದಣಿ ಕಾರ್ಯ ಆರಂಭಿಸಲಾಗುವದು
ಬಸಲಿಂಗಪ್ಪ ನೈಕೋಡಿ ತಹಶಿಲ್ದಾರ್ ಹುಣಸಗಿ

ಇಲ್ಲಿನ ಸೇವಾ ಪ್ರತಿನಿಧಿ ಹೇಳುವಂತೆ ಸರಿಯಾದ ರೀತಿಯಲ್ಲಿ ನೆಟ್ ವರ್ಕ್ ಹಾಗೂ ಸರ್ವರ್‌ ಇದ್ದರೆ ನಿತ್ಯ 30 ಜನರ ಆಧಾರ್ ನೋಂದಣಿ ಹಾಗೂ ತಿದ್ದುಪಡಿಗೆ ಸಾಧ್ಯವಾಗುತ್ತದೆ. ಆದರೆ ಕಳೆದ ಎರಡು ತಿಂಗಳಿನಿಂದ ನಿತ್ಯ ನೂರಾರು ಜನರು ಬಂದು ನಮ್ಮ ಕೆಲಸ ಮಾಡಿಕೊಡಿ ಎಂದು ಕೂಗಾಡುತ್ತಾರೆ. ಹೇಗೆ ಮಾಡಲು ಸಾಧ್ಯ ಎಂದು ಸಮಸ್ಯೆಯ ತೀವ್ರತೆ ಕುರಿತು ತಿಳಿಸಿದರು.

ಹಿಂದೆ ಹುಣಸಗಿ ಅಂಚೆ ಕಚೇರಿಯಲ್ಲಿ ಹಾಗೂ ಕೊಡೇಕಲ್ಲ ನಾಡಕಚೇರಿಯಲ್ಲಿ ಸೌಲಭ್ಯ ಕಲ್ಪಿಸಲಾಗುತ್ತಿತ್ತು. ಆದರೆ ಕೆಲ ತಿಂಗಳಿನಿಂದ ಅಲ್ಲಿ ಸ್ಥಗಿತವಾಗಿದ್ದರಿಂದ ಒಂದೇ ಕೇಂದ್ರಕ್ಕೆ ಹೆಚ್ಚಿನ ಸಾರ್ವಜನಿಕರು ಆಗಮಿಸುತ್ತಿದ್ದಾರೆ ಎಂದು ಸೇವಾ ಪ್ರತಿನಿಧಿ ಯಲ್ಲಯ್ಯ ಮಾಹಿತಿ ನೀಡಿದರು.

ಸದ್ಯ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ ಪ್ರಕ್ರೀಯೆ ಹಾಗೂ ಶಾಲಾ ದಾಖಲಾತಿಗೆ, ವಿದ್ಯಾರ್ಥಿ ವೇತನ.. ಹೀಗೆ ಆಧಾರ್ ಅಗತ್ಯವಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ತಮ್ಮ ಮಕ್ಕಳೊಂದಿಗೆ ಸುಮಾರು 50 ಕಿ.ಮೀ ದೂರದ ನಾರಾಯಣಪುರ, ಎಣ್ಣಿವಡಗೇರಾ, ಮದಲಿಂಗಾಳ, ಕೊಡೇಕಲ್ಲ, ಸೇರಿದಂತೆ ಮಾಳನೂರು, ಬೆನಕನಹಳ್ಳಿ, ಕನ್ನಳ್ಳಿ, ಕೂಡಲಗಿ, ಮುದನೂರು ಮತ್ತಿತರ ಗ್ರಾಮಗಳಿಂದ ಬರುತ್ತಾರೆ. ವಾರಗಟ್ಟಲೆ ಕಾಯುವ ಪರಿಸ್ಥಿತಿ ಇದೆ ಎಂದು ಶರಣಪ್ಪ ಮದಲಿಂಗನಾಳ, ಉಮೇಶ ಕನ್ನೇಳ್ಳಿ ಹೇಳಿದರು.

ಹುಣಸಗಿ ಪಟ್ಟಣದ ತಹಶೀಲ್ದಾರ್ ಕಚೇರಿ ಬಳಿಯಿರುವ ಆಧಾರ್ ಸೇವಾ ಕೇಂದ್ರದಲ್ಲಿ ಮುಗಿಬಿದ್ದಿರುವ ಜನರು

ಸೌಲಭ್ಯಗಳ ಕೊರತೆ: ಸೇವಾ ಕೇಂದ್ರಕ್ಕೆ ಸಾರ್ವಜನಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ. ಆಗಮಿಸಿದ ಸಂದರ್ಭದಲ್ಲಿ ಕುಡಿಯುವ ನೀರು, ನೆರಳು ಹಾಗೂ ದಿನಪೂರ್ತಿ ಇಲ್ಲಿಯೇ ಇರುವ ಅನಿವಾರ್ಯ ಇರುವುದರಿಮದಾಗಿ ಮಹಿಳೆಯರು ತೊಂದರೆ ಪಡುವಂತಾಗಿದೆ. ಸೂಕ್ತ ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕಿದೆ.

ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಸೂಕ್ತ ಕ್ರಮಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ಆಧಾರ್ ಸೇವಾ ಕೌಂಟರ್ ಹೋಬಳಿ ವ್ಯಾಪ್ತಿಯಲ್ಲಿ ಆರಂಭಿಸುವ ಮೂಲಕ ಹೆಚ್ಚಿನ ಕಾಳಜಿ ವಹಿಸಲಿ ಎಂದು ಕರವೇ ತಾಲ್ಲೂಕು ಘಟಕದ ಶಿವಲಿಂಗ ಪಟ್ಟಣಶೆಟ್ಟಿ, ಬಸವರಾಜ ಚನ್ನೂರು ಹಾಗೂ ಭ್ರಷ್ಟಾಚಾರ ನಿಗ್ರಹ ದಳದ ಅಧ್ಯಕ್ಷ ಕಾಶಿನಾಥ ಹಾದಿಮನಿ ಆಗ್ರಹಿಸಿದ್ದಾರೆ.

ವಾರದಲ್ಲಿ ಸಮಸ್ಯೆ ಬಗೆಹರಿಯದಿದ್ದರೇ ಹೋರಾಟ ರೂಪಿಸುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.