ADVERTISEMENT

ಗುರುಮಠಕಲ್‌ | ಉದ್ಯಮಿಗಳಾಗಿ ಉದ್ಯೋಗ ಸೃಷ್ಟಿಸಿ: ನಾಗರಾಜ

ವಿಕಲಚೇತನರ ಸ್ವಯಂ ಉದ್ಯೋಗ ತರಬೇತಿ ಶಿಬಿರ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 4:52 IST
Last Updated 16 ನವೆಂಬರ್ 2025, 4:52 IST
ಗುರುಮಠಕಲ್‌ ಪಟ್ಟಣದ ಸಿಎಚ್‌ಸಿಯಲ್ಲಿ ಶುಕ್ರವಾರ ಸ್ವಯಂ ಉದ್ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಜರುಗಿತು
ಗುರುಮಠಕಲ್‌ ಪಟ್ಟಣದ ಸಿಎಚ್‌ಸಿಯಲ್ಲಿ ಶುಕ್ರವಾರ ಸ್ವಯಂ ಉದ್ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಜರುಗಿತು   

ಗುರುಮಠಕಲ್‌: ‘ನಾವು ಅಂಗ ವೈಕಲ್ಯವನ್ನೇ ಶಪಿಸುತ್ತಾ, ನಮ್ಮಲ್ಲಿನ ಸಾಮರ್ಥ್ಯವನ್ನು ಕಡೆಗಣಿಸುವುದು ಬೇಡ. ಸೌಲಭ್ಯಗಳ ಲಾಭ ಪಡೆದು ಉದ್ಯಮಿಗಳಾಗಬೇಕು ಮತ್ತು ನಮ್ಮಂತ ಅಂಗವಿಕಲರಿಗೆ ಉದ್ಯೋಗಗಳನ್ನು ಸೃಷ್ಟಿಸೋಣ’ ಎಂದು ಎಪಿಡಿ ಸಂಸ್ಥೆ ಜೀವನಚಕ್ರ ವಿಧಾನ ಯೋಜನೆ ವ್ಯವಸ್ಥಾಪಕ ನಾಗರಾಜ ಕರೆ ನೀಡಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ (ಸಿಎಚ್‌ಸಿ) ಶುಕ್ರವಾರ ಜರುಗಿದ ದಿ ಅಸೋಸಿಯೇಶನ್‌ ಪೀಪಲ್ಸ್‌ ವಿಥ್‌ ಡಿಸೇಬಲಿಟಿ (ಎಪಿಡಿ) ಸಂಸ್ಥೆಯ ವತಿಯಿಂದ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ಆಯೋಜಿಸಿದ್ದ ‘ಮೂರು ದಿನಗಳ ವಿಕಲಚೇತನರ ಸ್ವಯಂ ಉದ್ಯೋಗ ತರಬೇತಿ ಶಿಬಿರ’ದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರತಿಯೊಬ್ಬರಲ್ಲೂ ಕೌಶಲವಿದೆ, ಸಾಧಿಸುವ ಮನೋಭಾವ, ವೇದಿಕೆ, ಬೆಂಬಲ ಮತ್ತು ಸತತ ಪರಿಶ್ರಮವಿದ್ದರೆ ಎಷ್ಟೇ ಸಮಸ್ಯೆಯಿದ್ದರೂ ಯಶಸ್ಸು ಸಾಧಿಸಲು ಸಾಧ್ಯ. ಅಂಗವಿಕಲತೆ ನಮ್ಮ ಯಶಸ್ಸನ್ನು ತಡೆಯದು. ಮಾನಸಿಕ ಸ್ಥೈರ್ಯ, ಲಭ್ಯವಿದ್ದ ಅವಕಾಶಗಳ ಸದ್ಬಳಕೆಯಿಂದ ಮುಖ್ಯವಾಹಿನಿಗೆ ಬರಬೇಕು ಮತ್ತು ಸ್ವಾವಲಂಭಿಗಳಾಗಿ ಇತರರಿಗೆ ಮಾದರಿಯಾಗಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಎಪಿಡಿ ಸಂಸ್ಥೆಯ ತಾಲ್ಲೂಕು ಸಂಯೋಜಕ ವೀರೂಪಾಕ್ಷ ಮಾಲಿಪಾಟೀಲ ಮಾತನಾಡಿ, ‘ನಮ್ಮ ಸಂಸ್ಥೆಯು ಅಂಗವಿಕಲರ ಅಭಿವೃದ್ಧಿ, ಸ್ವಾವಲಂಭಿ ಜೀವನಕ್ಕಾಗಿ ಬುಧವಾರ(ನ.12) ರಿಂದ ಮೂರು ದಿನಗಳ ತರಬೇತಿ ಶಿಬಿರ ಆಯೋಜಿಸಿದೆ. ಶಿಬಿ‍ರದಲ್ಲಿ ಅವಶ್ಯಕ ಮಾಹಿತಿ, ಸಂಪರ್ಕ ಮತ್ತು ಆಸಕ್ತ ಅರ್ಹ ಫಲಾನುಭವಿಗಳಿಗೆ ₹10 ಸಾವಿರ ಸೀಡ್‌ ಫಂಡ್‌ ನೀಡುತ್ತದೆ ’ಎಂದು ತಿಳಿಸಿದರು.

ಶಿಬಿರದಲ್ಲಿ ಕುಕ್ಕುಟೋದ್ಯಮ, ಕುರಿ ಸಾಕಾಣಿಕೆ, ಹೈನುಗಾರಿಕೆ, ಹ್ಯಾಂಡ್‌ ಕ್ರಾಫ್ಟ್‌, ಅಣಬೆ ಬೇಸಾಯ, ಚರ್ಮಶಿಲ್ಪ, ಎಲ್‌ಇಡಿ ಬಲ್ಬ್‌ ತಯಾರಿ ಸೇರಿದಂತೆ ವಿವಿಧ ಸ್ವ ಉದ್ಯೋಗಗಳ ಕುರಿತು ತರಬೇತಿ ನೀಡಲಾಯಿತು.

ಸಂಸ್ಥೆಯ ಎಲ್‌ಸಿಎ ಸಂಪ್ರೀತಾ, ಜೀವನೋಪಾಯ ಸಂಪನ್ಮೂಲ ವ್ಯಕ್ತಿ ಶಿವಯೋಗಪ್ಪ, ಶಿಲ್ಪಾ ಎಸ್‌., ನಾಗಮಣಿ, ಗಂಗಪ್ಪ, ಶಿಲ್ಪಾ ಎಂ., ಸುರೇಶ, ಯಲ್ಲಪ್ಪ, ಪಾರ್ವತಿ ಸೇರಿದಂತೆ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.