ADVERTISEMENT

‘ದಲಿತರಿಗೆ ರಕ್ಷಣೆ ನೀಡದ ಸರ್ಕಾರ ವಜಾ ಮಾಡಿ’

ಉತ್ತರ ಪ್ರದೇಶದ ಹಾಥರಸ್‌ ಯುವತಿ ಮೇಲೆ ಅತ್ಯಾಚಾರ, ಕೊಲೆ ಘಟನೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2020, 15:41 IST
Last Updated 5 ಅಕ್ಟೋಬರ್ 2020, 15:41 IST
ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಬಳಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು
ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಬಳಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು   

ಯಾದಗಿರಿ: ಉತ್ತರ ಪ್ರದೇಶದ ಹಾಥರಸ್, ಬಲರಾಂಪುರ ಜಿಲ್ಲೆಯ ಯುವತಿಯರ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ವಿವಿಧ ಸಂಘಟನೆಗಳಿಂದ ಸೋಮವಾರ ಇಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಮನವಿಪತ್ರ ಸಲ್ಲಿಸಲಾಯಿತು.

ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕ: ದಸಂಸ ಜಿಲ್ಲಾ ಸಂಚಾಲಕ ಮರೆಪ್ಪ ಚಟ್ಟೆರಕರ್ ಮಾತನಾಡಿ, ದಲಿತರಿಗೆ ಭದ್ರತೆ ನೀಡದ ಸರ್ಕಾರವನ್ನು ವಜಾಗೊಳಿಸಬೇಕು. ಉತ್ತರ ಪ್ರದೇಶದಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ಅಪರಾಧದ ಘಟನೆಗಳು ನಡೆಯುತ್ತಿವೆ. ಇದು ರಾಜ್ಯದಲ್ಲಿ ಅರಾಜಕತೆ ತಾಂಡವವಾಡುತ್ತಿದೆ ಎಂಬುದನ್ನು ನಿರೂಪಿಸಿದೆ ಎಂದು ಆರೋಪಿಸಿದರು.

ADVERTISEMENT

ಅತ್ಯಾಚಾರ ಘಟನೆಗಳನ್ನು ತಡೆಗಟ್ಟಲು ಉತ್ತರ ಪ್ರದೇಶ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಅಲ್ಲದೆ ಬಲರಾಂಪುರ ಎಂಬಲ್ಲಿಯೂ ಶಾಲಾ ಬಾಲಕಿಗೆ ಮತ್ತೇರಿಸುವ ಚುಚ್ಚುಮದ್ದು ನೀಡಿ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿದೆ. ಈ ಎಲ್ಲ ಕಾರಣಗಳಿಗಾಗಿ ಉತ್ತರ ಪ್ರದೇಶ ಸರ್ಕಾರವನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.

ನಂತರ ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು.

ಗೋಪಾಲ ತೆಳಗೇರಿ, ಸೈದಪ್ಪ ಕೂಲೂರು, ಮಲ್ಲಿನಾಥ ಸುಂಗಲ್ಕರ್, ಶಿವಕುಮಾರ ಕುರಕುಂಬಳ, ಶಿವಕುಮಾರ ಗಿರೆಪ್ನೋರ, ಸಂಪತ್ ಚಿನ್ನಾಕಾರ, ವಸಂತ ಸುಂಗಲ್ಕರ್, ಹುಸೇನಪ್ಪ ಕೌಳೂರು, ಭೀಮಣ್ಣ ಸುಂಗಲ್ಕರ್, ಮರಿಲಿಂಗ ಕುರುಕುಂಬಳ, ಗೌತಮ ಅರಿಕೇರಿ, ದತ್ತು ಈಟೆ ಇದ್ದರು.

ಜಯ ಕರ್ನಾಟಕ ಸಂಘಟನೆ:

ಜಿಲ್ಲಾಧಿಕಾರಿ ಕಚೇರಿ ಎದುರು ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಬಿ.ಎನ್.ವಿಶ್ವನಾಥ ನಾಯಕ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಯುವತಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವುದು ಮಾನವೀಯತೆಗೆ ಮಾಡಿದ ಘೋರ ಅಪಚಾರ ಎಂದು ಬಿ.ಎನ್.ವಿಶ್ವನಾಥ ನಾಯಕ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಮೊಗದಂಪುರ ಮಾತನಾಡಿ, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುತ್ತೇವೆ ಎಂದು ಮಾತಿನಲ್ಲಿ ಹೇಳಿದರೆ ಸಾಲದು. ಕೃತ್ಯದಲ್ಲಿ ತೋರಿಸಿ ಎಂದು ಆಗ್ರಹಿಸಿದರು.

ಈ ವೇಳೆ ಶಿವರಾಜ ಗುತ್ತೇದಾರ, ಮಾರುತಿ ಮುದ್ನಾಳ, ಸಾಬರೆಡ್ಡಿ ಶೆಟ್ಟಿಗೇರಿ, ವೆಂಕಟೇಶ ಯಾದಗಿರಿ, ನಾಗರಾಜ ರಾಮಸಮುದ್ರ, ವಿಶ್ವಾರಾಧ್ಯ ಹುಲಕಲ್, ದಶರಥ ಶಟ್ಟೆಗೇರಿ, ಸ್ವಾಮಿ ಶೆಟ್ಟಿಗೇರಿ, ವಿಶಾಲ ಕೌಳೂರು, ಹಣಮಂತ ಬೀರನಾಳ, ಮಾನು ವಿಶ್ವಕರ್ಮ ಹೆಡಗಿಮುದ್ರಾ ಇದ್ದರು.

ದಲಿತ ಸೇನೆ: ಅಮಾನವೀಯ ಕೃತ್ಯದ ಆರೋಪಿಗಳ ವಿರುದ್ಧ ಸಾಕ್ಷ್ಯ ನಾಶ ಪಡಿಸಿದ ಉತ್ತರ ಪ್ರದೇಶ ಪೊಲೀಸ್ ಅಧಿಕಾರಿಗಳ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿ ಕೇಸು ದಾಖಲಿಸಿ ಜೈಲಿಗೆ ಕಳಿಸಬೇಕು ಮತ್ತು ಯೋಗಿ ಸರ್ಕಾರ ವಜಾಗೊಳಿಸುವಂತೆ ಆಗ್ರಹಿಸಿ ದಲಿತ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಹೊಸಮನಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ದಲಿತ ಸೇನೆ ಯುವ ಜಿಲ್ಲಾಧ್ಯಕ್ಷ ಸದಾಶಿವ, ನಿಂಗಣ್ಣ ಗೋನಾಲ, ಹುಲಗಪ್ಪ, ಹಣಮಂತ ಕಟ್ಟಿಮನಿ, ಮೌನೇಶ ಚಿಂಚೋಳಿ, ಮಾನಪ್ಪ ಝಂಡದಕೇರಿ, ಬನ್ನಪ್ಪ ಕೋನಾಳ, ಗ್ಯಾನಪ್ಪ ಬಿ ಕಾಂಬ್ಳೆ, ಮಾನಪ್ಪ ಚಲುವಾದಿ, ನಿಂಗಪ್ಪ ಕಾಂಬಳೆ, ತಾಯಪ್ಪ ಕಟ್ಟಿಮನಿ, ನಾಗು ಗೋಗಿಕೇರಾ ಇದ್ದರು.

ವೀರ ಸಿಂಧೂರ ಲಕ್ಷ್ಮಣ ಸಮಿತಿ:ಯುವತಿ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ವೀರ ಸಿಂಧೂರ ಲಕ್ಷ್ಮಣ ಜಿಲ್ಲಾ ಹೋರಾಟ ಸಮಿತಿ ಜಿಲ್ಲಾ ಘಟಕದಿಂದ ಮನವಿ ಸಲ್ಲಿಸಲಾಯಿತು.

ದೇಶದಲ್ಲಿ ಬಡ ದಲಿತರಿಗೊಂದು ನ್ಯಾಯ ಉಳ್ಳವರಿಗೊಂದು ನ್ಯಾಯ ಎಂಬಂತಾಗಿದೆ. ತೆಲಂಗಾಣದಲ್ಲಿ ಪ್ರಿಯಾಂಕಾ ರೆಡ್ಡಿ ಅತ್ಯಾಚಾರಿಗಳಿಗೆ ತಕ್ಷಣ ಎನ್‌ಕೌಂಟರ್ ಮಾಡಿದರೆ ದಲಿತರ ಯುವತಿಯ ಮೇಲೆ ನಡೆದ ಘಟನೆ ಜರುಗಿ 15 ದಿನಗಳಾದರೂ ಯಾವುದೇ ಶಿಕ್ಷೆ ನೀಡಿಲ್ಲ. ಇಂಥ ತಾರತಮ್ಯ ಸರಿಯಲ್ಲ ಎಂದು ಆಗ್ರಹಿಸಿದರು.

ಸಮಿತಿ ಜಿಲ್ಲಾಧ್ಯಕ್ಷ ಸಾಬಣ್ಣ ಪರಸನಾಯಕ, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಣ್ಣಸಾಬಯ್ಯ ನಾಯಕ, ಜಿಲ್ಲಾ ಯುವ ಘಟಕದ ಅಧ್ಯಕ್ಷ ನರಸಪ್ಪ ನಾಯಕ, ವಿಶ್ವನಾಥ ನಾಯಕ ಹಳಿಗೇರಿ, ಮಹೇಶ ಚಂದನಕರ್ ಇದ್ದರು.

***

ದೇಶದಲ್ಲಿ ಪರಿಶಿಷ್ಟ ಜಾತಿಯವರ ಮೇಲೆ ನಿರಂತರ ಹಲ್ಲೆ, ದೌರ್ಜನ್ಯ, ಅತ್ಯಾಚಾರ, ಅಪಹರಣ, ಕೊಲೆ, ಸುಲಿಗೆ ಸಾಮಾಜಿಕ ಬಹಿಷ್ಕಾರದಂಥ ಪ್ರಕರಣಗಳು ಎಗ್ಗಿಲ್ಲದೇ ನಡೆಯುತ್ತಿವೆ
-ಅಶೋಕ ಹೊಸಮನಿ,ದಲಿತ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.