ADVERTISEMENT

ಹುಣಸಗಿ ಜನ ಸಂಪರ್ಕ ಸಭೆ 

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 16:13 IST
Last Updated 11 ಏಪ್ರಿಲ್ 2025, 16:13 IST
ಹುಣಸಗಿ ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಎಸ್ಪಿ ಪೃಥ್ವಿಕ್ ಶಂಕರ್ ಮಾತನಾಡಿದರು.  
ಹುಣಸಗಿ ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಎಸ್ಪಿ ಪೃಥ್ವಿಕ್ ಶಂಕರ್ ಮಾತನಾಡಿದರು.     

ಹುಣಸಗಿ: ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸದಾ ಮುಂಚೂಣಿಯಲ್ಲಿದ್ದು ಸಾರ್ವಜನಿಕರ ಸಹಕಾರವೂ ಅಗತ್ಯ ಎಂದು ಎಸ್ಪಿ ಪೃಥ್ವಿಕ್ ಶಂಕರ್ ಹೇಳಿದರು.

ಹುಣಸಗಿ ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

’ಕಾನೂನು ಬಾಹಿರವಾಗಿ ನಡೆಯುವ ಯಾವುದೇ ಚಟುವಟಿಕೆ ಬಗ್ಗೆ ಮಾಹಿತಿ ಒದಗಿಸಿದಲ್ಲಿ ಮಾಹಿತಿದಾರರ ಕುರಿತು ಗೌಪ್ಯತೆ ಕಾಪಾಡುವ ಜೊತೆಯಲ್ಲಿ ತಕ್ಷಣವೇ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಜಿಲ್ಲೆ ಹಾಗೂ ಹುಣಸಗಿ ಸರ್ಕಲ್ ವ್ಯಾಪ್ತಿಯಲ್ಲಿ ಈಗಾಗಲೇ ಆನ್ ಲೈನ್ ಬೆಟ್ಟಿಂಗ್ ದಂಧೆ ಮೇಲೆ ದಾಳಿ ಮಾಡಲಾಗಿದೆ. ಸುರಪುರ 8 ಪ್ರಕರಣ, ಹುಣಸಗಿಯಲ್ಲಿ 2 ಪ್ರಕರಣ ದಾಖಲಾಗಿದೆ. ಯುವಕರು ಆಟದ ಮೋಸ ಜಾಲಕ್ಕೆ ಬಲಿಯಾಗಬಾರದು. ಜೂಜಾಟದಿಂದ ಗೆದ್ದವರು ಯಾರೂ ಇಲ್ಲ ಎಂದು ಕಿವಿ ಮಾತು ಹೇಳಿದರು.

ಪ್ರತಿ ತಿಂಗಳ ನಾಲ್ಕನೇ ವಾರ ದಲಿತರ ದಿನ ಹಾಗೂ ಉಳಿದಂತೆ ಯುವಕರ ದಿನ ಕುರಿತು ಸಭೆ ಕೈಗೊಂಡು ಕುಂದುಕೊರತೆಗಳ ಬಗ್ಗೆ ವಿಚಾರಿಸಿ, ಕಾನೂನಿನ ತಿಳುವಳಿಕೆ ಕೊಡಲಾಗುತ್ತಿದೆ ಎಂದರು.

ADVERTISEMENT

ಸಭೆಯಲ್ಲಿ ಸಾಮೂಹಿಕ ಸಂಘಟನೆಗಳ ಪ್ರಮುಖರಾದ ದೇವಿಂದ್ರಪ್ಪ ಬಳಿಚಕ್ರ, ಶರಣಪ್ಪ ಗುಳಬಾಳ ಮಾತನಾಡಿ, ತುಳಿತಕ್ಕೆ ಒಳಗಾಗುತ್ತಿರುವವರಿಗೆ ಕಾನೂನು ನೆರವು ಹಾಗೂ ಭರವಸೆ ಪರಿಣಾಮಕಾರಿಯಾಗಿ ನಡೆಯಲಿ ಎಂದರು.

ಜುಮ್ಮಣ್ಣ ಗುಡಿಮನಿ ಹಾಗೂ ವಿರೇಶ ಗುಳಬಾಳ ಮಾತನಾಡಿ, ಆನ್‌ಲೈನ್ ಬೆಟ್ಟಿಂಗ್ ಜೊತೆಗೆ ಇಸ್ಪಿಟ್ ಜೂಜು ಹೆಚ್ಚು ನಡೆಯುತ್ತಿವೆ. ಇದನ್ನು ಕೂಡಲೇ ನಿಯಂತ್ರಿಸಬೇಕು. ಸಭೆಗಳ ಮಾಹಿತಿ ಮೊದಲೇ ತಿಳಿಸುವಂತಾಗಲಿ ಹಾಗೂ ಬೈಲಕುಂಟಿ ಜಮೀನಿನಲ್ಲಿ ಕಬ್ಬು ಕಟಾವು ವಿಷಯ ಅಲ್ಲದೆ ಮಾಳನೂರು ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಸೂಕ್ತ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.

ಬೇಡ ಜಂಗಮ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ನಾಗಯ್ಯಸ್ವಾಮಿ ದೇಸಾಯಿಗುರು ಹಾಗೂ ಕರವೇ ತಾಲ್ಲೂಕು ಗೌರವಾಧ್ಯಕ್ಷ ಶಿವರಾಜ ಹೊಕ್ರಾಣಿ, ವಾಲ್ಮೀಕಿ ಸಮಾಜದ ತಾಲ್ಲೂಕು ಅಧ್ಯಕ್ಷ ಬಸನಗೌಡ ಪಾಟೀಲ್ ಮಾತನಾಡಿದರು.

ಡಿವೈಎಸ್ಪಿ ಜಾವೀದ್ ಇನಾಮದಾರ್, ಸಿಪಿಐ ರವಿಕುಮಾರ, ಪಿಎಸ್ಐ ಚಂದ್ರಶೇಖರ ನಾರಾಯಣಪುರ, ಭಾಗಣ್ಣ.ಕೆ ಇದ್ದರು.

ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಪ್ರಮುಖರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.