ADVERTISEMENT

ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತ ಸಿದ್ಧ: ಡಾ.ರಾಗಪ್ರಿಯಾ ಆರ್

ಭಾರತೀಯ ಜೈನ್ ಸಂಘಟನೆಯಿಂದ 200 ಆಮ್ಲಜನಕ ಸ್ಟೀಮರ್ ವಿತರಣೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2021, 2:03 IST
Last Updated 2 ಜೂನ್ 2021, 2:03 IST
ಯಾದಗಿರಿಯಲ್ಲಿ ಭಾರತೀಯ ಜೈನ್ ಸಂಘಟನೆ ವತಿಯಿಂದ ನೀಡಿದ 200 ಆಮ್ಲಜನಕ ಸ್ಟೀಮರ್‌ಗಳನ್ನು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ವಿತರಿಸಿದರು
ಯಾದಗಿರಿಯಲ್ಲಿ ಭಾರತೀಯ ಜೈನ್ ಸಂಘಟನೆ ವತಿಯಿಂದ ನೀಡಿದ 200 ಆಮ್ಲಜನಕ ಸ್ಟೀಮರ್‌ಗಳನ್ನು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ವಿತರಿಸಿದರು   

ಯಾದಗಿರಿ: ಜಿಲ್ಲೆಯಲ್ಲಿ ಎರಡನೇ ಅಲೆ ಕೋವಿಡ್‌ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿದ್ದು, ಈಗ ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತ ಸಿದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಹೇಳಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಮಂಗಳವಾರ ಭಾರತೀಯ ಜೈನ್ ಸಂಘಟನೆ ವತಿಯಿಂದ ನೀಡಿದ 200 ಆಮ್ಲಜನಕ ಸ್ಟೀಮರ್ ವಿತರಿಸಿ ಮಾತನಾಡಿದ ಅವರು, ಈಗಾಗಲೇ ಹಲವಾರು ದಾನಿಗಳು ಜಿಲ್ಲಾಡಳಿತದೊಂದಿಗೆ ಸಹಕಾರ ನೀಡುತ್ತಿದ್ದಾರೆ ಎಂದರು.‌

ಕಳೆದ ಒಂದು ತಿಂಗಳಿಂದ ಕಠಿಣ ಪರಿಶ್ರಮದಿಂದ ಕೊರೊನಾವನ್ನು ನಿಯಂತ್ರಣಕ್ಕೆ ತಂದಿದ್ದೇವೆ. ಮೊದಮೊದಲು ನಮಗೆ ಬಹಳಷ್ಟು ಕೊರತೆಗಳು ಇದ್ದವು. ಆದರೆ, ಪ್ರಸ್ತುತ 240ಕ್ಕೂ ಹೆಚ್ಚಿನ ಆಮ್ಲಜನಕ ಬೆಡ್‌ಗಳು, 40 ಎಚ್‌ಎಫ್‌ಎನ್‌ಸಿ ಆಮ್ಲಜನಕ ಯಂತ್ರಗಳು, 20 ಹೆಚ್ಚುವರಿ ವೆಂಟಿಲೇಟರ್‌ಗಳು ಇದ್ದು, ವಿವಿಧ ಸಂಘ-ಸಂಸ್ಥೆಗಳಿಂದ 200 ಆಮ್ಲಜನಕ ಕಾನ್ಸ್‌ಟ್ರೇಟರ್‌ಗಳು ದಾನವಾಗಿ ಸಿಕ್ಕಿವೆ ಎಂದು ವಿವರಿಸಿದರು.

ADVERTISEMENT

ಕೋವಿಡ್ ಸಾಂಕ್ರಾಮಿಕ ರೋಗ ನಿರ್ಮೂಲನೆ ನಿಟ್ಟಿನಲ್ಲಿ ಎಂತಹ ಕಠಿಣ ಪರಿಸ್ಥಿತಿ ಬಂದರೂ ನಾವು ಎದುರಿಸಲು ಸಿದ್ದರಿದ್ದೇವೆ. ಜಿಲ್ಲಾಡಳಿತಕ್ಕೆ ಎಲ್ಲಾ ವರ್ಗದ ಜನರಿಂದ ಬಹಳ ಸಹಕಾರ ಸಿಗುತ್ತದೆ. ಇನ್ನೂ ನಾವು ಕೊರೊನಾ ಪ್ರಕರಣಗಳನ್ನು ಶೂನ್ಯವಾಗುವ ತನಕ ಶ್ರಮಿಸಬೇಕಿದೆ. ಸ್ವಯಂ ಸೇವಾ ಸಂಸ್ಥೆಗಳು ಈಗಲಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

ಸಂಘಟನೆಯ ಮುಖಂಡ ಬಾಬು ದೋಖಾ ಪ್ರಾಸ್ತಾವಿಕ ಮಾತನಾಡಿ, ಯಾದಗಿರಿ ಜೈನ್ ಸಮಾಜದ ದೋಖಾ ಪರಿವಾರವು ನೈಸರ್ಗಿಕವಾಗಿ ವಿಕೋಪದ ತೊಂದರೆಗಳಾದಲ್ಲಿ ಜಿಲ್ಲಾಡಳಿತ ಜೊತೆ ಕೈ ಜೋಡಿಸಿದೆ. ನಮ್ಮ ಊರು, ರಾಜ್ಯ, ದೇಶ ಸುಖಶಾಂತಿಯಿಂದ ಇರಲಿ ಎಂಬುದೇ ನಮ್ಮ ಉದ್ದೇಶ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಮಾತನಾಡಿ, ಉಳ್ಳವರು ಇಲ್ಲದವರಿಗೆ ಧನ, ಆಹಾರ ಧಾನ್ಯ ನೀಡುವ ಮೂಲಕ ಅವರ ನೆರವಿಗೆ ಬರಬೇಕು. ಜಿಲ್ಲೆಯಲ್ಲಿ ಪೊಲೀಸರು ಲಾಠಿ ಪ್ರಯೋಗ ಮಾಡದಂತೆ ಸೂಚಿಸಿದ್ದೇನೆ. ಆದರೂ ಕೆಲ ಕಡೆ ಅನಿವಾರ್ಯವಾಗಿ ಲಾಠಿ ಪ್ರಹಾರ ನಡೆದಿದೆ. ದಂಡ, ವಾಹನ ವಶಪಡಿಸಿಕೊಳ್ಳಲು ತಿಳಿಸಿದ್ದೇನೆ. ಸಂಯಮದ ಕಟ್ಟೆ ಒಡೆದಾಗ ಈ ರೀತಿ ಆಗುತ್ತಿದೆ. ಮುಂದೆ ಹೀಗಾಗಂತೆ ನೋಡಿಕೊಳ್ಳುತ್ತೇನೆ ಎಂದರು.

ಜಿಲ್ಲಾಧಿಕಾರಿ ಕಚೇರಿಗೆ 20, ಜಿಲ್ಲಾ ಪಂಚಾಯಿತಿಗೆ 20, ಎಸ್‌ಪಿ ಕಚೆರಿಗೆ 50, ನಗರಸಭೆಗೆ 70, ಪತ್ರಕರ್ತರಿಗೆ 20 ಸ್ಟೀಮರ್‌ಗಳನ್ನು ಸಂಘಟನೆ ಮುಖಂಡರಾದ ಬಾಬು ದೋಖಾ, ಗೌತಮಚಂದಜಿ ದೋಖಾ, ವಿನೋದ ಭಂಡಾರಿ, ರಾಜೇಶ ದೋಖಾ, ದಿನೇಶ ದೋಖಾ, ಅಜೀತ್‌ ಎಲ್‌ ದೋಖಾ, ಮುಖೇಶ್ ಕಂಡೇವಾಲ ಮತ್ತು ಜೈನ್‌ ಸಮುದಾಯದವರು ವಿತರಿಸಿದರು.

ಈ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿಲ್ಪಾ ಶರ್ಮಾ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ ರಜಪೂತ, ಹಿರಿಯ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ಯಾದಗಿರಿ ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ, ನಗರಸಭೆ ಪೌರಾಯುಕ್ತ ಭೀಮಣ್ಣ ನಾಯಕ ಮತ್ತು ಭಾರತೀಯ ಜೈನ್ ಸಂಘಟನೆಯ ಸದಸ್ಯರು ಇದ್ದರು.

ಜಿಲ್ಲಾಡಳಿತಕ್ಕೆ 3 ಟನ್ ಆಮ್ಲಜನಕ, 10 ಕಾನ್ಸ್‌ಟ್ರೇಟರ್ ಹಸ್ತಾಂತರ
ಯಾದಗಿರಿ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ (ಯೋಜನೆ) ವತಿಯಿಂದ ಜಿಲ್ಲಾಡಳಿತಕ್ಕೆ 3 ಟನ್‌ಗಳ ಲಿಕ್ವಿಡ್ ಆಮ್ಲಜನಕ ಹಾಗೂ 10 ಆಮ್ಲಜನಕ ಕಾನ್ಸ್‌ಟ್ರೇಟರ್‌ಗಳನ್ನು ಹಸ್ತಾಂತರಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್. ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಾದಗಿರಿ ಜಿಲ್ಲಾ ನಿರ್ದೇಶಕ ಕಮಲಾಕ್ಷ ಅವರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ವಿಮಾ ಸಮನ್ವಯಾಧಿಕಾರಿ ನಾಗರಾಜ, ಯಾದಗಿರಿ ತಾಲ್ಲೂಕು ಯೋಜನಾಧಿಕಾರಿ ರಾಘವೇಂದ್ರ ಇದ್ದರು.

ಮೂರನೇ ಅಲೆಯಲ್ಲಿ ಮಕ್ಕಳ ಐಸಿಯು ಬೆಡ್ ಮಾಡಬೇಕು. ‌ಆಮ್ಲಜನಕ ಬೆಡ್ ಹೆಚ್ಚಳ ಮಾಡಬೇಕಿದೆ.ಹೀಗಾಗಿ ನಾವು ಸಿದ್ಧವಾಗುತ್ತಿದ್ದೇವೆ.

ಡಾ. ರಾಗಪ್ರಿಯಾ ಆರ್.,ಜಿಲ್ಲಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.