ADVERTISEMENT

ಪೊಲೀಸರ ಕಾರ್ಯ ಶ್ಲಾಘನೀಯ: ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌.

ಪೊಲೀಸ್ ಹುತಾತ್ಮರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 5:01 IST
Last Updated 22 ಅಕ್ಟೋಬರ್ 2021, 5:01 IST
ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌.,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಗೌರವ ಸಮರ್ಪಿಪಿಸಿದರು
ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌.,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಗೌರವ ಸಮರ್ಪಿಪಿಸಿದರು   

ಯಾದಗಿರಿ: ‘ಕೋವಿಡ್‌ ಮೊದಲನೆ, ಎರಡನೇ ಅಲೆಯಲ್ಲಿ ಪೊಲೀಸರ ಕಾರ್ಯ ಶ್ಲಾಘನೀಯವಾಗಿದೆ. ಕಳೆದ ವರ್ಷ ಉಂಟಾದ ಭೀಮಾ ನದಿ ಪ್ರವಾಹದಲ್ಲೂ ಪೊಲೀಸರು ಉತ್ತಮವಾಗಿ ಕಾರ್ಯನಿರ್ಹಸಿದ್ದಾರೆ’ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌., ಅವರು ಶ್ಲಾಘಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಪೊಲೀಸ್ ಇಲಾಖೆ ವತಿಯಿಂದ ಕರ್ತವ್ಯದ ಪಾಲನೆಯಲ್ಲಿ ಪ್ರಾಣ ಸಮರ್ಪಿಸಿದ ಪೊಲೀಸರ ಸ್ಮರಣೆಗಾಗಿ ಆಯೋಜಿಸಲಾಗಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಕೋವಿಡ್‌ ಸಂದರ್ಭದಲ್ಲಿ ವಲಸೆ ಕಾರ್ಮಿಕರನ್ನು ಕ್ವಾರಂಟೈನ್‌ ಮಾಡಲು, ಈಗ ಕೋವಿಡ್‌ ಲಸಿಕೆ ಹಾಕಿಸಲು ಪೊಲೀಸ್‌ ಇಲಾಖೆ ಜಿಲ್ಲಾಡಳಿತದೊಂದಿಗೆ ಸಹಕಾರ ನೀಡುತ್ತಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ, ಅಸ್ಪಶ್ಯತೆ ತೊಲಗಿಸಲು ಗ್ರಾಮಗಳಲ್ಲಿ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಅಭಿನಂದಿಸಿದರು.

ಪೊಲೀಸರು ತಮ್ಮ ಕುಟುಂಬದ ಕೆಲಸಗಳನ್ನು ಬದಿಗೊತ್ತಿ ಸಾರ್ವಜನಿಕರ ಕಾರ್ಯಗಳಿಗಾಗಿ ದುಡಿಯುತ್ತಿದ್ದಾರೆ. ಗಣ್ಯ ವ್ಯಕ್ತಿಗಳ ಭದ್ರತೆಗಾಗಿ ಹಗಲಿರುಳು ಕಷ್ಟ ಪಡುತ್ತಿದ್ದಾರೆ. ಅಲ್ಲದೇ 1959ರಲ್ಲಿ ನಡೆದ ಕಾಳಗದಲ್ಲಿ ಪೊಲೀಸರು ವೀರಮರಣವನ್ನು ಅಪ್ಪಿದ್ದಾರೆ. ಅವರ ನೆನಪಿಗಾಗಿ ಹುತಾತ್ಮ ದಿನ ಮಾಡಲಾಗುತ್ತಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಮಾತನಾಡಿ, ‘1959ರ ಅಕ್ಟೋಬರ್ 21ರಂದು ಚೀನಾ-ಭಾರತ ಗಡಿ ಭಾಗದ ಹಾಟ್ ಸ್ಟ್ರೀಗ್ ಪೋಸ್ಟ್ ಹತ್ತಿರ ಸಿಆರ್‌ಪಿಎಫ್ ಡಿಎಸ್‍ಪಿ ಕರಣಸಿಂಗ್ ಅವರ ನೇತೃತ್ವದಲ್ಲಿ ಪೊಲೀಸ್ ದಳ ಪಹರೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಚೀನಾ ಸೈನಿಕರಿಂದ ಏಕಾಏಕಿ ದಾಳಿ ನಡೆಸುತ್ತಾರೆ. ಆ ಸಂದರ್ಭದಲ್ಲಿ ವೈರಿಗಳ ದಾಳಿಗೆ ವಿಚಲಿತರಾಗದೆ ತಮ್ಮ ಪ್ರಾಣದ ಹಂಗನ್ನು ತೊರೆದು ಕೊನೆಯುಸಿರಿನವರೆಗೂ ಧೈರ್ಯದಿಂದ ಹೋರಾಡಿ ಪ್ರಾಣ ತೆತ್ತ 10 ಜನ ಭಾರತೀಯ ಪೊಲೀಸ್ ಯೋಧರ ಬಲಿದಾನದ ಸ್ಮರಣೆಯ ಪ್ರತೀಕವಾಗಿ ಪ್ರತಿ ವರ್ಷ ಅಕ್ಟೋಬರ್ 21ರಂದು ದೇಶದಾದ್ಯಂತ ಪೊಲೀಸ್ ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ’ ಎಂದು ತಿಳಿಸಿದರು.

ADVERTISEMENT

ನಂತರ ಒಂದು ವರ್ಷದಲ್ಲಿ ಕರ್ತವ್ಯದಲ್ಲಿರುವಾಗ ಹುತಾತ್ಮರಾದ ಪೊಲೀಸರ ಹೆಸರುಗಳನ್ನು ವಾಚಿಸಿದರು.

ಇದೇ ವೇಳೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ನಿವೃತ್ತ ಪೊಲೀಸ್‌ ಅಧಿಕಾರಿಗಳು, ಪತ್ರಕರ್ತರು, ಸಾರ್ವಜನಿಕರು ಹುತಾತ್ಮ ಪೊಲೀಸರ ಗೌರವಾರ್ಥ ಪುಷ್ಪಗುಷ್ಛ ಸಮರ್ಪಿಸಿದರು.

ಈ ವೇಳೆ ಯಾದಗಿರಿ ಡಿವೈಎಸ್‌ಪಿ ಸಂತೋಷ ಬನ್ನಟ್ಟಿ, ಸುರಪುರ ಡಿವೈಎಸ್‌ಪಿ ವೆಂಕಟೇಶ ಉಗಿಬಂಡಿ, ಮಹಿಳಾ ಪೊಲೀಸ್‌ ಠಾಣೆಯ ಸಿಪಿಐ ರಾಘವೇಂದ್ರ, ಯೂಡಾ ಅಧ್ಯಕ್ಷ ಬಸವರಾಜ ಚಂಡ್ರಕಿ, ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಮಾರುತಿ ಕಲಾಲ್‌, ಯಾದಗಿರಿ, ವಡಗೇರಾ ಠಾಣೆಯ ಪಿಎಸ್‌ಐಗಳು, ಸಿಬ್ಬಂದಿ, ಮೀಸಲು ಪಡೆ ಸಿಬ್ಬಂದಿ, ನಿವೃತ್ತ ಪೊಲೀಸ್‌ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.