ADVERTISEMENT

ಕನ್ನಡ ನುಡಿ, ಸಾಹಿತ್ಯ ಹಾಗೂ ಇತಿಹಾಸಕ್ಕೆ ಜಿಲ್ಲೆಯ ಕೊಡುಗೆ ಅನನ್ಯ: ಜಿಲ್ಲಾಧಿಕಾರಿ

ಹಲವು ದಾಸರಿಗೆ ಜನ್ಮ ನೀಡಿದ ಜಿಲ್ಲೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 16:15 IST
Last Updated 1 ನವೆಂಬರ್ 2020, 16:15 IST
ಯಾದಗಿರಿಯಲ್ಲಿ ಭಾನುವಾರ ನಡೆದ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್., ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು
ಯಾದಗಿರಿಯಲ್ಲಿ ಭಾನುವಾರ ನಡೆದ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್., ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು   

ಯಾದಗಿರಿ: ಕನ್ನಡ ನಾಡಿಗೆ ಜಿಲ್ಲೆಯ ಸಾಂಸ್ಕೃತಿಕ ಕೊಡುಗೆ ಅಪಾರ. ಆದ್ಯ ವಚನಕಾರ ದೇವರ ದಾಸಿಮಯ್ಯ ಇದೇ ಜಿಲ್ಲೆಯವರು ಎಂಬುದು ಹೆಮ್ಮೆಯ ವಿಚಾರ. ಸುರಪುರದ ಆನಂದ ದಾಸರು, ಕೆಂಭಾವಿ ಭೀಮೇಶ ದಾಸರು, ಚಂಡ್ರಿಕೆ ರಾಘವೇಂದ್ರ ದಾಸರು ಸೇರಿದಂತೆ ಹಲವಾರು ದಾಸರು ಜನ್ಮ ತಳೆದ ನಾಡಾಗಿದೆ ಈ ಜಿಲ್ಲೆ ಎಂದು ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್., ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ, ಭಾವೈಕ್ಯತಾ ಸಮಿತಿ, ಕನ್ನಡ ರಾಜ್ಯೋತ್ಸವ ದಿನಾಚರಣೆ ಸಮಿತಿ ಆಶ್ರಯದಲ್ಲಿ ನಗರದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಬ್ರಿಟಿಷರ ಅಧಿಕಾರದ ಅವಧಿಯಲ್ಲಿ ಹರಿದು ಹಂಚಿಹೋಗಿದ್ದ ಕರ್ನಾಟ ಕವನ್ನು ಏಕೀಕರಣ ಚಳವಳಿ ಮೂಲಕ ಹಲವು ವರ್ಷಗಳವರೆಗೆ ನಿರಂತರ ಹೋರಾಟ ನಡೆಸಿದ ಪ್ರತಿಫಲವಾಗಿ 1956ರ ನವೆಂಬರ್ 1ರಂದು ನಮ್ಮ ರಾಜ್ಯ ಉದಯವಾಯಿತು. ಇದಕ್ಕಾಗಿ ಹೋರಾಡಿದ ಅನೇಕ ಮಹನೀಯರನ್ನು, ಸಾಹಿತಿಗಳನ್ನು, ಸಂಘ ಸಂಸ್ಥೆಗಳನ್ನು, ಪತ್ರಿಕಾ ಮಾಧ್ಯಮದವರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

ADVERTISEMENT

ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸನಗೌಡ ಪಾಟೀಲ ಯಡಿಯಾಪುರ, ಉಪಾಧ್ಯಕ್ಷೆ ಗಿರಿಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಎಸ್. ಚಂಡ್ರಕಿ, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ, ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಶರ್ಮಾ, ಪ್ರೊಬೇಷನರಿ ಐಎಎಸ್ ಅಧಿಕಾರಿ ಅಶ್ವಿಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

ಲಿಂಗೇರಿ ಸ್ಟೇಷನ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕ ಚಂದ್ರಶೇಖರ ಗೋಗಿ ಹಾಗೂ ತಂಡದ ವರು ನಾಡಗೀತೆ ಹಾಡಿದರು. ಉಪನ್ಯಾಸಕಿ ಡಾ.ಜ್ಯೋತಿಲತಾ ತಡಿಬಿಡಿಮಠ ನಿರೂಪಿಸಿದರು. ಉಪವಿಭಾಗಾಧಿಕಾರಿ ಶಂಕರಗೌಡ ಎಸ್.ಸೋಮನಾಳ ವಂದಿಸಿದರು.

*
ಹಿರಿಯ ಸಾಹಿತಿ, ಸಂಶೋಧಕ ದೇವಿಂದ್ರಪ್ಪ ನಾಭಿರಾಜ್ ಅಕ್ಕಿ (ಡಿ.ಎನ್. ಅಕ್ಕಿ) ಅವರ ಸೇವೆಯನ್ನು ಗುರುತಿಸಿ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಜಿಲ್ಲೆಗೆ ಸಂದ ಹಿರಿಮೆ.
-ಡಾ. ರಾಗಪ್ರಿಯಾ ಆರ್., ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.