ಯಾದಗಿರಿ: ‘ಪಠ್ಯ, ಓದಿನ ಜೊತೆಗೆ ಕ್ರೀಡಾಕೂಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತರಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ತಾಲ್ಲೂಕು ಪಂಚಾಯಿತಿ ಹಾಗೂ ನಗರಸಭೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಿ.ಎಂ ಕಪ್ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕ್ರೀಡೆಗೆ ತನ್ನದೆಯಾದ ಮಹತ್ವ ಇದೆ. ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ನಮ್ಮ ಆರೋಗ್ಯವೂ ಉತ್ತಮವಾಗಿ ಇರುತ್ತದೆ. ಆಸಕ್ತಿ ಇರುವ ಕ್ರೀಡೆಯಲ್ಲಿ ನಿಶ್ಚಲವಾದ ಗುರಿ ಇರಿಸಿಕೊಂಡು ಉತ್ತಮವಾದ ಪ್ರದರ್ಶನ ನೀಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಬೆಳೆಯಬೇಕು’ ಎಂದರು.
‘ಕ್ರೀಡೆಯಲ್ಲಿ ಪಾಲ್ಗೊಂಡಿರುವ ಎಲ್ಲರೂ ಗೆಲುವು ಸಾಧಿಸಲು ಆಗುವುದಿಲ್ಲ. ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳಿಗೆ ಬಹುಮಾನ ಇರುತ್ತವೆ. ಹೀಗಾಗಿ, ತೀರ್ಪುಗಾರರ ತೀರ್ಮಾನಕ್ಕೆ ಬದ್ಧರಾಗಿ ಕ್ರೀಡಾ ಮನೋಭಾವವನ್ನು ಪ್ರದರ್ಶಿಸಬೇಕು’ ಎಂದು ಹೇಳಿದರು.
‘ಕ್ರೀಡಾಪಟುಗಳಿಗೆ ಸವಲತ್ತುಗಳನ್ನು ನೀಡುವ ಜವಾಬ್ದಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮೇಲಿದೆ. ಸರ್ಕಾರದಿಂದ ಕ್ರೀಡೆಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು. ಕ್ರೀಡಾಪಟುಗಳು ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು. ನಮ್ಮ ಜಿಲ್ಲೆಯ ಕ್ರೀಡಾಪಟುಗಳು ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡುವಂತೆ ಆಗಲಿ’ ಎಂದರು.
ಸಚಿವರು ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸಿ, ರಾಷ್ಟ್ರಮಟ್ಟದ ಜಾವೆಲಿನ್ ಎಸೆತಗಾರ ರೋಹಿತ್ ಅವರಿಂದ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿದರು. ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬೂರಾವ್ ಕಾಡ್ಲೂರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅನಿಲ್ ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಹಣುಮಂತ ದುಪ್ಪಲ್ಲಿ, ಭೀಮರಾಯ ಬೊಮ್ಮಣ ಉಪಸ್ಥಿತರಿದ್ದರು. ಯುವಜನಸೇವಾ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ ಸ್ವಾಗತಿಸಿದರು.
ಕ್ರೀಡಾಂಗಣದಲ್ಲಿ ಅವ್ಯವಸ್ಥೆ: ಕ್ರೀಡಾಪಟುಗಳ ಬೇಸರ ‘ತಾಲ್ಲೂಕು ಮಟ್ಟದ ಕ್ರೀಡಾಕೂಟಗಳಲ್ಲಿ ಆಟಗಾರರಿಗೆ ಸರಿಯಾದ ವ್ಯವಸ್ಥೆ ಮಾಡಿರಲಿಲ್ಲ. ಕಿತ್ತು ಹೋಗಿರುವ ಮೈದಾನದಲ್ಲಿ ಆಟಗಳನ್ನು ಆಡಿಸಿದ್ದರು. ಈಗ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿಯೂ ಅದೇ ಅವ್ಯವಸ್ಥೆಯನ್ನು ಮುಂದುವರಿಸಿದ್ದಾರೆ’ ಎಂದು ಆರೋಪಿಸಿ ಕೆಲವು ಕ್ರೀಡಾಪಟುಗಳು ಬೇಸರ ಹೊರ ಹಾಕಿದರು. ಸಚಿವರು ಕಾರ್ಯಕ್ರಮವನ್ನು ಮುಗಿಸಿಕೊಂಡು ವೇದಿಕೆಯಿಂದ ನಿರ್ಗಮಿಸುವಾಗ ಈ ಬಗ್ಗೆ ಅವರ ಗಮನಕ್ಕೂ ತಂದರು. ‘ರನ್ನಿಂಗ್ ಟ್ರ್ಯಾಕ್‌ನಲ್ಲಿ ಕಲ್ಲಿನ ದೊಡ್ಡ– ದೊಡ್ಡ ಹರಳುಗಳು ಬಿದ್ದಿವೆ. ಶೂ ಧರಿಸದೆ ಓಡುವಂತಿಲ್ಲ. ಕ್ರೀಡೆಯಲ್ಲಿ ಪಾಲ್ಗೊಂಡಿರುವ ಬಹುತೇಕ ಮಕ್ಕಳಲ್ಲಿ ಶೂ ಖರೀದಿಸುವಷ್ಟು ಹಣವಿಲ್ಲ. ಕಚ್ಚಾ ಮೊರುಮ್ ಟ್ರ್ಯಾಕ್‌ನಲ್ಲಿ ಓಡಿ ಬಿದ್ದು ಗಾಯ ಮಾಡಿಕೊಂಡರೆ ಯಾರು ಹೋಣೆ? ಉದ್ದ ಜಿಗಿತದ ಅಂಕಣದಲ್ಲಿಯೇ ವಾಹನಗಳನ್ನು ನಿಲ್ಲಿಸಿ ನಿರ್ಲಕ್ಷ್ಯ ತೋರಲಾಗಿದೆ’ ಎಂದು ಕ್ರೀಡಾಪಟು ಅಶೋಕ ರಾಠೋಡ್ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಜು ಬಾವಿಹಳ್ಳಿ ‘ಕಚ್ಚಾ ಟ್ರ್ಯಾಕ್ ಇರುವುದರಿಂದ ವೇದಿಕೆ ನಿರ್ಮಿಸುವಾಗ ಮತ್ತು ವಾಹನದ ಚಕ್ರಗಳಿಂದ ಟ್ರ್ಯಾಕ್‌ನ ಕೆಳಗೆ ಇದ್ದ ಹರಳುಗಳು ಮೇಲೆ ಬಂದಿವೆ. ಕ್ರೀಡಾಪಟುಗಳಿಗೆ ಅಗತ್ಯವಾದ ಸೌಕರ್ಯಗಳನ್ನು ಕಲ್ಪಿಸಲಾಗಿದೆ’ ಎಂದು ಸಮರ್ಥಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.