ADVERTISEMENT

ದೀಪಾವಳಿ ಅಮಾವಾಸ್ಯೆ: ಹೂ, ಕುಂಬಳಕಾಯಿಗೆ ಬೇಡಿಕೆ

ಹಬ್ಬಕ್ಕೆ ಬೆಲೆ ಏರಿಕೆ ಬಿಸಿ

ಬಿ.ಜಿ.ಪ್ರವೀಣಕುಮಾರ
Published 3 ನವೆಂಬರ್ 2021, 19:30 IST
Last Updated 3 ನವೆಂಬರ್ 2021, 19:30 IST
ಯಾದಗಿರಿಯ ಮಹಾತ್ಮ ಗಾಂಧಿ ವೃತ್ತದ ಸಮೀಪ ದೀಪಾವಳಿ ಅಮಾವಾಸ್ಯೆ ಅಂಗವಾಗಿ ಪೂಜಾ ಸಾಮಗ್ರಿ ಖರೀದಿಗೆ ಬಂದಿದ್ದ ಸಾರ್ವಜನಿಕರುಪ್ರಜಾವಾಣಿ ಚಿತ್ರಗಳು/ ರಾಜಕುಮಾರ ನಳ್ಳಿಕರ
ಯಾದಗಿರಿಯ ಮಹಾತ್ಮ ಗಾಂಧಿ ವೃತ್ತದ ಸಮೀಪ ದೀಪಾವಳಿ ಅಮಾವಾಸ್ಯೆ ಅಂಗವಾಗಿ ಪೂಜಾ ಸಾಮಗ್ರಿ ಖರೀದಿಗೆ ಬಂದಿದ್ದ ಸಾರ್ವಜನಿಕರುಪ್ರಜಾವಾಣಿ ಚಿತ್ರಗಳು/ ರಾಜಕುಮಾರ ನಳ್ಳಿಕರ   

ಯಾದಗಿರಿ: ಬೆಳಕಿನ ಹಬ್ಬ ದೀಪಾವಳಿ ಹಬ್ಬಕ್ಕೆ ಸಿದ್ಧತೆ ನಡೆದಿದ್ದು, ಅಮಾವಾಸ್ಯೆ ಪೂಜಾ ಸಾಮಾಗ್ರಿ ದುಬಾರಿಯಾಗಿದೆ.

ನಗರ ಸೇರಿ ಜಿಲ್ಲೆಯ ವಿವಿಧೆಡೆ ಹಬ್ಬಕ್ಕೆ ಬೇಕಾಗುವ ಸಾಮಾಗ್ರಿಗಳನ್ನು ಪ್ರಮುಖ ವೃತ್ತ, ಮಾರುಕಟ್ಟೆಗಳಲ್ಲಿ ಮಾರಾಟಕ್ಕೆ ಇಡಲಾಗಿದೆ. ಅಮಾವಾಸ್ಯೆ ಪ್ರಯುಕ್ತ ಎಲ್ಲ ಅಂಗಡಿ ಮುಂಗಟ್ಟು ಸೇರಿದಂತೆ ವಿವಿಧೆಡೆ ಪೂಜೆ ಸಲ್ಲಿಸುತ್ತಿರುವ ಕಾರಣ ಬೆಲೆ ಏರಿಕೆ ಮಧ್ಯೆಯೂ ಖರೀದಿ ಭರಾಟೆ ಜೋರಾಗಿದೆ.

ಗ್ರಾಮೀಣ ಭಾಗದಿಂದ ನಗರ, ಪಟ್ಟಣ ಪ್ರದೇಶಕ್ಕೆ ಸಾರ್ವಜನಿಕರು ಬಂದು ಪೂಜಾ ಸಾಮಾಗ್ರಿ ಖರೀದಿಯಲ್ಲಿ ತೊಡಗಿಸಿಕೊಂಡಿರುವುದು ಬುಧವಾರ ಕಂಡು ಬಂತು.

ADVERTISEMENT

ನಗರದ ಮಹಾತ್ಮ ಗಾಂಧಿ ವೃತ್ತದ ಸಮೀಪ ಬಾಳೆದಿಂಡು, ಕಬ್ಬು, ಹೂವು, ನಿಂಬೆಹಣ್ಣು, ಚೆಂಡು ಹೂವು ಹಾರ ಸೇರಿದಂತೆ ಕಾಯಿ, ಕರ್ಪೂರ ಮಾರಾಟಕ್ಕೆ ಇಡಲಾಗಿದೆ.

ಪಕ್ಕದ ಜಿಲ್ಲೆಯಿಂದ ಬಾಳೆದಿಂಡು: ನಗರಕ್ಕೆ ಪಕ್ಕದ ಜಿಲ್ಲೆ ಕಲಬುರಗಿಯಿಂದ ಬಾಳೆದಿಂಡು, ಕಬ್ಬು, ಚೆಂಡು ಹೂವು ತರಲಾಗಿದೆ. ನಗರದ ವ್ಯಾಪಾರಿಗಳು ಚಿತ್ತಾಪುರ ತಾಲ್ಲೂಕಿನ ರಾವೂರ ಗ್ರಾಮಕ್ಕೆ ತೆರಳಿ ಸಾಮಾಗ್ರಿ ಖರೀದಿ ಮಾಡಿಕೊಂಡು ಬಂದಿದ್ದಾರೆ.

ಜೋಡಿ ಬಾಳೆದಿಂಡು ಜೋಡಿ ₹50–60, ಒಂದು ಕುಂಬಳಕಾಯಿ ₹ 55–60, ಪೂಜಾ ಎಳನೀರು ₹50–60, ನಿಂಬೆಹಣ್ಣು ₹10ಗೆ 5, ಹಣತೆ ₹10ಗೆ 4, ಚೆಂಡು ಹೂವು ಹಾರ ₹40ರಿಂದ 50, ಒಂದು ಕೆಜಿ ₹80ಗೆ ಮಾರಾಟ ಮಾಡಲಾಗುತ್ತಿದೆ.

ಮಾರುಕಟ್ಟೆಯಲ್ಲಿ ಇವುಗಳ ಜೊತೆಗೆ ಬೆಂಡು ಬತ್ತಾಸ್‌, ಬಾರೆ ಹಣ್ಣು, ಪೇರಲ, ಸೇಬು, ಬಾಳೆಹಣ್ಣು, ಸಂತೂರು, ಮೋಸಂಬಿ, ದಾಳಿಂಬೆ ಮಾರಾಟಕ್ಕೆ ಇಡಲಾಗಿದೆ.

‘ಹಬ್ಬದ ಖರೀದಿಗೆ ಬಂದಿದ್ದು, ಬೆಲೆ ಗಗನಕ್ಕೇರಿದೆ. ವ್ಯಾಪಾರಿಗಳ ಜೊತೆ ಚೌಕಾಶಿ ಮಾಡುವುದು ಸಾಮಾನ್ಯವಾಗಿದೆ. ಬೆಲೆ ಹೆಚ್ಚಾದರೂ ಖರೀದಿ ಮಾಡುವ ಅವಶ್ಯವಿದೆ. ಗುರುವಾರ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ’ ಇದೆ ಎನ್ನುತ್ತಾರೆ ಗ್ರಾಹಕ ವಿನೋದ ಕುಮಾರ ಬಂಗಾರಿ.

‘ಬೇರೆ ಬೇರೆ ಜಿಲ್ಲೆಗಳಿಂದ ಹಬ್ಬದ ಸಾಮಾಗ್ರಿ ಖರೀದಿ ಮಾಡಿಕೊಂಡು ಬಂದಿದ್ದು, ನಮಗೂ ಸಾಗಣೆ ವೆಚ್ಚವೂ ಹೆಚ್ಚಾಗಿದೆ. ಇದರಿಂದ ನಾವೂ ಬೆಲೆ ಏರಿಕೆ ಮಾಡುವ ಅನಿವಾರ್ಯವಿದೆ’ ಎನ್ನುತ್ತಾರೆ ವ್ಯಾಪಾರಿ ಮಹಮ್ಮದ್ ಹನೀಫ್‌.

*****

ಚಿತ್ತಾಪುರ ತಾಲ್ಲೂಕಿನಿಂದ ಬಾಳೆಕಂಬ ಸೇರಿದಂತೆ ಪೂಜೆಗೆ ಬೇಕಾಗುವ ಸಾಮಾಗ್ರಿ ಖರೀದಿ ಮಾಡಿಕೊಂಡು ಬರಲಾಗಿದೆ. ಗುರುವಾರ ಹೆಚ್ಚು ವ್ಯಾಪಾರವಾಗುವ ನಿರೀಕ್ಷೆ ಇದೆ

-ಸಾಬಣ್ಣ ಕುಡ್ಡಿ, ವ್ಯಾಪಾರಿ

***

ದೀಪಾವಳಿ ಹಬ್ಬದ ಅಮಾವಾಸ್ಯೆ ಅಂಗವಾಗಿ ಪೂಜಾ ಸಾಮಗ್ರಿ ಖರೀದಿಗೆ ಬಂದಿದ್ದು, ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಯಾವುದು ಕಡಿಮೆ ಇಲ್ಲ

-ರಮೇಶ ಕೋಲಿ, ಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.