ADVERTISEMENT

ಕಬ್ಬಲಿಗ ಸಮುದಾಯಕ್ಕೆ ಎಸ್‌ಟಿ ಬೇಡ: ಮಹರ್ಷಿ ವಾಲ್ಮೀಕಿ ನಾಯಕ ಸಂಘ

ಸುರಪುರ: ಮಹರ್ಷಿ ವಾಲ್ಮೀಕಿ ನಾಯಕ ಸಂಘದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 9:06 IST
Last Updated 9 ನವೆಂಬರ್ 2022, 9:06 IST
ಸುರಪುರದಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಸಂಘದದವರು ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು
ಸುರಪುರದಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಸಂಘದದವರು ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು   

ಸುರಪುರ: ಬೇಡ ಮತ್ತು ನಾಯಕ ಜನಾಂಗ ಬಿಟ್ಟು ಹಿಂದುಳಿದ ವರ್ಗದ ಕೋಲಿ, ಕಬ್ಬಲಿಗ ಅಂಬಿಗ, ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡದಿರುವಂತೆ ಒತ್ತಾಯಿಸಿ ಮಹರ್ಷಿ ವಾಲ್ಮೀಕಿ ನಾಯಕ ಸಂಘದವರು ಮಂಗಳವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಗಂಗಾಧರ ನಾಯಕ ಮಾತನಾಡಿ, ‘ಅಧಿಸೂಚನೆ ಕ್ರಮ ಸಂಖ್ಯೆ 38ರಲ್ಲಿ ರಾಜ್ಯದ ಕೆಲ ಕಡೆ ನಾಯಕ ಸಮುದಾಯದವರನ್ನು ನಾಯ್ಕುಡು, ನಾಯಕ, ಛೋಳ ನಾಯಕ, ಕಪಾಡಿಯಾ, ಮೋಟ ನಾಯಕ, ತಳವಾರ, ಪರಿವಾರ ಎಂದು ಪರ್ಯಾಯ ಪದಗಳಿಂದ ಗುರುತಿಸಿ ಮೀಸಲಾತಿಗೆ ಸೇರಿಸಿದೆ. ಈ ಜನಾಂಗಕ್ಕೆ ಮಾತ್ರ ಎಸ್‌ಟಿ ಸೌಲಭ್ಯ ವಿಸ್ತರಿಸಲು ಸಮಾಜ ಕಲ್ಯಾಣ ಇಲಾಖೆ ಜೂ. 2020 ರಂದು ಆದೇಶ ಹೊರಡಿಸಿದೆ’ ಎಂದರು.

‘ಹಿಂದುಳಿದ ವರ್ಗದ ಕ್ರಮ ಸಂಖ್ಯೆ 88ರಲ್ಲಿರುವ ತಳವಾರ, ಅಂಬಿಗ, ಬೋಯಿ, ಗಂಗಾಮತ, ಕೋಲಿ ಕಬ್ಬಲಿಗ, ತಳವಾರ, ಪರಿವಾರ ಮೀಸಲಾತಿಗೆ ಸೇರಿರುವುದಿಲ್ಲ. ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಅಂಬಿಗ, ಗಂಗಾಮತಸ್ಥ, ಕಬ್ಬಲಿಗ ಜಾತಿಯವರಿಗೆ ಎಸ್‌ಟಿ ಪ್ರಮಾಣ ಪತ್ರ ನೀಡಲು ಆದೇಶದ ಪ್ರತಿ ತಂದಿದ್ದೇನೆ ಎಂದು ಹೇಳಿರುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಸಿಎಂ ಅವರ ಹೇಳಿಕೆ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತಿದ್ದಂತಾಗಿದೆ. ಮತದಾರರನ್ನು ಸೆಳೆಯಲು ಮುಗ್ಧ ಜನರಿಗೆ ದಾರಿ ತಪ್ಪಿಸುವ ತಂತ್ರವಾಗಿದೆ. ಈ ಕುರಿತು ಅಧಿಸೂಚನೆ ಹೊರಬರದೆ ಕೋಲಿ, ಕಬ್ಬಲಿಗ, ತಳವಾರ ಮತ್ತು ಪರಿವಾರ ಜನಾಂಗಕ್ಕೆ ಎಸ್‌ಟಿ ಪ್ರಮಾಣ ಪತ್ರ ನೀಡಬಾರದು. ಈ ಕುರಿತು ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮತ್ತು ಜಿಲ್ಲೆಯ ಎಲ್ಲಾ ತಹಶೀಲ್ದಾರ್‌ಗಳಿಗೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಒತ್ತಾಯಿಸಿದರು.

ರಮೇಶ ದೊರೆ ಆಲ್ದಾಳ, ವೆಂಕಟೇಶ ಬೇಟೆಗಾರ, ದೇವಿಂದ್ರಪ್ಪ ಬಳಿಚಕ್ರ, ಭೀಮಣ್ಣ ಬಿಚಗತ್ತಿ, ಶರಣು ನಾಯಕ, ದ್ಯಾವಪ್ಪ ವನದರ್ಗ, ಪರುಶುರಾಮ ಮಂಗ್ಯಾಳ, ದೇವಿಂದ್ರ ಮಕಾಶಿ, ಪ್ರಕಾಶ ಯಾಳಗಿ, ಬಸ್ಸು ನಾಯಕ, ಲಕ್ಷಪತಿ ದೊರೆ, ರಾಮ ದೇವರು, ಅಯ್ಯನಗೌಡ, ಬಲಭೀಮ ನಾಯಕ, ವೆಂಕಟೇಶ ಪಾಟೀಲ, ಮಲ್ಲಪ್ಪ, ಮೌನೇಶ
ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.