ADVERTISEMENT

ಶಹಾಪುರ: ‘ಪ್ರತಿ ಬ್ಯಾಸಗಿಯಾಗ ಇದೇ ಗೋಳು ಆಗ್ತಾದ್’

7 ಗ್ರಾಮಗಳಲ್ಲಿ ತಪ್ಪದ ಕುಡಿಯುವ ನೀರಿನ ಬವಣೆ; ಸಮಸ್ಯೆಗೆ ಸಿಗದ ಸ್ಪಂದನೆ

ಟಿ.ನಾಗೇಂದ್ರ
Published 5 ಮೇ 2022, 3:06 IST
Last Updated 5 ಮೇ 2022, 3:06 IST
ಶಹಾಪುರ ತಾಲ್ಲೂಕಿನ ಅರಳಹಳ್ಳಿ ಗ್ರಾಮದ ಜನರು ಕಿರು ಟ್ಯಾಂಕರ್‌ ಮುಂದೆ ಕುಡಿಯುವ ನೀರು ಪಡೆಯಲು ನಿಂತಿರುವುದು
ಶಹಾಪುರ ತಾಲ್ಲೂಕಿನ ಅರಳಹಳ್ಳಿ ಗ್ರಾಮದ ಜನರು ಕಿರು ಟ್ಯಾಂಕರ್‌ ಮುಂದೆ ಕುಡಿಯುವ ನೀರು ಪಡೆಯಲು ನಿಂತಿರುವುದು   

ಶಹಾಪುರ: ಬಿಸಿಲಿನ ಪ್ರಖರತೆ ಹೆಚ್ಚಾದಂತೆ ತಾಲ್ಲೂಕಿನ 7 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಆದರೆ ತಾಲ್ಲೂಕು ಆಡಳಿತ ಮಾತ್ರ ನೀರಿನ ಸಮಸ್ಯೆ ಸದ್ಯಕ್ಕೆ ಇಲ್ಲಾ ಎನ್ನುತ್ತಾ ಅಂಕಿ ಅಂಶಗಳನ್ನು ನೀಡಿ ಕೈ ತೊಳೆದುಕೊಳ್ಳುತ್ತದೆ. ಆದರೆ ಅಲ್ಲಿನ ಜನತೆ ಮಾತ್ರ ನೀರಿಗಾಗಿ ಪರದಾಡುವಂತೆ ಆಗಿದೆ.

ತಾಲ್ಲೂಕಿನ ಅರಳಹಳ್ಳಿ ಗ್ರಾಮವು ಮುಡಬೂಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತದೆ. ಮೂವರು ಸದಸ್ಯರನ್ನು ಹೊಂದಿದೆ. ಒಂದು ಸಾವಿರ ಜನಸಂಖ್ಯೆ ಹೊಂದಿದೆ. ಪ್ರತಿ ಬೇಸಿಗೆ ಕಾಲದಲ್ಲಿ ಇಲ್ಲಿನ ಗ್ರಾಮಸ್ಥರು ನೀರಿನ ಬವಣೆ ಎದುರಿಸುವುದು ಸಾಮಾನ್ಯವಾಗಿದೆ. ಪರಿಹಾರಕ್ಕೆ ಮಾತ್ರ ಮುಂದಾಗುತ್ತಿಲ್ಲ.

ಗ್ರಾಮದಲ್ಲಿ ಏಕೈಕ ಸೇದು ಬಾವಿ ಇದೆ. ಬೇಸಿಗೆಯಲ್ಲಿ ನೀರಿಲ್ಲದೆ ಬತ್ತಿ ಹೊಗುತ್ತದೆ. ಅಲ್ಲಿಂದಲೇ ನೀರಿನ ಬವಣೆ ಶುರುವಾಗುತ್ತದೆ. ಗ್ರಾಮದ ಬೇರೆ ಕಡೆ ನೀರಿನ ಲಭ್ಯತೆ ಇದ್ದರೂ ಸವಳು ನೀರು ಇವೆ. ಕುಡಿಯಲು ಯೋಗ್ಯವಿಲ್ಲ. ಕೇವಲ ಬಳಕೆಗಾಗಿ ಉಪಯೋಗಿಸುತ್ತೇವೆ. ಕುಡಿಯಲು ಮೂರು ಕಿ.ಮೀ ದೂರದ ಮದ್ರಿಕಿ ಗ್ರಾಮಕ್ಕೆ ತೆರಳಿ ಶುದ್ಧ ಕುಡಿಯುವ ನೀರಿನ ಘಟಕದಿಂದ ತೆಗೆದುಕೊಂಡು ಬರುತ್ತೇವೆ ಎನ್ನುತ್ತಾರೆ ಗ್ರಾಮದ ಮುಖಂಡ ಮಲ್ಲಪ್ಪ.

ADVERTISEMENT

ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ ನೀರಿನ ಸರಬರಾಜು ಆಗುತ್ತದೆ ಎನ್ನುವ ಭರವಸೆ ಹುಸಿಯಾಗಿದೆ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಇದೇ ಪರಿಸ್ಥಿತಿಯನ್ನು ತಾಲ್ಲೂಕಿನ ನಂದಿಹಳ್ಳಿ ಗ್ರಾಮವು ಬೀರನೂರ ಗ್ರಾಮ ಪಂಚಾಯಿತಿ ಅಧೀನದಲ್ಲಿ ಬರುತ್ತದೆ. ನೀರಿನ ತೊಂದರೆ ನಿವಾರಿಸುವಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಸೋತಿದೆ. ಗ್ರಾಮದ ಸುತ್ತಲು ಸವಳು ನೀರು ಇವೆ. ಕುಡಿಯಲು ಎರಡು ದೂರದ ಖಾಸಗಿ ಜಮೀನಿನಲ್ಲಿ ಕೊರೆಸಿದ ಕೊಳವೆ ಬಾವಿಯಿಂದ ಬೈಕ್ ಮೂಲಕ ಕುಡಿಯಲು ನೀರು ತೆಗೆದುಕೊಂಡು ಬರುತ್ತೇವೆ. ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶಾಶ್ವತವಾಗಿ ಬೀಗ ಹಾಕಿದ್ದಾರೆ. ಸಾಕಷ್ಟು ಬಾರಿ ಮನವಿ ಮಾಡಿದ್ದರು ಸಹ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಗ್ರಾಮದ ಮುಖಂಡ ಬಂಡೇಗುರು ಹಿರೇಮಠ ಅಳಲು.

ಅಲ್ಲದೆ ತಾಲ್ಲೂಕಿನ ಮದ್ರಿಕಿ ತಾಂಡಾದ ಜನತೆಯಲ್ಲಿ ನೀರಿನ ಸಮಸ್ಯೆ ಇದ್ದರು ಸಹ ಯಾರು ಮುಂದೆ ಬಂದು ಹೇಳುತ್ತಿಲ್ಲ. ಹಾರಿಕೆ ಉತ್ತರ ನೀಡುತ್ತಿದ್ದಾರೆ ಅಲ್ಲಿನ ನಿವಾಸಿಗರು. ಅದರಂತೆ ಸಿಂಗನಾಯಕ ತಾಂಡಾ, ಧರ್ಮನಾಯಕ ತಾಂಡ, ಖೀಮು ನಾಯಕ ತಾಂಡಾ,ರಾಮುನಾಯಕ ತಾಂಡಾದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣ ಪರ್ಯಾಯವಾಗಿ ಅಲ್ಲಿನ ತಾಂಡಾದ ನಿವಾಸಿಗರಿಗೆ ಕುಡಿಯವ ನೀರಿನ ಸಮಸ್ಯೆ ನಿವಾರಿಸಬೇಕು ಎಂದು ತಾಂಡಾದ ಜನತೆ ಮನವಿಯಾಗಿದೆ.

*ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ತುರ್ತಾಗಿ ನೀರಿನ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿರುವೆ

-ಶರಣಬಸಪ್ಪ ದರ್ಶನಾಪುರ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.