ADVERTISEMENT

ಯಾದಗಿರಿ: ಜಿಲ್ಲೆಯ 25 ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

ಜಿಲ್ಲೆಯ 6 ತಾಲ್ಲೂಕುಗಳಲ್ಲಿ ನೀರಿನ ಅಭಾವ, ಪೂರ್ಣಗೊಳ್ಳದ ಜೆಜೆಎಂ ಯೋಜನೆ

ಬಿ.ಜಿ.ಪ್ರವೀಣಕುಮಾರ
Published 22 ಏಪ್ರಿಲ್ 2022, 19:30 IST
Last Updated 22 ಏಪ್ರಿಲ್ 2022, 19:30 IST
ಹುಣಸಗಿ ತಾಲ್ಲೂಕಿನ ಶ್ರೀನಿವಾಸಪುರ ಗ್ರಾಮದಲ್ಲಿರುವ ಬಾವಿ
ಹುಣಸಗಿ ತಾಲ್ಲೂಕಿನ ಶ್ರೀನಿವಾಸಪುರ ಗ್ರಾಮದಲ್ಲಿರುವ ಬಾವಿ   

ಯಾದಗಿರಿ: ಜಿಲ್ಲೆಯ 6 ತಾಲ್ಲೂಕುಗಳ 25 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.

ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಬಿರು ಬಿಸಿಲು ಹೆಚ್ಚಾಗಿ ಜಲಮೂಲಗಳು ಬತ್ತುವುದರಿಂದ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಜಿಲ್ಲೆಯಲ್ಲಿ ಕೃಷ್ಣಾ ಮತ್ತು ಭೀಮಾ ನದಿ ಹರಿಯುತ್ತಿದ್ದರೂ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಸಾಧ್ಯವಾಗಿಲ್ಲ.

ಕುಟುಂತ್ತಾ ಸಾಗುತ್ತಿರುವ ಜೆಜೆಎಂ:ಮನೆ ಮನೆಗೆ ನೀರು ಹರಿಸುವ ಜಲಜೀವನ್‌ ಮಿಷನ್‌ (ಜೆಜೆಎಂ) ಯೋಜನೆಯ ಕಾಮಗಾರಿ ಕುಂಟುತ್ತಾ ಸಾಗುತ್ತಿರುವುದರಿಂದ ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಒಂದು ಏರಿಯಾದಿಂದ ಮತ್ತೊಂದು ಏರಿಯಾಗಳಿಗೆ ತೆರಳಿ ನೀರು ತರುವುದು ಸಾಮಾನ್ಯವಾಗಿದೆ.

ADVERTISEMENT

ಹಲವಾರು ಕಡೆ ಓವರ್‌ ಹೆಡ್‌ ನೀರಿನ ಟ್ಯಾಂಕ್‌ಗಳಲ್ಲಿ ನೀರು ಹರಿಯದೇ ಇರುವುದರಿಂದ ನೀರಿನ ಸಮಸ್ಯೆ ತಲೆದೂರಿದೆ.

ಎಲ್ಲೆಲ್ಲಿ ನೀರಿನ ಸಮಸ್ಯೆ?:ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹತ್ತಿಕುಣಿ ಗ್ರಾಮದಲ್ಲಿ ಖಾಸಗಿ ಕೊಳವೆಬಾವಿ ಮೂಲಕ ನೀರು ಪೂರೈಸಲಾಗುತ್ತಿದೆ.

ತಾಲ್ಲೂಕಿನ ಕಿಲ್ಲನಕೇರಾ ಗ್ರಾ.ಪಂ ವ್ಯಾಪ್ತಿಯ ನೀಲಹಳ್ಳಿ, ಗೌಡಗೇರಾ, ಕೌಳೂರು ವ್ಯಾಪ್ತಿಯ ಕೌಳೂರು, ಜೀನಕೇರಾ, ಕಡೇಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುಪ್ಪಲ್ಲಿ, ಬಾಡಿಯಾಳ ವ್ಯಾಪ್ತಿಯ ಮುನಗನಾಳ, ಬಾಡಿಯಾಳ ವಾರ್ಡ್‌ ಸಂಖ್ಯೆ 2, ಅರಕೇರಾ (ಕೆ) ವ್ಯಾಪ್ತಿಯ ಅರಕೇರಾ (ಕೆ), ಬಸವಂತಪುರ, ಪಂಚಶೀಲನಗರದಲ್ಲಿ ಖಾಸಗಿ ಕೊಳವೆಬಾವಿಯಿಂದ ನೀರು ಪೂರೈಸಲಾಗುತ್ತಿದೆ.

ಗುರುಮಠಕಲ್‌ ತಾಲ್ಲೂಕಿನ ಚಿನ್ನಾಕಾರ ವ್ಯಾಪ್ತಿಯ ಬೆಟ್ಟದಳ್ಳಿ, ದವನಪುರ ತಾಂಡಾ, ಚಿನ್ನಾಕಾರ, ಜೈಗ್ರಾಮ ವ್ಯಾಪ್ತಿಯ ಜೈಗ್ರಾಮ, ಇಡ್ಲೂರು, ಗುಂಜನೂರ, ಕಾಕಲವಾರ ವ್ಯಾಪ್ತಿಯ ಕಾಕಲವಾರ, ಬೂದನೂರು, ಯಂಪಾಡ ವ್ಯಾಪ್ತಿಯ ಯಂಪಾಡ, ಸುಭಾಷನಗರ, ಮಧ್ವಾರ ವ್ಯಾಪ್ತಿಯ ಮಧ್ವಾರ, ಸಂಬರ, ಮಿನಾಸಪುರ ವ್ಯಾಪ್ತಿಯ ಮಿನಾಸಪುರ, ಮೂಸಲೇಪಲ್ಲಿ, ನಜರಾಪುರ ತಾಂಡಾ, ದೇವನಹಳ್ಳಿ ಗ್ರಾಮಗಳಲ್ಲಿ ಖಾಸಗಿ ಬಾವಿ, ಖಾಸಗಿ ಕೊಳವೆಬಾವಿಯಿಂದ ನೀರು ಸರಬರಾಜು ಮಾಡಲಾಗುತ್ತಿದೆ.

ಸುರಪುರ ತಾಲ್ಲೂಕಿನ ಯಕ್ತಾಪುರ ವ್ಯಾಪ್ತಿಯ ಬೇಡರ ತಳ್ಳಳ್ಳಿ, ದೇವರಗೋನಾಳ ವ್ಯಾಪ್ತಿಯ ಹೊಸ ಸಿದ್ದಾಪುರ, ತಿಂಥಣಿ ವ್ಯಾಪ್ತಿಯ ಲಿಂಗದಳ್ಳಿ ಎಸ್‌.ಕೆ., ಬಂಡೊಳ್ಳಿ, ವಡಗೇರಾ ತಾಲ್ಲೂಕಿನ ತಡಿಬಿಡಿ ವ್ಯಾಪ್ತಿಯ ತಡಿಬಿಡಿ, ಗುಂಡಗುರ್ತಿ ವ್ಯಾಪ್ತಿಯ ಗುಂಡಗುರ್ತಿ, ಟೋಕಾಪುರ, ಚಟ್ನಳ್ಳಿ ವ್ಯಾಪ್ತಿಯ ಮರಮಕಲ್‌, ಶಹಾಪುರ ತಾಲ್ಲೂಕಿನ ಮುಡಬೂಳ ವ್ಯಾಪ್ತಿಯ ಅರಳಹಳ್ಳಿ, ಮದ್ರಕಿ ವ್ಯಾಪ್ತಿಯ ಮದ್ರಕಿ ತಾಂಡಾ, ಬೀರನೂರು ವ್ಯಾಪ್ತಿಯ ನಂದಿಹಳ್ಳಿ, ಉಕ್ಕಿನಾಳ ವ್ಯಾಪ್ತಿಯ ಸಿಂಗನಾಯ್ಕ ತಾಂಡಾ, ಧರ್ಮನಾಯ್ಕ ತಾಂಡಾ, ಖಿಮುನಾಯ್ಕ ತಾಂಡಾ, ರಾಮುನಾಯ್ಕ ತಾಂಡಾ ವ್ಯಾಪ್ತಿಯಲ್ಲಿ ಕೊಳವೆ ಬಾವಿಯಿಂದ ನೀರು ಪೂರೈಸಲಾಗುತ್ತಿದೆ.

ಹುಣಸಗಿ ತಾಲ್ಲೂಕಿನ ಅಗ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಿಬಾವಿ, ಅಮಲಿಹಾಳ, ವಜ್ಜಲ ವ್ಯಾಪ್ತಿಯ ಮಂಜಾಲಾಪುರ, ಶ್ರೀನಿವಾಸಪುರ, ಶ್ರೀನಿವಾಸಪುರ ತಾಂಡಾ, ಜೋಗುಂಡಬಾವಿ ವ್ಯಾಪ್ತಿಯ ಸಣ್ಣ ಚಾಪಿ ತಾಂಡಾ, ಬಸರಿಗಿಡ ತಾಂಡಾಗಳಲ್ಲಿ ನೀರಿನ ಸಮಸ್ಯೆ ಇದ್ದು, ಖಾಸಗಿ ಕೊಳವೆಬಾವಿ ಬಳಕೆ ಮಾಡಲಾಗುತ್ತಿದೆ.

‘ಈಗಾಗಲೇ ಏಪ್ರಿಲ್‌, ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಎದುರಿಸುವ ಗ್ರಾಮಗಳನ್ನು ಪಟ್ಟಿ ಮಾಡಲಾಗಿದೆ. ಅಧಿಕಾರಿಗಳ ಸಭೆ ನಡೆಸಿಯೂ ತೊಂದರೆ ಆಗದಂತೆ ಸೂಚಿಸಲಾಗಿದೆ. ಇನ್ನೂ ತೀವ್ರದ ತರದ ಸಮಸ್ಯೆ ಉಂಟಾಗಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ನೀಡುವ ಮಾಹಿತಿಯಾಗಿದೆ.

**
ಸದ್ಯ ಜಿಲ್ಲೆಯಲ್ಲಿ ಹೆಚ್ಚಿನ ನೀರಿನ ಸಮಸ್ಯೆ ಇಲ್ಲ. ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡುತ್ತಿಲ್ಲ. ನೀರಿನ ಸಮಸ್ಯೆ ನಿವಾರಣೆಗೆ ಸಭೆ ಮಾಡಿ ಸೂಚಿಸಲಾಗಿದೆ.
-ಅಮರೇಶ ನಾಯ್ಕ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ

***
ಶ್ರೀನಿವಾಸಪುರದಲ್ಲಿ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಿಸಿದ್ದರೂ ನೀರು ಬರುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಲಿ
-ಮಲ್ಲಿಕಾರ್ಜುನ ಮಾಲಿಪಾಟೀಲ, ಜಯಕರ್ನಾಟಕ ರಕ್ಷಣಾ ಸೇನೆ ಹುಣಸಗಿ ತಾಲ್ಲೂಕು ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.