ADVERTISEMENT

ಕಂಪಾಪುರ: ಕುಡಿಯುವ ನೀರಿನ ಯೋಜನೆಯ ಸ್ಥಳ ಪರಿಶೀಲನೆ

ಅಧಿಕಾರಿಗಳೊಂದಿಗೆ ಶಾಸಕ ರಾಜೂಗೌಡ ಚರ್ಚೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 15:25 IST
Last Updated 23 ಜೂನ್ 2021, 15:25 IST
ಸುರಪುರ ತಾಲ್ಲೂಕಿನ ಕಂಪಾಪುರದ ಕೃಷ್ಣಾ ನದಿ ತಟದಲ್ಲಿ ಬುಧವಾರ ಶಾಸಕ ರಾಜೂಗೌಡ ಅವರು ಕುಡಿಯುವ ನೀರಿನ ಕಾಮಗಾರಿಯ ಸ್ಥಳ ಪರಿಶೀಲಿಸಿದರು
ಸುರಪುರ ತಾಲ್ಲೂಕಿನ ಕಂಪಾಪುರದ ಕೃಷ್ಣಾ ನದಿ ತಟದಲ್ಲಿ ಬುಧವಾರ ಶಾಸಕ ರಾಜೂಗೌಡ ಅವರು ಕುಡಿಯುವ ನೀರಿನ ಕಾಮಗಾರಿಯ ಸ್ಥಳ ಪರಿಶೀಲಿಸಿದರು   

ಸುರಪುರ: 'ಉದ್ದೇಶಿತ ಕಂಪಾಪುರ ಕುಡಿವ ನೀರಿನ ಶಾಶ್ವತ ಯೋಜನೆಯಿಂದ ಸುರಪುರ ನಗರಕ್ಕೆ ಸಮೃದ್ಧ ನೀರು ಪೂರೈಕೆಯಾಗಲಿದೆ' ಎಂದು ಶಾಸಕ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರೂ ಆಗಿರುವ ರಾಜೂಗೌಡ ತಿಳಿಸಿದರು.

ತಾಲ್ಲೂಕಿನ ದೇವಪುರ ಗ್ರಾಮದ ಸಮೀಪದ ಕಂಪಾಪುರ ಹತ್ತಿರದ ಕೃಷ್ಣಾ ನದಿಗೆ ಬುಧವಾರ ನೀರು ಸರಬರಾಜು ಮಂಡಳಿಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಉದ್ದೇಶಿತ ಯೋಜನೆಯ ಸ್ಥಳ ಪರಿಶೀಲಿಸಿ, ಯೋಜನೆಯ ರೂಪರೇಷಗಳನ್ನು ಗಮನಿಸಿ ಅವರು ಮಾತನಾಡಿದರು.

‘ನಿಯೋಜಿತ ಈ ಸ್ಥಳದಲ್ಲಿ ನದಿ ನೀರಿನ ಸಂಗ್ರಹ ಹೆಚ್ಚಾಗಿದ್ದು ಬೇಸಿಗೆ ಮತ್ತು ಪ್ರವಾಹ ಸಂದರ್ಭದಲ್ಲಿ ನಗರದ ಜನತೆಗೆ ನೀರು ಪೂರೈಸಲು ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ₹ 158 ಕೋಟಿ ವೆಚ್ಚದ ಕುಡಿವ ನೀರಿನ ಯೋಜನೆಯ ಈ ಕಾಮಗಾರಿಗೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು ಮಂಗಳವಾರ ತಾಂತ್ರಿಕ ಕರಪಟ್ಟಿಯ ಒಪ್ಪಿಗೆ ಸಿಕ್ಕಿದೆ. ಹಣಕಾಸಿನ ಬಿಡ್ ಓಪನ್ ಮಾಡಬೇಕು. ಇನ್ನೂ ಒಂದೂವರೆ ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆಗಳು ಸಂಪೂರ್ಣಗೊಂಡು ಕಾಮಗಾರಿ ಪ್ರಾರಂಭವಾಗಲಿದೆ' ಎಂದರು.

ADVERTISEMENT

'ಈ ಯೋಜನೆಯಲ್ಲಿ ಒಟ್ಟು 7 ಟ್ಯಾಂಕ್‍ಗಳನ್ನು ನಿರ್ಮಿಸಲಾಗುತ್ತಿದೆ. ನಗರದ ಹುಲಕಲ್ ಗುಡ್ಡದ ಹತ್ತಿರ 15 ಲಕ್ಷ ಲೀಟರ್ ಸಾಮರ್ಥ್ಯದ ಮದರ್ ಟ್ಯಾಂಕ್ (ಗುರುತ್ವಾಕರ್ಷಣೆಯ). ಕುಂಬಾರಪೇಟೆಯ ಫೀಲ್ಟರ್ ಬೆಡ್, ತಹಶೀಲ್ದಾರ್ ಕಚೇರಿ, ದಖನಿ ಮೊಹಲ್ಲಾ, ಕಬಾಡಗೇರಾ, ರಂಗಂಪೇಟೆ, ಸತ್ಯಂಪೇಟೆ, ವೆಂಕಟಾಪುರಗಳಲ್ಲಿ ಸಣ್ಣ ಟ್ಯಾಂಕ್‍ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಮುಂದಿನ 50 ವರ್ಷದ ಜನಸಂಖ್ಯೆ ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಲಾಗಿದೆ' ಎಂದರು.

'ಇದೊಂದು ಹೈಟೆಕ್ ನೀರಿನ ವ್ಯವಸ್ಥೆಯಾಗಿದ್ದು ಈ ಸ್ಥಳದಿಂದ 11 ಕಿಮೀ ಕುಂಬಾರಪೇಟ ಫೀಲ್ಟರ್ ಬೆಡ್‍ವರೆಗೆ ನಂತರ 2 ಕಿಮೀ., ವಿತರಣೆ ಪೈಪಲೈನ್ ಇದಾಗಿದೆ. ಮನೆಗಳು ಸೇರಿ 150 ಕಿಮೀ., ಪೈಪ್‍ಲೈನ್ ಕಾಮಗಾರಿಯಾಗಿರುತ್ತದೆ. ಆಟೋಮೆಟಿಕ್ ವ್ಯವಸ್ಥೆ ಅಳವಡಿಸಲಾಗುತ್ತಿದ್ದು ಕುಳಿತಲ್ಲಿಯೇ ಕಂಪ್ಯೂಟರ್ ಮೂಲಕ ನೀರು ಸರಬರಾಜು ವ್ಯವಸ್ಥೆ ಮಾಡುವುದಾಗಿದೆ. ಕೇವಲ 13 ತಿಂಗಳಲ್ಲಿ ಕಾಮಗಾರಿ ಮುಗಿಸಲು ಸಮಯ ನೀಡಲಾಗಿದ್ದು ನಮ್ಮ ನಿಗಮದಲ್ಲಿಯೇ ಇಷ್ಟೊಂದು ಕಡಿಮೆ ಅವಧಿ ನೀಡಿದ್ದು ಇದೇ ಮೊದಲು. ಇದನ್ನು ಸವಾಲಾಗಿ ಸ್ವೀಕರಿಸಿದ್ದು ನಗರದ ಜನತೆಗೆ ದಿನದ 24 ಗಂಟೆಗಳ ಕಾಲ ಶುದ್ಧ ನೀರು ಪೂರೈಸಲಾಗುವುದು' ಎಂದು ವಿಶ್ವಾಸ ವ್ಯಕ್ತಪಡಿಸಿದರು.

'ನಗರಕ್ಕೆ ಶಾಶ್ವತ ಕುಡಿವ ನೀರಿಗಾಗಿ ಒಟ್ಟು ₹ 250 ಕೋಟಿ ಅಂದಾಜು ವೆಚ್ಚ ತಯಾರಿಸಲಾಗಿದೆ. ಮೊದಲ ಹಂತದಲ್ಲಿ ₹ 158 ಕೋಟಿ ಖರ್ಚು ಮಾಡಲಾಗುತ್ತಿದೆ. ಒಂದು ವೇಳೆ ಈ ಕಾಮಗಾರಿ ತೃಪ್ತಿಕರವಾಗದಿದ್ದಲ್ಲಿ ಎರಡನೇ ಹಂತದಲ್ಲಿ ಇನ್ನೂಳಿದ ಮೊತ್ತ ವೆಚ್ಚ ಮಾಡಲಾಗುವುದು. ನೀರು ಸಂಗ್ರಹಕ್ಕೆ 60 ಎಕರೆ ಕೆರೆ ನಿರ್ಮಾಣ ಮಾಡಲಾಗುತ್ತದೆ. ಪ್ರವಾಹ ಸಂದರ್ಭದದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಆ ಕೆರೆಗೆ ತುಂಬಿಸಿ ಸದ್ಭಳಕೆ ಮಾಡಿಕೊಳ್ಳಲಾಗುವುದು' ಎಂದು ವಿವರಿಸಿದರು.

ನೀರು ಸರಬರಾಜು ಮಂಡಳಿ ಎಇ ಶಂಕರಗೌಡ, ಸಿಪಿಐ ಸಾಹೇಬಗೌಡ ಪಾಟೀಲ್, ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪನಾಯಕ (ತಾತಾ), ನಗರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ್, ಸದಸ್ಯ ನರಸಿಂಹಕಾಂತ ಪಂಚಮಗಿರಿ, ಮುಖಂಡರಾದ ವೇಣುಗೋಪಾಲನಾಯಕ ಜೇವರ್ಗಿ, ಶಂಕರನಾಯಕ, ಬಲಭೀಮನಾಯಕ ಬೈರಿಮರಡ್ಡಿ, ಮಲ್ಲು ದಂಡಿನ್, ಅಮರೇಶ ದೇಸಾಯಿ ದೇವಾಪುರ, ರಮೇಶ ಕವಲಿ, ಹುಸೇನ್ ತಿಂಥಣಿ, ರಜೀಬ್ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.