ADVERTISEMENT

ಸುರಪುರ: ಕುಡಿಯುವ ನೀರು ಯೋಜನೆಗೆ ₹158 ಕೋಟಿ

ಸುರಪುರ ನಗರಕ್ಕೆ ನೀರು ಒದಗಿಸಲು ಯೋಜನೆ; ಕಾಮಗಾರಿ ಶೀಘ್ರ ಆರಂಭ

ಅಶೋಕ ಸಾಲವಾಡಗಿ
Published 23 ಜುಲೈ 2021, 5:41 IST
Last Updated 23 ಜುಲೈ 2021, 5:41 IST
ಸುರಪುರ ತಾಲ್ಲೂಕಿನ ಕಂಪಾಪುರದ ಉದ್ದೇಶಿತ ನೀರಿನ ಯೋಜನೆ ಸ್ಥಾಪಿಸುವ ಕೃಷ್ಣಾ ನದಿಯ ಸ್ಥಳವನ್ನು ಶಾಸಕ ರಾಜೂಗೌಡ ವೀಕ್ಷಿಸಿದರು
ಸುರಪುರ ತಾಲ್ಲೂಕಿನ ಕಂಪಾಪುರದ ಉದ್ದೇಶಿತ ನೀರಿನ ಯೋಜನೆ ಸ್ಥಾಪಿಸುವ ಕೃಷ್ಣಾ ನದಿಯ ಸ್ಥಳವನ್ನು ಶಾಸಕ ರಾಜೂಗೌಡ ವೀಕ್ಷಿಸಿದರು   

ಸುರಪುರ: 2055ರ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ₹158 ಕೋಟಿ ವೆಚ್ಚದ ಬೃಹತ್ ಕುಡಿಯುವ ನೀರಿನ ಯೋಜನೆ ಸುರಪುರಕ್ಕೆ ಮಂಜೂರಾಗಿದ್ದು ನಗರಕ್ಕೆ ಹಿಡಿದಿದ್ದ ನೀರಿನ ಶಾಪ ವಿಮೋಚನೆಯಾದಂತಾಗಿದೆ.

ಕೇವಲ 10 ಕಿ.ಮೀ ಅಂತರದಲ್ಲಿ ಕೃಷ್ಣೆ ಹರಿಯುತ್ತಿದ್ದರೂ ನಗರದ ಜನ ಕುಡಿಯುವ ನೀರಿಗೆ ಪರಿತಪಿಸುತ್ತಿದ್ದರು. ನಲ್ಲಿ ನೀರನ್ನು ತಿಂಗಳಿಗೆ ಎರಡು ಅಥವಾ ಮೂರು ಸಲ ಬಿಡಲಾಗುತ್ತಿತ್ತು. ಬೇಸಿಗೆ ದಿನಗಳಲ್ಲಿ ನೀರಿನ ತತ್ವಾರ ಹೇಳತೀರದಾಗಿತ್ತು. ಟ್ಯಾಂಕರ್ ಮೂಲಕ ನೀರು ಸರಬರಾಜು ನಡೆಯುತ್ತಿತ್ತು.

ತಾಲ್ಲೂಕಿನ ಲಕ್ಷ್ಮೀಶನ ದೇವಪುರದ ಹತ್ತಿರ ಇರುವ ಕಂಪಾಪುರ ನಗರದಿಂದ 15 ಕಿ.ಮೀ ಅಂತರದಲ್ಲಿದೆ. ಇಲ್ಲಿ ಅತ್ಯಂತ ಆಳವಾಗಿ ಕೃಷ್ಣೆ ಹರಿಯುತ್ತಾಳೆ. ಎಂತಹ ಬರಗಾಲದಲ್ಲೂ ಇಲ್ಲಿ ನೀರಿನ ಸಂಗ್ರಹ ಅಧಿಕವಾಗಿರುತ್ತದೆ. ಇದನ್ನು ಗಮನಿಸಿ ನೂತನ ಯೋಜನೆಯನ್ನು ಇಲ್ಲಿ ಕಾರ್ಯಗತ ಮಾಡಲಾಗುತ್ತಿದೆ.

ADVERTISEMENT

ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಇಷ್ಟರಲ್ಲಿಯೇ ಕಾಮಗಾರಿ ಆರಂಭಿಸಲಾಗುತ್ತಿದೆ. ಉದ್ದೇಶಿತ ಯೋಜನೆಗೆ ಸುತ್ತಲಿನ ಮೂರು ಎಕರೆ ಹೊಲವನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ಎಕ್ಸ್‌ಪ್ರೆಸ್ ಸಂಪರ್ಕ ವ್ಯವಸ್ಥೆಯಿಂದ ನಿರಂತರ ವಿದ್ಯುತ್ ಪೂರೈಸಲಾಗುತ್ತದೆ. ಕಾಮಗಾರಿ ಮುಗಿಸಲು ಕೇವಲ 13 ತಿಂಗಳು ಕಾಲಾವಕಾಶ ನೀಡಲಾಗಿದೆ.

ನಗರಕ್ಕೆ ಪ್ರತಿ ದಿನ 20 ದಶಲಕ್ಷ ಲೀ. ನೀರು ಸರಬರಾಜು ಮಾಡುವ ಸಾಮರ್ಥ್ಯ ಈ ಯೋಜನೆಗಿದೆ. ಕಂಪಾಪುರದಿಂದ ಕುಂಬಾರಪೇಟ ಹತ್ತಿರದ ಜಲಶುದ್ಧೀಕರಣ ಘಟಕದವರೆಗೆ ಪೈಪ್‍ಲೈನ್ ಅಳವಡಿಸಲಾಗುತ್ತಿದೆ. ಮಾರ್ಗ ಮಧ್ಯದ ಲಕ್ಷ್ಮೀಶನ ದೇವಪುರ, ಕವಡಿಮಟ್ಟಿ, ರುಕ್ಮಾಪುರಗಳಿಗೂ ನೀರು ಒದಗಿಸಲಾಗುತ್ತದೆ.

ಹುಲಕಲ್ ಗುಡ್ಡದ ಹತ್ತಿರ 15 ದಶಲಕ್ಷ ಲೀ. ಸಾಮರ್ಥ್ಯದ ಗುರುತ್ವಾಕರ್ಷಣೆ ತಂತ್ರಜ್ಞಾನದ ಮದರ್ ಟ್ಯಾಂಕ್, ತಹಶೀಲ್ದಾರ್ ಕಚೇರಿ, ದಖನಿ ಮೊಹಲ್ಲಾ, ಕಬಾಡಗೇರಾ, ರಂಗಂಪೇಟೆ, ಸತ್ಯಂಪೇಟೆ, ವೆಂಕಟಾಪುರ ಸೇರಿದಂತೆ ಒಟ್ಟ 7 ಕಡೆ ಓವರ್‌ ಹೆಡ್ ಟ್ಯಾಂಕ್‍ಗಳ ನಿರ್ಮಾಣ ಈ ಯೋಜನೆಯಡಿ ಬರುತ್ತದೆ.

ಕಂಪಾಪುರದಿಂದ ನಗರದ ಪ್ರತಿ ವಾರ್ಡ್ ಸೇರಿದಂತೆ 150 ಕಿ.ಮೀ ಪೈಪ್‍ಲೈನ್ ಮಾಡಲಾಗುತ್ತಿದೆ. ಯಂತ್ರಚಾಲಿತ ಸ್ಕಾಡಾ ವಾಲ್ ವ್ಯವಸ್ಥೆ ಅಳವಡಿಸಲಾಗುತ್ತಿದ್ದು ಇದನ್ನು ಕಂಪ್ಯೂಟರ್ ಮೂಲಕ ನಿರ್ವಹಣೆ ಮಾಡುವ ವ್ಯವಸ್ಥೆ ಇದೆ. ಕುಂಬಾರಪೇಟೆಯ ಹತ್ತಿರ ₹6 ಕೋಟಿ ವೆಚ್ಚದ ಜರ್ಮನ್ ತಂತ್ರಜ್ಞಾನದ ನೀರು ಶುದ್ಧೀಕರಣ ಘಟಕದ ಕಾಮಗಾರಿ ಪ್ರಗತಿಯಲ್ಲಿದೆ. ಇದರಿಂದ ಶುದ್ಧ ನೀರು ಜನರಿಗೆ ಸಿಗಲಿದೆ.

ಹಳೇಕಾಲದ ಯೋಜನೆ ನೇಪಥ್ಯಕ್ಕೆ:

1965ರಲ್ಲಿ ಈಗಿನ ನೀರು ಸರಬರಾಜು ಯೋಜನೆ ಆರಂಭಗೊಂಡಿತ್ತು. 9 ಕಿ.ಮೀ ಅಂತರದ ಶೆಳ್ಳಗಿಯ ಹತ್ತಿರ ಹರಿಯುವ ಕೃಷ್ಣೆಗೆ ಜಾಕ್‍ವೆಲ್ ಕೂಡಿಸಿ ನೀರು ಸರಬರಾಜು ಮಾಡಲಾಗುತ್ತಿತ್ತು. ಪ್ರತಿ ಬೇಸಿಗೆಯಲ್ಲಿ ಇಲ್ಲಿ ನೀರಿನ ಸಂಗ್ರಹ ಇರುತ್ತಿರಲಿಲ್ಲ. ಪ್ರವಾಹ ಸಂದರ್ಭದಲ್ಲಿ ಜಾಕ್‍ವೆಲ್ ಮುಳುಗಿ ಹೋಗುತ್ತಿತ್ತು.

ಪದೇ ಪದೇ ಮೋಟರ್ ಸುಡುವುದು, ಪೈಪ್ ಒಡೆಯುವುದು, ವಿದ್ಯುತ್ ಸಮಸ್ಯೆ ಇತರ ಅನೇಕ ಕಾರಣಗಳಿಂದ ನೀರು ಸರಬರಾಜು ತಿಂಗಳುಗಟ್ಟಲೆ ಸ್ಥಗಿತಗೊಳ್ಳುತ್ತಿತ್ತು. ನಿರ್ವಹಣೆ ಮಾಡುವುದು ನಗರಸಭೆಗೆ ಸಾಕಾಗಿತ್ತು. ಹೊಸ ಯೋಜನೆಯಿಂದ ಹಳೇ ಕಾಲದ ಯೋಜನೆ ನೇಪಥ್ಯಕ್ಕೆ ಸರಿಯಲಿದೆ.

60 ಎಕರೆ ಜಾಗದಲ್ಲಿ ಕೆರೆ ನಿರ್ಮಾಣ:

ನಗರಕ್ಕೆ ಶಾಶ್ವತ ಕುಡಿವ ನೀರಿಗಾಗಿ ಒಟ್ಟು ₹ 250 ಕೋಟಿ ಅಂದಾಜು ವೆಚ್ಚ ತಯಾರಿಸಲಾಗಿದೆ. ಮೊದಲ ಹಂತದಲ್ಲಿ ₹ 158 ಕೋಟಿ ಖರ್ಚು ಮಾಡಲಾಗುತ್ತಿದೆ. ಒಂದು ವೇಳೆ ಈ ಕಾಮಗಾರಿ ತೃಪ್ತಿಕರವಾಗದಿದ್ದಲ್ಲಿ ಎರಡನೇ ಹಂತದಲ್ಲಿ ಇನ್ನುಳಿದ ಮೊತ್ತ ವೆಚ್ಚ ಮಾಡಲಾಗುವುದು. ನೀರು ಸಂಗ್ರಹಕ್ಕೆ 60 ಎಕರೆ ಕೆರೆ ನಿರ್ಮಾಣ ಮಾಡಲಾಗುತ್ತದೆ. ಪ್ರವಾಹ ಸಂದರ್ಭದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಆ ಕೆರೆಗೆ ತುಂಬಿಸಿ ಸದ್ಬಳಕೆ ಮಾಡಿಕೊಳ್ಳುವ ಉದ್ದೇಶವನ್ನು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರೂ ಆಗಿರುವ ಶಾಸಕ ರಾಜೂಗೌಡ ಅವರು ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.