
ಶಹಾಪುರ: ‘ಮದ್ಯ ಮತ್ತು ಮಾದಕ ವಸ್ತುಗಳು ವ್ಯಕ್ತಿಯನ್ನಷ್ಟೇ ಅಲ್ಲ. ಸಮಾಜವನ್ನು ನಾಶ ಮಾಡುವ ದೊಡ್ಡ ಅಪಾಯವಾಗಿ ಪರಿಣಮಿಸಿದೆ. ಮಾದಕ ವ್ಯಸನದಿಂದ ಆರೋಗ್ಯ ಹದಗೆಡುತ್ತದೆ. ಆರ್ಥಿಕ ಸ್ಥಿತಿ ಕುಸಿಯುತ್ತದೆ. ಕುಟುಂಬದಲ್ಲಿ ಅಶಾಂತಿ ಉಂಟಾಗುತ್ತದೆ. ಸಮಾಜದಲ್ಲಿ ಅಪರಾಧಗಳು ಹೆಚ್ಚಾಗುತ್ತವೆ’ ಎಂದು ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಹೇಳಿದರು.
ತಾಲ್ಲೂಕಿನ ಗೋಗಿ ಗ್ರಾ.ಪಂನಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ತಾ.ಪಂ, ಗ್ರಾ.ಪಂ ಆಶ್ರಯದಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜನಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಯುವಜನರು ಮತ್ತು ಸಮಾಜವನ್ನು ದುಷ್ಚಟಗಳಿಂದ ದೂರವಿಟ್ಟು ವ್ಯಸನ ಮುಕ್ತ ಜೀವನವೇ ಉತ್ತಮ ಜೀವನ ಎಂಬುದು ಜಾಗೃತಿ ಮೂಡಬೇಕಿದೆ. ಮನೆಯಲ್ಲಿಯೇ ಉತ್ತಮ ಸಂಸ್ಕಾರ, ಶಾಲೆಗಳಲ್ಲಿ ಜಾಗೃತಿ, ಗ್ರಾಮ ಮಟ್ಟದಲ್ಲಿ ಒಗ್ಗಟ್ಟಿನ ಪ್ರಯತ್ನಗಳು ನಡೆದಾಗ ಮಾತ್ರ ವ್ಯಸನಮುಕ್ತ ಸಮಾಜ ನಿರ್ಮಾಣ ಸಾಧ್ಯ’ ಎಂದು ಹೇಳಿದರು.
ಆರೋಗ್ಯಕರ ಸಮಾಜ, ಸುರಕ್ಷಿತ ಭವಿಷ್ಯ ಮತ್ತು ಸಂತೋಷಕರ ಜೀವನಕ್ಕಾಗಿ ಮದ್ಯ ಮತ್ತು ಮಾದಕ ವಸ್ತುಗಳನ್ನು ಪ್ರೋತ್ಸಾಹಿಸುವುದಿಲ್ಲ ಹಾಗೂ ಸೇವಿಸುವುದಿಲ್ಲ ಎಂದು ಪ್ರತಿಜ್ಞೆ ಸ್ವೀಕರಿಸಲಾಯಿತು.
ತಾ.ಪಂ ಇಒ ಬಸವರಾಜ ಶರಭೈ, ಪಿಎಸ್‌ಐ ಶಿವರಾಜ, ಗ್ರಾ.ಪಂ ಯೋಜನಾ ಅಭಿವೃದ್ಧಿ ಅಧಿಕಾರಿಗಳಾದ ಸಿದ್ಧರಾಮ, ಶಾರದಾ, ಮುಖಂಡರಾದ ಬಸವರಾಜಪ್ಪಗೌಡ ತಂಗಡಿಗಿ, ಬ್ರಹ್ಮಕುಮಾರಿ ಸಂಸ್ಥೆಯ ಪದಾಧಿಕಾರಿ ಬಿ.ಕೆ.ಉಷಾ ಉಪಸ್ಥಿರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.