ADVERTISEMENT

ನಾರಾಯಣಪುರ: ವಾರಬಂದಿ ಪದ್ಧತಿ ಕೈಬಿಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 3:53 IST
Last Updated 8 ಸೆಪ್ಟೆಂಬರ್ 2021, 3:53 IST
ಎಡದಂಡೆ ಮುಖ್ಯ ಕಾಲುವೆಯ ಅಡಿಯಲ್ಲಿ ಕೈಗೊಂಡಿರುವ ವಾರಬಂದಿ ಪದ್ಧತಿ ಕೈಬಿಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ನಾರಾಯಣಪುರದ ಮುಖ್ಯ ಎಂಜಿನಿಯರ್‌ಗೆ ಮನವಿ ಸಲ್ಲಿಸಿದರು
ಎಡದಂಡೆ ಮುಖ್ಯ ಕಾಲುವೆಯ ಅಡಿಯಲ್ಲಿ ಕೈಗೊಂಡಿರುವ ವಾರಬಂದಿ ಪದ್ಧತಿ ಕೈಬಿಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ನಾರಾಯಣಪುರದ ಮುಖ್ಯ ಎಂಜಿನಿಯರ್‌ಗೆ ಮನವಿ ಸಲ್ಲಿಸಿದರು   

ನಾರಾಯಣಪುರ (ಹುಣಸಗಿ): ತಾಲ್ಲೂಕಿನ ನಾರಾಯಣಪುರ ಬಸವಸಾಗರದಿಂದ ಎಡದಂಡೆ ಕಾಲುವೆಗೆ ನೀರು ಹರಿಸುವ ಕುರಿತಂತೆ ಅಳವಡಿಸಲಾಗಿರುವ ವಾರಬಂದಿ ಪದ್ಧತಿಯನ್ನು ಕೈ ಬಿಟ್ಟು ನಿರಂತರವಾಗಿ ಕಾಲುವೆಗೆ ನೀರು ಹರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಮುಖಂಡರು ನಾರಾಯಣಪುರದ ಮುಖ್ಯ ಎಂಜಿನಿಯರ್ ಅವರಿಗೆ
ಮನವಿ ಸಲ್ಲಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಸಂಚಾಲಕ ಶಿವಲಿಂಗ ಹಸನಾಪುರ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಬಸವಸಾಗರ ಜಲಾಶಯವು ಭರ್ತಿಯಾಗಿದ್ದು, ಅಪಾರ ಪ್ರಮಾಣದಲ್ಲಿ ನೀರು ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ. ಈ ಸಂದರ್ಭದಲ್ಲಿ ಕಾಲುವೆಗೆ ಸಮರ್ಪಕವಾಗಿ ನೀರು ಹರಿಸದೆ ವಾರಬಂದಿ ಮೂಲಕ ಕಾಲುವೆಗೆ ನೀರು ಸ್ಥಗಿತಗೊಳಿಸುವುದು ಸರಿಯಲ್ಲ ಎಂದು ತಿಳಿಸಿದರು.

ಸರ್ಕಾರ ಮತ್ತು ಅಧಿಕಾರಿಗಳು ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವದು ಸರಿಯಲ್ಲ. ನಮ್ಮ ಸಮಿತಿ ಇದನ್ನು ಬಲವಾಗಿ ಖಂಡಿಸುತ್ತದೆ. ಜಿಲ್ಲೆ ಸೇರಿದಂತೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು, ಕೂಡಲೇ ಈ ಪದ್ಧತಿಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.

ADVERTISEMENT

ಈಗಾಗಲೇ ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ರೈತರು ತತ್ತರಿಸಿ ಹೋಗಿದ್ದಾರೆ. ಕೈಗೆ ಬಂದ ಫಸಲಿಗೆ ನಿಗದಿತ ಬೆಲೆ ಸಿಗದೆ ಅದೆಷ್ಟೋ ರೈತರು ಸಾಕಷ್ಟು ನಷ್ಟ ಅನುಭವಿಸಿ ಸಾಲದ ಸುಳಿಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವಾರಬಂದಿ ಪ್ರಕಾರ ನೀರು ಹರಿಸಿದರೆ ಬೆಳೆಗಳು ಹಾಳಾಗಿ ರೈತರು ಮತ್ತೊಮ್ಮೆ ಸಂಕಷ್ಟ ಎದುರಿಸಬೇಕಾಗುತ್ತದೆ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಚೇರಿಗೆ ಬೀಗ ಮುದ್ರೆ ಹಾಕಿ ಪ್ರತಿಭಟಿಸಲಾಗುತ್ತದೆ ಎಂದು ಅವರು ಎಚ್ಚರಿಸಿದರು.

ವೀರಭದ್ರ ತಳವಾರ, ತಿಪ್ಪಣ್ಣ ಶೆಳ್ಳಗಿ, ವೆಂಕಟೇಶ ದೇವಾಪುರ, ಶೇಖರ ಮಂಗಳೂರ, ಎಂ.ಪಟೇಲ, ಚನ್ನಪ್ಪ ತಳವಾರ, ಖಾಜಾ ಅಜ್ಮೀರ, ಮರಲಿಂಗ ಗುಡಿಮನಿ, ಭೀಮರಾಯ, ಮೌನೇಶ ದೇವತ್ಕಲ್ಲ ಸೆರಿದಂತೆ ಗ್ರಾಮದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.