ADVERTISEMENT

ವಡಗೇರಾ: ಧೂಳಿನ ಸಮಸ್ಯೆಯಿಂದ ಜನ ಹೈರಾಣ, ಆರೋಗ್ಯದ ಮೇಲೆ ಕೆಟ್ಟ ಪರಿಣಾಮ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 7:14 IST
Last Updated 12 ಫೆಬ್ರುವರಿ 2026, 7:14 IST
ವಡಗೇರಾ ಪಟ್ಟಣದ ಜಿಲ್ಲಾ ಮುಖ್ಯ ರಸ್ತೆ ಮೇಲೆ ಟಿಪ್ಪರ ಸಂಚರಿಸಿದಾಗ ರಸ್ತೆ ಮೇಲೆ ಧೂಳು ಆವರಿಸಿರುವುದು
ವಡಗೇರಾ ಪಟ್ಟಣದ ಜಿಲ್ಲಾ ಮುಖ್ಯ ರಸ್ತೆ ಮೇಲೆ ಟಿಪ್ಪರ ಸಂಚರಿಸಿದಾಗ ರಸ್ತೆ ಮೇಲೆ ಧೂಳು ಆವರಿಸಿರುವುದು   

ವಡಗೇರಾ: ಪಟ್ಟಣದಲ್ಲಿ ಹಾದು ಹೋಗಿರುವ ಜಿಲ್ಲಾ ಮುಖ್ಯ ರಸ್ತೆ ಹದಗೇಟ್ಟಿದ್ದು, ವಾಹನಗಳ ಸಂಚಾರದಿಂದ ಧೂಳು ಆವರಿಸಿ ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.

ಈ ರಸ್ತೆಯ ಮೇಲೆ ಭಾರೀ ವಾಹನಗಳ ಸಂಚಾರದಿಂದ ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ಅಲ್ಲದೆ ರಸ್ತೆ ವಿಭಜಕದ ಬದಿಯಲ್ಲಿ ಮರುಳು ಸಂಗ್ರಹವಾಗಿದೆ. ಹೀಗಾಗಿ ವಾಹನಗಳು ಸಂಚರಿಸಿದಾಗ ಮರುಳಿನ ಮುಖಾಂತರ ಧೂಳು ಏಳುತ್ತದೆ.

‘ಈ ರಸ್ತೆಯಲ್ಲಿ ನಿತ್ಯ ಭಾರೀ ಗಾತ್ರದ ಟಿಪ್ಪರ್‌ಗಳು ಒಣ ಮಣ್ಣನ್ನು (ಮರಂ) ಮಿತಿಮೀರಿ ತುಂಬಿಕೊಂಡು ಸಂಚರಿಸುತ್ತವೆ. ಹಾಗೆಯೆ ಸಮೀಪವಿರುವ ಕೊರಗ್ರೀನ್ ಸಕ್ಕರೆ ಕಾರ್ಖಾನೆಗೆ ಕಬ್ಬನ್ನು ತುಂಬಿಕೊಂಡು ಲಾರಿಗಳು ಸಂಚರಿಸುತ್ತಿರುವುದರಿಂದ ರಸ್ತೆ ಹದಗೆಟ್ಟಿದೆ’ ಎನ್ನುತ್ತಾರೆ ಸಾರ್ವಜನಿಕರು.

ADVERTISEMENT

ಮೂಗಿಗೆ ಕರವಸ್ತ್ರ : ‘ಪಟ್ಟಣದ ವಾಲ್ಮೀಕಿ ವೃತ್ತದಿಂದ ಸಮುದಾಯ ಆರೋಗ್ಯ ಕೇಂದ್ರದವರೆಗೆ ಜಿಲ್ಲಾ ಮುಖ್ಯ ರಸ್ತೆಯ ಮೇಲೆ ಸಂಚರಿಸಬೇಕಾದರೆ ಮೂಗಿಗೆ ಕರವಸ್ತ್ರವನ್ನು ಹಿಡಿದುಕೊಂಡು ಸಂಚರಿಸುವುದು ಅನಿವಾರ್ಯ. ಏಕೆಂದರೆ ರಸ್ತೆ ಬದಿಯಲ್ಲಿ ನಡೆಯುವಾಗ ಯಾವುದೆ ಒಂದು ಲಾರಿ ಇಲ್ಲವೆ ಟಿಪ್ಪರ್‌ ಸಂಚರಿಸಿದರೆ ಅದರ ಹಿಂದೆ ಧೂಳು ಆವರಿಸುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಮೂಗಿಗೆ ಕರವಸ್ತ್ರ ಅನಿವಾರ್ಯ’ ಎನ್ನುತ್ತಾರೆ ಸ್ಥಳೀಯರು.

ವ್ಯಾಪಾರಸ್ಥರ ಗೋಳು: ಜಿಲ್ಲಾ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಇರುವ ಕಿರಾಣ, ಬಟ್ಟೆ ಹಾಗೂ ಇನ್ನಿತರ ಅಂಗಡಿಗಳಲ್ಲಿ ವಾಹನ ಸಂಚಾರದಿಂದ ಧೂಳು ಆವರಿಸಿ ಅಂಗಡಿಯಲ್ಲಿ ಇರುವ ಸರಕುಗಳನ್ನು ಧೂಳು ಆವರಿಸುತ್ತಿರುವುದರಿಂದ ದಿನಾಲೂ ಕಡ್ಡಾಯವಾಗಿ 3-4 ಬಾರಿ ಅಂಗಡಿಯಲ್ಲಿ ಕಸ ಗುಡಿಸುವುದು ಹಾಗೂ ಸಾಮಾನುಗಳನ್ನು ಒರೆಸುವದರಲ್ಲಿಯೆ ಅಂಗಡಿಯ ಮಾಲೀಕರು ಸುಸ್ತು ಆಗುತ್ತಿದ್ದಾರೆ.

ಪಟ್ಟಣದ ಮುಖ್ಯ ದ್ವಾರದ ಹತ್ತಿರ ಜಿಲ್ಲಾ ಮುಖ್ಯ ರಸ್ತೆಯ ಬದಿಯಲ್ಲಿ ತರಕಾರಿ ವ್ಯಾಪಾರಸ್ಥರು ತರಕಾರಿಯನ್ನು ಇಟ್ಟು ಮಾರಾಟ ಮಾಡುತ್ತಾರೆ. ಲಾರಿ, ಟಿಪ್ಪರಗಳ ಹಾಗೂ ಬಸ್ ಸಂಚಾರದಿಂದ ಹಸಿ ತರಕಾರಿಗಳ ಮೇಲೆ ಧೂಳು ಆವರಿಸಿ ತರಕಾರಿಗಳು ಕೊಳೆಯುವುದರ ಜತೆಗೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ’ ಎಂದು ಪಟ್ಟಣದ ತರಕಾರಿ ಖರೀದಿಸುವ ಗ್ರಾಹಕರು ಹೇಳುತ್ತಿದ್ದಾರೆ.

ರಸ್ತೆಯ ಮೇಲೆ ನೀರು ಸಿಂಪರಣೆ : ಕಬ್ಬಿನ ಲಾರಿಗಳು ಸಂಚರಿಸುತ್ತಿರುವದರಿಂದ ಧೂಳು ಆವರಿಸಬಾರದು ಎಂದು ಕೊರ ಗ್ರೀನ್ ಸಕ್ಕರೆ ಕಾರ್ಖಾನೆ ವತಿಯಿಂದ ದಿನಕ್ಕೆ ಮೂರು ಬಾರಿ ಟ್ಯಾಂಕರ ಮುಖಾಂತರ ಜಿಲ್ಲಾ ಮುಖ್ಯ ರಸ್ತೆ ಮೇಲೆ ನೀರನ್ನು ಸಿಂಪಡಿಸುತ್ತಾರೆ. ಆದರೆ ಟ್ಯಾಂಕರ ಮುಖಾಂತರ ಸಿಂಪಡಿಸಿದ ನೀರು ಸ್ವಲ್ಪ ಹೊತ್ತಿನಲ್ಲಿಯೆ ಆವಿಯಾಗುತ್ತದೆ ಮತ್ತೆ ಯಥಾ ಪ್ರಕಾರ ಧೂಳು ಆವರಿಸುತ್ತದೆ.

ರಸ್ತೆ ಮೇಲೆ ಧೂಳು ಆವರಿಸುವುದನ್ನು ತಡೆಗಟ್ಟಬೇಕಾದರೆ ವಾಲ್ಮೀಕಿ ವೃತ್ತದಿಂದ ಹಳೆಯ ಪೊಲೀಸ್ ಠಾಣೆಯವರೆಗೆ ರಸ್ತೆ ವಿಭಜಕದ ಸುತ್ತಲು ಸಂಗ್ರಹವಾಗಿರುವ ಮರುಳನ್ನು ಸಂಬಂಧಪಟ್ಟ ಇಲಾಖೆಯ ಸಿಬ್ಬಂದಿ ನಿಯಮಿತವಾಗಿ ತೆರವುಗೊಳಿಸಬೇಕು. ಹಾಗೆಯೆ ಭಾರೀ ವಾಹನಗಳ ಸಂಚಾರವನ್ನು ಜಿಲ್ಲಾ ಮುಖ್ಯ ರಸ್ತೆ ಮೇಲೆ ನಿಷೇಧಿಸಬೇಕು. ಅದರ ಜತೆಗೆ ಜಿಲ್ಲಾ ಮುಖ್ಯ ರಸ್ತೆಯನ್ನು ದುರಸ್ತಿ ಮಾಡಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪಟ್ಟಣ ವಾಸಿಗಳು ಒತ್ತಾಯಿಸುತ್ತಿದ್ದಾರೆ.

ಧೂಳಿನಿಂದ ಶ್ವಾಸಕೋಶ ತೊಂದರೆ ಡಸ್ಟ ಅಲರ್ಜಿ ನೆಗಡಿ ಉಸಿರಾಟದ ತೊಂದರೆ ಹಾಗೂ ಇನ್ನಿತರ ರೋಗಗಳು ಬರುತ್ತವೆ. ಅದಕ್ಕಾಗಿ ರಸ್ತೆ ಬದಿಯಲ್ಲಿ ನಡೆಯುವಾಗ ಕಡ್ಡಾಯವಾಗಿ ಮಾಸ್ಕ ಹಾಕಿಕೊಳ್ಳಬೇಕು
–ರಮೇಶ ಗುತ್ತೇದಾರ, ತಾಲ್ಲೂಕು ಆರೋಗ್ಯಾಧಿಕಾರಿ
ವ್ಯಾಪಾರ ಮಾಡುವದಕ್ಕಿಂತಲೂ ದಿನಾಲೂ ಅಂಗಡಿಯಲ್ಲಿ ಇರುವ ಸಾಮಾನುಗಳನ್ನು ಒರೆಸಿ ಇಡುವುದರಲ್ಲಿಯೆ ಸಾಕಷ್ಟು ಸಮಯ ವ್ಯಯವಾಗುತ್ತದೆ
–ಸುನಿಲ್, ವ್ಯಾಪಾರಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.