ADVERTISEMENT

ಯಾದಗಿರಿ | ಪೂರ್ವ ಮುಂಗಾರು: 13.16 ಹೆಕ್ಟೇರ್‌ ಹಾನಿ‌

ಅತಿವೃಷ್ಟಿ, ಬಿರುಗಾಳಿಯಿಂದ ತೋಟಗಾರಿಕೆ ಬೆಳೆಗಳು ನಷ್ಟ, ಸುರಪುರ ತಾಲ್ಲೂಕಿನಲ್ಲೇ ಹೆಚ್ಚು

ಬಿ.ಜಿ.ಪ್ರವೀಣಕುಮಾರ
Published 16 ಜೂನ್ 2025, 6:51 IST
Last Updated 16 ಜೂನ್ 2025, 6:51 IST
ಕೆಂಭಾವಿ ಪಟ್ಟಣದ ಉಪ ತಹಶೀಲ್ದಾರ್‌ ಕಚೇರಿಗೆ ಮಾರ್ಗಮಧ್ಯೆ ರಸ್ತೆ ಮೇಲೆ ಮಳೆ ನೀರು ಹರಿದು ಸಂಪೂರ್ಣ ರಸ್ತೆ ಜಲಾವೃತವಾಗಿರುವುದು (ಸಂಗ್ರಹ ಚಿತ್ರ)
ಕೆಂಭಾವಿ ಪಟ್ಟಣದ ಉಪ ತಹಶೀಲ್ದಾರ್‌ ಕಚೇರಿಗೆ ಮಾರ್ಗಮಧ್ಯೆ ರಸ್ತೆ ಮೇಲೆ ಮಳೆ ನೀರು ಹರಿದು ಸಂಪೂರ್ಣ ರಸ್ತೆ ಜಲಾವೃತವಾಗಿರುವುದು (ಸಂಗ್ರಹ ಚಿತ್ರ)   

ಯಾದಗಿರಿ: ಈ ಬಾರಿಯ ಪೂರ್ವ ಮುಂಗಾರು ಅಕಾಲಿಕ ಮಳೆಯಿಂದ ಜಿಲ್ಲೆಯಲ್ಲಿ 13.16 ಹೆಕ್ಟೇರ್‌ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಜೊತೆಗೆ ಗುಡುಗು, ಮಿಂಚು ಹಾಗೂ ಬಿರುಗಾಳಿಯಿಂದ ಕೂಡಿದ ಮಳೆಯಿಂದಾಗಿ ಗಿಡ-ಮರಗಳು, ಟಿನ್‌ಶೆಡ್ ಮನೆಗಳು ಹಾಗೂ ವಿದ್ಯುತ್ ಕಂಬಗಳು ಮತ್ತು ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿ ಜನಜೀವನ ತೊಂದರೆ ಅನುಭವಿಸಿದ್ದಾರೆ.

ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿ ಮಾವು, ಪಪ್ಪಾಯ, ನಿಂಬೆ, ಸಪೋಟ ಸೇರಿದಂತೆ 6.36 ಹೆಕ್ಟೇರ್‌ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಸುರಪುರ, ಹುಣಸಗಿ, ವಡಗೇರಾ ತಾಲ್ಲೂಕಿನಲ್ಲಿ 5.28 ಹೆಕ್ಟೇರ್‌ ಮಾವು ಬೆಳೆ ನಷ್ಟವಾಗಿದೆ. ಪಪ್ಪಾಯ 3.86 ಹೆಕ್ಟೇರ್‌, ನಿಂಬೆ 1.10 ಹೆಕ್ಟೇರ್‌, ಸಪೋಟ 0.60 ಹೆಕ್ಟೇರ್‌, ಬದನೆ 0.20 ಹೆಕ್ಟೇರ್‌, ಟೊಮೆಟೊ 0.20 ಹೆಕ್ಟೇರ್‌, ಈರುಳ್ಳಿ 0.40 ಹೆಕ್ಟೇರ್‌, ನುಗ್ಗೆ 1.60 ಹೆಕ್ಟೇರ್‌ ಸೇರಿದಂತೆ 13.16 ಹೆಕ್ಟೇರ್‌ ತೋಟಗಾರಿಕೆ ಬೆಳೆ ನಾಶವಾಗಿದೆ.

564 ವಿದ್ಯುತ್ ಕಂಬಗಳಿಗೆ ಹಾನಿ: ಏಪ್ರಿಲ್ ತಿಂಗಳಲ್ಲಿ ಜಿಲ್ಲೆಯ ಯಾದಗಿರಿ, ಗುರುಮಠಕಲ್, ವಡಗೇರಾ, ಸುರಪುರ, ಶಹಾಪುರ ಹಾಗೂ ಹುಣಸಗಿ ಭಾಗದಲ್ಲಿ ಬಿರುಗಾಳಿ ಹಾಗೂ ಮಳೆಗೆ ಮರಗಳು ಮುರಿದು ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯನ್ನುಂಟು ಮಾಡಿವೆ. ಜೆಸ್ಕಾಂನ ಯಾದಗಿರಿ ಉಪ ವಿಭಾಗದಲ್ಲಿ 230 ವಿದ್ಯುತ್ ಕಂಬಗಳು, 71 ಪರಿವರ್ತಕಗಳು, 2 ಕಿ.ಮೀ. ವೈರ್ ಹಾಗೂ 12 ಡಬಲ್ ಪೋಲ್ ಸ್ಟ್ರೆಕ್ಚರ್ ಹಾನಿಯಾಗಿದ್ದರೆ, ಸುರಪುರ ಉಪ ವಿಭಾಗದಲ್ಲಿ 334 ವಿದ್ಯುತ್ ಕಂಬಗಳು ಹಾಗೂ 3 ಪರಿವರ್ತಕಗಳು ಹಾನಿಯಾಗಿವೆ. ಒಟ್ಟಾರೆ ಜಿಲ್ಲೆಯಲ್ಲಿ 564 ವಿದ್ಯುತ್ ಕಂಬಗಳು, 74 ಪರಿವರ್ತಕಗಳು ಹಾನಿಗೊಳಗಾಗಿವೆ.

ADVERTISEMENT
ಜಿಲ್ಲೆಯಲ್ಲಿ ಪೂರ್ವ ಮುಂಗಾರು ಅವಧಿಯಲ್ಲಿ 13.16 ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು ಸರ್ಕಾರಕ್ಕೆ ಈ ಕುರಿತು ವರದಿ ಸಲ್ಲಿಸಲಾಗಿದೆ
ರಾಘವೇಂದ್ರ ಉಕ್ಕನಾಳ ತೋಟಗಾರಿಕೆ ಉಪನಿರ್ದೇಶಕ
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಶೇ 15 ರಿಂದ 20ರಷ್ಟು ಬಿತ್ತನೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪೂರ್ಣಗೊಳ್ಳಲಿದೆ
ರತೇಂದ್ರನಾಥ ಸೂಗೂರ ಜಂಟಿ ಕೃಷಿ ನಿರ್ದೇಶಕ

ಅಂಕಿ ಅಂಶ ತಾಲ್ಲೂಕು; ತೋಟಗಾರಿಕೆ ಬೆಳೆ ಹಾನಿ (ಹೆಕ್ಟೇರ್‌ಗಳಲ್ಲಿ) ಸುರಪುರ;6.36 ಹುಣಸಗಿ;0.80 ವಡಗೇರಾ; 3.60 ಗುರುಮಠಕಲ್‌:2.40 ಒಟ್ಟು;13.16

ಎರಡು ನದಿಗಳಿಗೆ ನೀರು ಜಿಲ್ಲೆಯಲ್ಲಿ ಕೃಷ್ಣಾ ಮತ್ತು ಭೀಮಾ ನದಿಗಳು ಹರಿಯುತ್ತಿದ್ದು ನೀರಿನ ಹರಿವು ಹೆಚ್ಚಿದೆ. ಕಳೆದ ಮೂರು ವಾರಗಳಿಂದ ಭೀಮಾ ನದಿ ಪಾತ್ರದಲ್ಲಿ ಪ್ರವಾಹ ಸ್ಥಿತಿ ಇದ್ದು ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ನಗರ ಹೊರವಲಯದ ಭೀಮಾ ನದಿ ದಡ ಮೀರಿ ಹರಿಯುತ್ತಿದೆ.ಕಳೆದ ಮೂರು ದಿನಗಳಿಂದ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೂ ನೀರಿನ ಹರಿವು ಹೆಚ್ಚಳವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.