ಸುರಪುರ: ‘ನೀರು ಬಳಕೆದಾರರ ಸಹಕಾರ ಸಂಘಗಳು ಅಭಿವೃದ್ಧಿ ಆಗಬೇಕಾದರೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು’ ಎಂದು ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ರಾಜಾ ಮುಕುಂದನಾಯಕ ಹೇಳಿದರು.
ಇಲ್ಲಿಯ ಗರುಡಾದ್ರಿ ಕಲಾಮಂದಿರದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಲ, ಜಿಲ್ಲಾ ಸಹಕಾರ ಒಕ್ಕೂಟದ ಆಶ್ರಯದಲ್ಲಿ ಹುಣಸಗಿ ಮತ್ತು ಸುರಪುರ ತಾಲ್ಲೂಕಿನಲ್ಲಿ ಬರುವ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ-ಕಾರ್ಯದರ್ಶಿಗಳಿಗೆ ಶುಕ್ರವಾರ ಹಮ್ಮಿಕೊಂಡಿದ್ದ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
‘ಸುರಪುರ ಮತ್ತು ಹುಣಸಗಿ ತಾಲ್ಲೂಕಿನಲ್ಲಿ ಸುಮಾರು 236 ನೀರು ಬಳಕೆದಾರ ಸಹಕಾರ ಸಂಘಗಳಿವೆ. ಕೇವಲ ಹೆಸರಿಗೆ ಮಾತ್ರ ಸಹಕಾರ ಸಂಘಗಳಾಗಬಾರದು. ಇಲಾಖೆಯಿಂದ ಸಿಗುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಕೆವೈಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ ಮಾತನಾಡಿ, ‘ಸಹಕಾರ ಸಂಘಗಳು ಕಾಯ್ದೆಯ ನಿಯಮ ಪಾಲಿಸಬೇಕು ಹಾಗೂ ತಿಳಿದುಕೊಂಡಿರಬೇಕು. ಆಗ ಮಾತ್ರ ಸಹಕಾರ ಸಂಘಗಳು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಲು ಸಹಕಾರಿಯಾಗುತ್ತದೆ’ ಎಂದರು.
ನೀರಾವರಿ ಸಲಹಾ ಸಮಿತಿ ಮಾಜಿ ಸದಸ್ಯ ಎಂ.ಆರ್. ಖಾಜಿ ಮಾತನಾಡಿ, ‘ನೀರು ಬಳಕೆದಾರರ ಸಹಕಾರ ಸಂಘಗಳು ರೈತರಿಗೆ ಸವಲತ್ತುಗಳನ್ನು ಒದಗಿಸಬೇಕು. ಕರ ವಸೂಲಿಗೆ ಶ್ರಮಿಸಬೇಕು’ ಎಂದರು.
ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಎಂ.ನಾರಾಯಣ ಸಹಕಾರ ಸಂಘಗಳ ಕಾಯ್ದೆ ಬಗ್ಗೆ, ನಿರ್ದೇಶಕ ಕೆಂಚಪ್ಪ ನಗನೂರ ಅವರು ಆಡಳಿತ ಮಂಡಳಿಯ ಹಕ್ಕು, ಜವಾಬ್ದಾರಿ, ಕರ್ತವ್ಯ, ಸಭೆಗಳು ಜರುಗಿಸುವ ಕುರಿತು, ಸೇಡಂ ಗೋವಿಂದಪ್ಪ ಅವರು ಸಹಕಾರ ಸಂಘದ ಲೆಕ್ಕಪತ್ರಗಳು ಹಾಗೂ ಲೆಕ್ಕ ಪರಿಶೋಧನೆ ಕುರಿತು ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿ ಅಬ್ದುಲ್ ರಹೀಂ ಅವರು ನೀರು ನಿರ್ವಹಣೆ ಮತ್ತು ನೀರಿನ ಸಂರಕ್ಷಣೆ ಬಗ್ಗೆ ಉಪನ್ಯಾಸ ನೀಡಿದರು.
ಲೆಕ್ಕ ಪರಿಶೋಧನೆ ಇಲಾಖೆ ಬಸವರಾಜ ಸ್ವಾಗತಿಸಿದರು. ವೃತ್ತಿಪರ ನಿರ್ದೇಶಕ ಪ್ರಕಾಶ ಅಂಗಡಿ ಕನ್ನೆಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಹಕಾರಿ ಶಿಕ್ಷಕಿ ಸುಜಾತಾ ಮಠ ನಿರೂಪಿಸಿದರು. ಜಿಲ್ಲಾ ಸಹಕಾರ ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇಖಾ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.