ADVERTISEMENT

ಯಾದಗಿರಿ: ಈದ್ ಉಲ್ ಫಿತ್ರ್‌: ಭರ್ಜರಿ ಖರೀದಿ

ರಂಜಾನ್ ಹಬ್ಬದ ಖರೀದಿಯಲ್ಲಿ ತೊಡಗಿಸಿಕೊಂಡಿದ್ದ ಮುಸ್ಲಿಮರು

ಬಿ.ಜಿ.ಪ್ರವೀಣಕುಮಾರ
Published 4 ಜೂನ್ 2019, 20:00 IST
Last Updated 4 ಜೂನ್ 2019, 20:00 IST
ಯಾದಗಿರಿಯಲ್ಲಿ ಮಸೀದಿಯನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು
ಯಾದಗಿರಿಯಲ್ಲಿ ಮಸೀದಿಯನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು   

ಯಾದಗಿರಿ: ನಗರದ ಗಾಂಧಿ ಚೌಕ್‌ ಬಳಿ ಈದ್ ಉಲ್ ಫಿತ್ರ್‌ ಅಂಗವಾಗಿ ಗ್ರಾಹಕರನ್ನು ಸೆಳೆಯಲು ವ್ಯಾಪಾರಿಗಳು ವಿವಿಧ ರಿಯಾಯ್ತಿ ಘೋಷಿಸುವ ಮೂಲಕ ಭರ್ಜರಿ ವ್ಯಾಪಾರಿ ನಡೆಸಿದರು.

ಹೆಣ್ಣು ಮಕ್ಕಳ ಬಟ್ಟೆ ಒಂದು ಡ್ರೆಸ್‌ಗೆ ₹400, 300₹, ₹200 ಈ ರೀತಿ ಕೂಗುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದರು.

ರಂಜಾನ್ ಹಬ್ಬದ ಅಂಗವಾಗಿ ನಗರದ ವಿವಿಧ ಮಸೀದಿಗಳು ವಿದ್ಯುತ್‌ ದೀಪಗಳಿಂದ ಅಲಂಕಾರಗೊಂಡಿವೆ. ವಿವಿಧ ಬಣ್ಣದ ದೀಪಗಳಿಂದ ಕಂಗೊಳಿಸುತ್ತಿವೆ. ಮಂಗಳವಾರ ಸಂಜೆಯಿಂದಲೇ ಮುಸ್ಲಿಮರು ಬಟ್ಟೆ, ಚಪ್ಪಲಿ ಹಾಗೂ ಹಬ್ಬಕ್ಕೆ ಬೇಕಾಗುವ ಪದಾರ್ಥಗಳ ಖರೀದಿಯಲ್ಲಿ ತೊಡಗಿಸಿಕೊಂಡಿದ್ದರು.

ADVERTISEMENT

ನಗರದ ಗಾಂಧಿ ಚೌಕ್ ಜನಸಂದಣಿಯಿಂದ ತುಂಬಿತ್ತು. ಬಳೆ, ಬಟ್ಟೆ, ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಸೌಂದರ್ಯವರ್ಧಕ ಉತ್ಪನ್ನಗಳ ಖರೀದಿಯಲ್ಲಿ ಮಹಿಳೆಯರು ತಲ್ಲೀನರಾಗಿದ್ದರು. ಕೆಲವೆಡೆ ಬಟ್ಟೆ ಖರೀದಿಯಲ್ಲಿ ರಿಯಾಯ್ತಿ ಘೋಷಿಸಲಾಗಿತ್ತು. ರಸ್ತೆ ಬದಿಯಲ್ಲಿ ಕೆಲ ಅಂಗಡಿಗಳು ತಲೆ ಎತ್ತಿ ವಿವಿಧ ಧ್ವನಿಯಿಂದ ಗ್ರಾಹಕರನ್ನು ಸೆಳೆಯುವ ಪ್ರಯತ್ನ ನಡೆಸಲಾಗಿತ್ತು.

ಹಾಲಿನ ಪಾಯಸಕ್ಕಾಗಿ ಖರ್ಜೂರ, ಹಣ್ಣು ಹಂಪಲು, ಶ್ಯಾವಿಗಿ, ಒಣ ದ್ರಾಕ್ಷಿ, ಗೊಂಡಬಿ, ಕಾಜು, ಬಿರಿಯಾನಿ ಮಸಲಾ ಮತ್ತಿತರ ಮಸಲಾ ಪದಾರ್ಥ ಖರೀದಿ ಜೋರಾಗಿತ್ತು. ಸಂಜೆ ಹೊತ್ತಿನಲ್ಲಿ ಜನ ಜಂಗುಳಿಯಿಂದ ಈ ಭಾಗದಲ್ಲಿ ಸಂಚರಿಸುವ ಬೈಕ್ ಸವಾರರು ಪರದಾಡಿದರು.

‘ಫಿತ್ರ್‌ ಅಂಗವಾಗಿ ಜುಬ್ಬಾ, ಪೈಜಾಮ, ಕುರ್ತಾ ಪೈಜಾಮ, ಟೋಪಿ, ರುಮಾಲ್, ಚಪ್ಪಲಿ ಖರೀದಿಸಿದೆ. ಅಲ್ಲದೇ ಹಬ್ಬದ ವಿಶೇಷವಾಗಿ ‘ಇತಾರ್’ ಎನ್ನುವ ವಿಶೇಷ ಸುಗಂಧ ದ್ರವ್ಯ ಖರೀದಿಸಿದೆ. ಹಬ್ಬದಲ್ಲಿ ಹೊಸ ಬಟ್ಟೆ ಧರಿಸಿಕೊಂಡು ಪ್ರಾರ್ಥನೆಗೆ ತೆರಳುವುದೇ ಒಂದು ಖುಷಿ’ ಎಂದು ಮಸೂರ್‌ ಅಹ್ಮದ್‌ ಹೇಳುತ್ತಾರೆ.‌

‘ಫಿತ್ರ್‌ ಎಂದರೆ ದಾನ ಮಾಡುವುದು. ಈ ಹಬ್ಬದಲ್ಲಿ ನಮ್ಮ ಆದಾಯದಲ್ಲಿ ಬಡವರಿಗೆ ದಾನ ಮಾಡುವುದೇ ಪ್ರಮುಖವಾಗಿದೆ. ಶೇಕಡ 2.5 ರಷ್ಟು ದಾನ ಮಾಡುವುದು ನಿಯಮ. ಮೊದಲು ನಮ್ಮ ಆದಾಯದಲ್ಲಿ ಕುಟುಂಬದವರಿಗೆ ದಾನ ಮಾಡಬೇಕು. ನಂತರ ನೆರೆ ಹೊರೆಯವರು, ಅನಂತರ ಬಡವರಿಗೆ ದಾನ ಮಾಡುವುದು ಈ ಹಬ್ಬದಲ್ಲಿ ಪ್ರಮುಖವಾಗಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.