ADVERTISEMENT

ಪಾರದರ್ಶಕ ಚುನಾವಣೆಗೆ ಒಗ್ಗೂಡಿ ಕೆಲಸ ಮಾಡೋಣ: ಸಂತೋಷ ಪಾಟೀಲ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 5:55 IST
Last Updated 1 ಏಪ್ರಿಲ್ 2023, 5:55 IST
ಗುರುಮಠಕಲ್ ಪಟ್ಟಣದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ನಡೆದ ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ತಂಡಗಳ ಸಭೆ ನಡೆಯಿತು
ಗುರುಮಠಕಲ್ ಪಟ್ಟಣದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ನಡೆದ ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ತಂಡಗಳ ಸಭೆ ನಡೆಯಿತು   

ಗುರುಮಠಕಲ್: ವಿಧಾನಸಭಾ ಮತಕ್ಷೇತ್ರದಲ್ಲಿ ಪಾರದರ್ಶಕ ಹಾಗೂ ಮುಕ್ತ ಮತದಾನದ ಜೊತೆಗೆ ಶೇ.90ಕ್ಕೂ ಹೆಚ್ಚಿನ ಮತದಾನವಾಗಲು ಚುನಾವಣೆಯ ಕರ್ತವ್ಯಕ್ಕೆ ನಿಯೋಜನೆಗೊಂಡ ಎಲ್ಲಾ ಅಧಿಕಾರಿಗಳೂ ಒಗ್ಗೂಡಿ ಕೆಲಸ ಮಾಡೋಣ ಎಂದು ಚುನಾವಣಾಧಿಕಾರಿ ಸಂತೋಷ ಪಾಟೀಲ ಕರೆ ನೀಡಿದರು.

ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಗುರುಮಠಕಲ್ ಮತಕ್ಷೇತ್ರವು ಯಾದಗಿರಿ ಮತ್ತು ಗುರುಮಠಕಲ್ ತಾಲ್ಲೂಕು ವ್ಯಾಪ್ತಿಯ ಮತಗಟ್ಟೆಗಳನ್ನು ಒಳಗೊಂಡಿದ್ದು, ತಾಲ್ಲೂಕು ಪಂಚಾಯಿತಿಗಳ ಇಒಗಳು ನಿಮ್ಮ ವ್ಯಾಪ್ತಿ ಮತಗಟ್ಟೆಗಳಲ್ಲಿನ ಮೂಲಸೌಕರ್ಯವನ್ನು ಮೇಲಿಂದ ಮೇಲೆ ಪರಿಶೀಲಿಸಿ ಖಚಿತಪಡಿಸಿಕೊಳ್ಳಿ ಎಂದು ಹೇಳಿದರು.

ಪುಟಪಾಕ, ಕುಂಟಿಮರಿ, ಕಡೆಚೂರುಗಳಲ್ಲಿ ಅಂತರರಾಜ್ಯ ಚೆಕ್ ಪೋಸ್ಟ್, ಇಟಕಾಲ, ಯರಗೋಳ, ಹಂದ್ರಿಕಿ ಹತ್ತಿರ ಮೂರು ಚೆಕ್ ಪೋಸ್ಟ್ ಸೇರಿ ಮತಕ್ಷೇತ್ರದಲ್ಲಿ ಒಟ್ಟು 6 ಚೆಕ್‌ಪೋಸ್ಟ್‌ಗಳನ್ನು ಆರಂಭಿಸಿದ್ದು, ಬೆಳಿಗ್ಗೆ 6 ರಿಂದ 2, ಮದ್ಯಾಹ್ನ 2 ರಿಂದ ರಾತ್ರಿ 10 ಹಾಗೂ ರಾತ್ರಿ 10 ರಿಂದ ಬೆಳಿಗ್ಗೆ 6ರವೆರೆಗೆ ಸರತಿಯಂತೆ ಮೂರು ಅವಧಿಗೆ ಸ್ಥಾಯಿ ಕಣ್ಗಾವಲು ತಂಡಗಳನ್ನು ನಿಯೋಜಿಸಿದ್ದು, ಅಂತರರಾಜ್ಯ ಚೆಕ್ ಪೋಸ್ಟ್ ಗಳಿಗೆ ಅಬಕಾರಿ ಸಿಬ್ಬಂದಿಯನ್ನೂ ನೇಮಕ ಮಾಡಲಾಗಿದೆ ಎಂದರು.

ADVERTISEMENT

ಒಂದೇ ದಿನ ಒಂದೇ ಸ್ಥಳದಲ್ಲಿ ಎರಡು ಅಥವಾ ಹೆಚ್ಚಿನ ಪಕ್ಷಗಳು ಅಥವಾ ಅಭ್ಯರ್ಥಿಗಳು ಕಾರ್ಯಕ್ರಮಕ್ಕೆ ಅನುಮತಿ ಕೋರಿದರೆ ಮೊದಲು ಬಂದವರಿಗೆ ಮೊದಲ ಆಧ್ಯತೆ ನೀಡಿ. ಈ ನಿಯಮ ಎಲ್ಲಾ ಪಕ್ಷಗಳಿಗೆ ಮತ್ತು ಅಭ್ಯರ್ಥಿಗಳ ವಿಷಯದಲ್ಲೂ ಅನ್ವಯಿಸಿ ಎಂದು ಸೂಚಿಸಿದರು.

ತಹಶೀಲ್ದಾರ್ ಮಹಮ್ಮದ್ ಮೋಸಿನ್ ಅಹ್ಮದ್, ಗ್ರೇಡ್ 2 ತಹಶೀಲ್ದಾರ್ ನರಸಿಂಹಸ್ವಾಮಿ, ಯಾದಗಿರಿ ತಾಲ್ಲೂಕು ಪಂಚಾಯಿತಿ ಇಒ ಬಸವರಾಜ ಶರಭೈ, ಗುರುಮಠಕಲ್ ತಾಲ್ಲೂಕು ಪಂಚಾಯಿತಿ ಇಒ ಎಸ್.ಎಸ್.ಖಾದ್ರೋಳಿ, ಸಿಡಿಪಿ ವನಜಾಕ್ಷಿ ಬೆಂಡಿಗೇರಿ, ಪುರಸಭೆ ಮುಖ್ಯಾಧಿಕಾರಿ ಭಾರತಿ ಸಿ.ದಂಡೋತಿ, ಪಿಐ ಅಂಬರಾಯ, ಪ್ರಾದೇಶಿಕ ಸಾರಿಗೆ ಇನ್ಸ್ಪೆಕ್ಟರ್ ವೆಂಕಟಪ್ಪ ಕಲಾಲ, ಬಿ.ಆರ್.ಪಿ. ಶಶಿಕಾಂತ ಜನಾರ್ಧನ ಸೇರಿದಂತೆ ವಿವಿಧ ತಂಡಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.