
ಯಾದಗಿರಿ: ತಾಲ್ಲೂಕಿನ ಹೆಡಗಿಮದ್ರಾ ಗ್ರಾಮದ ವಿದ್ಯುತ್ ಸಮಸ್ಯೆಯನ್ನು ಪರಿಹರಿಸುವಂತೆ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿ ಮುಂಭಾಗದಲ್ಲಿ ಈಚೆಗೆ ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಿದರು.
ಸಂಘಟನೆ ಜಿಲ್ಲಾ ಅಧ್ಯಕ್ಷ ಶರಣಗೌಡ ಗೂಗಲ್ ಮಾತನಾಡಿ, ‘ಹೆಡಗಿಮದ್ರಾ ಗ್ರಾಮದಲ್ಲಿ ಸತತ ಮೂರು ದಿನಗಳು ವಿದ್ಯುತ್ ಇಲ್ಲದೆ ಅರ್ಧ ಗ್ರಾಮ ಕತ್ತಲಲ್ಲಿ ಕಳೆದಿದೆ. ಕಡಿಮೆ ಸಾಮರ್ಥ್ಯದ ಟಿಸಿಗಳ ಮೇಲೆ ಹೆಚ್ಚು ಒತ್ತಡ ಬಿದ್ದು, ಆಗಾಗ ಸಂಪರ್ಕ ಕಡಿತ ಆಗುತ್ತಿದೆ’ ಎಂದರು.
‘ಏಕಾಏಕಿ ವೋಲ್ಟೆಜ್ ಏರುಪೇರಾಗಿ ಟಿವಿ, ಫ್ಯಾನ್, ವಿದ್ಯುತ್ ದೀಪಗಳು ಸುಡುತ್ತಿವೆ. ಈ ಬಗ್ಗೆ ಹಲವು ಬಾರಿ ಜೆಇ ಹಾಗೂ ಎಇಇ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಜೋತು ಬಿದ್ದಿರುವ ವಿದ್ಯುತ್ ತಂತಿಯನ್ನು ಸರಿಪಡಿಸಿ, ಕೃಷಿ ಪಂಪ್‌ಸೆಟ್‌ಗಳಿಗೆ ಏಳು ಗಂಟೆ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು. ಮನೆಗಳ ಮೇಲೆ ಹಾದು ಹೋಗಿರುವ ಎಚ್‌ಟಿ ಲೈನ್ ಬೇರೆಡೆ ಸ್ಥಳಾಂತರಿಸಬೇಕು’ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ಜಮಾಲ್ ಸಾಬ್, ಅಂಬರೀಶ್ ಕೆಂಭಾವಿ, ಮರಿಯಪ್ಪ ಕೋಟೆಕಲ್, ದೇವೇಂದ್ರಪ್ಪ ನಾಟಿಕಾರ್, ಖಾಜಾ ಹುಲ್ಕಲ್, ಬಸವರಾಜ್ ದಂಡಗುಂಡ, ಭೀಮರಾಯ, ಭೀಮರಾಯ ಪೂಜಾರಿ, ಸಾಹೇಬ್ ಗೌಡ ಅಲ್ಲಿಪುರ, ಮಲ್ಲಮ್ಮ ಅಂಬಿಗೇರ, ಮೈಬುಬ್ಬಿ ಉಲ್ಕಲ್, ಶಾಂತಮ್ಮ, ಮಲ್ಲಮ್ಮ, ನಾಗಮ್ಮ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.