ADVERTISEMENT

ಪರಿಸರ ಉಳಿದರೆ ಬದುಕುಳಿಯಲು ಸಾಧ್ಯ: 11.50 ಕೋಟಿ ಸಸಿ ನೆಡುವ ಗುರಿ: ಖಂಡ್ರೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 5:14 IST
Last Updated 29 ಜುಲೈ 2025, 5:14 IST
ಯಾದಗಿರಿ ನಗರದ ಜಿಲ್ಲಾಧಿಕಾರಿ ಅಡಿಟೋರಿಯಂ ಸಭಾಂಗಣದಲ್ಲಿ ಸೋಮವಾರ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ವನಮಹೋತ್ಸವದಲ್ಲಿ ಸಸಿಗೆ ನೀರುಣಿಸುವ ಮೂಲಕ ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡಿದರು
ಯಾದಗಿರಿ ನಗರದ ಜಿಲ್ಲಾಧಿಕಾರಿ ಅಡಿಟೋರಿಯಂ ಸಭಾಂಗಣದಲ್ಲಿ ಸೋಮವಾರ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ವನಮಹೋತ್ಸವದಲ್ಲಿ ಸಸಿಗೆ ನೀರುಣಿಸುವ ಮೂಲಕ ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡಿದರು    

ಯಾದಗಿರಿ: ‘ಸಸಿಗಳನ್ನು ನೆಟ್ಟ ಪೋಷಿಸಲು ಅರಣ್ಯ ಇಲಾಖೆ ಸಿಬ್ಬಂದಿ ಕೆಲಸ ಮಾಡುತ್ತಾರೆ. ಪ್ರಕೃತಿ ಮತ್ತು ಪರಿಸರ ಉಳಿದರೆ ಮಾತ್ರ, ನಾವೆಲ್ಲರೂ ಬದುಕುಳಿಯಲು ಸಾಧ್ಯ’ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದರು.

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೋಮವಾರ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ವನಮಹೋತ್ಸವದ ನಿಮಿತ್ತ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

‘ಪ್ರಕೃತಿ ಮತ್ತು ಪರಿಸರ ಉಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ 11.50 ಕೋಟಿ ಸಸಿ ನೆಟ್ಟು, ಅವುಗಳನ್ನು ಪೋಷಿಸಿ ಬೆಳೆಸುವ ಗುರಿ ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆ ಹೊಂದಿದೆ’ ಎಂದು ಹೇಳಿದರು.

ADVERTISEMENT

‘ವರ್ಷಗಳಲ್ಲಿ ಮೂರು ಕೋಟಿ ಸಸಿ ನೆಡಲಾಗುವುದು. ಯಾದಗಿರಿ ಜಿಲ್ಲೆಯಲ್ಲಿ 4 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಒಂದು ಲಕ್ಷ ಎತ್ತರದ ಸಸಿಗಳನ್ನು ನೆಡಲಾಗುವುದು. ಅವುಗಳನ್ನು ಕೀಳಲು ಆಗುವುದಿಲ್ಲ ಮತ್ತು ಬಹುಕಾಲ ಬದುಕುತ್ತವೆ’ ಎಂದು ಹೇಳಿದರು.

‘ಇಂದಿನ ಹವಾಮಾನ ಮನುಕುಲದ ಉಳಿವಿಗೆ ತೊಂದರೆಯಾಗುತ್ತಿದೆ. ಗಿಡ- ಮರಗಳ ಮಾರಣ ಹೋಮದಿಂದ ಪರಿಸರ ನಾಶವಾಗಿ ಜೀವ, ಜಂತುಗಳು ಸಾಯುತ್ತಿವೆ. ಮರಗಳಿಂದ ಹೇರಳವಾದ ಆಮ್ಲಜನಕ ಸಿಗುತ್ತದೆ. ಇದರಿಂದ ಸಕಲ ಜೀವರಾಶಿಗಳು ಬದಕುಲು ಸಹಾಯವಾಗುತ್ತದೆ’ ಎಂದು ಹೇಳಿದರು.

‘ಹವಾಮಾನದಲ್ಲಿ ಸಾಕಷ್ಟು ವ್ಯತ್ಯಾಸ ಆಗುತ್ತಿರುವುದರಿಂದ ಪ್ರಕೃತಿ ವಿಕೋಪ, ಗುಡ್ಡಗಳ ಕುಸಿತ, ಪ್ರವಾಹ, ತಾಪಮಾನ ಹೆಚ್ಚಾಗುವುದು ನಾವೆಲ್ಲರೂ ಕಾಣುತ್ತಿದ್ದೇವೆ. ಮಕ್ಕಳಿಗೆ ಪರಿಸರ ಕಾಳಜಿ ಬಗ್ಗೆ ಜಾಗೃತಿ ಮೂಡಿಸಬೇಕು. ಅವರಿಗೆ ಗಿಡ, ಮರಗಳಿಂದ ಏನು ಲಾಭ ಎಂಬ ಬಗ್ಗೆ ತಿಳಿಸಬೇಕು’ ಎಂದು ತಿಳಿಸಿದರು.

‘ಪ್ಲಾಸ್ಟಿಕ್ ಬಳಕೆ ಮಾಡಬೇಡಿ, ಬಟ್ಟೆ ಕೈಚೀಲಗಳೇ ಬಳಸಬೇಕು. ಇಂದು ಆಹಾರ, ಹಾಲು, ತರಕಾರಿ ಹಣ್ಣು ಹಂಪಲು ಸೇರಿದಂತೆಯೇ ಎಲ್ಲದರಲ್ಲೂ ಮಾಲಿನ್ಯವಿದೆ. ಕಲುಷಿತವಾಗಿದ್ದನ್ನು ನಾವು ಸೇವಿಸುತ್ತಿದ್ದೇವೆ. ಅದನ್ನು ಬಳಸುವ ಅನಿರ್ವಾಯ ಎದುರಾಗಿದೆ. ಇದು ಸಂಪೂರ್ಣ ಹೋಗಬೇಕು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಮಾತನಾಡಿ, ‘ಪರಿಸರ ಉಳಿವಿಗೆ ಮತ್ತು ಗಿಡ, ಮರಗಳ ರಕ್ಷಣೆಗೆ ಸರ್ಕಾರ ಸಾಕಷ್ಟು ಅನುದಾನ ನೀಡಿ ಖರ್ಚು ಮಾಡುತ್ತಿದೆ. ನಾವೆಲ್ಲರೂ ಗಿಡ, ಮರಗಳನ್ನು ಹೆಚ್ಚು ಬೆಳೆಸೋಣ’ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಶಾಸಕ ರಾಜಾ ವೇಣುಗೋಪಾಲ ನಾಯಕ, ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಚೇತನ ಗಸ್ತಿ, ಸುಮೀತಕುಮಾರ ಪಾಟೀಲ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹ್ಮದ್ ಅಸದ್ ಉಪಸ್ಥಿತರಿದ್ದರು.

ಆರ್. ಜೆ.ಮಂಜು ನಿರೂಪಿಸಿದರು.‌ ಹಿರಿಯ ಕಲಾವಿದ ಚಂದ್ರಶೇಖರ ಗೋಗಿ ತಂಡದಿಂದ ನಾಡಗೀತೆ ನಡೆಯಿತು. ಮಹಿಳೆಯರು, ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಯಾದಗಿರಿ ನಗರದ ಜಿಲ್ಲಾಧಿಕಾರಿ ಅಡಿಟೋರಿಯಂ ಸಭಾಂಗಣದಲ್ಲಿ ಸೋಮವಾರ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ವನಮಹೋತ್ಸವದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು

ಶಾಸಕರಿಬ್ಬರ ಭಾವಚಿತ್ರ ಮುದ್ರಿಸದ ಅರಣ್ಯ ಇಲಾಖೆ

ವನಮಹೋತ್ಸವದ ನಿಮಿತ್ತ ವೇದಿಕೆಯಲ್ಲಿ ಅಳವಡಿಸಿದ್ದ ಬ್ಯಾನರ್‌ನಲ್ಲಿ ಸುರಪುರ ಹಾಗೂ ಗುರುಮಠಕಲ್‌ ಶಾಸಕರ ಭಾವಚಿತ್ರ ಮುದ್ರಿಸುವುದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮರೆತಿದ್ದರು. ಕೊನೆ ಗಳಿಗೆಯಲ್ಲಿ ಗಮನಿಸಿ ಶಾಸಕರಿಬ್ಬರ ಭಾವಚಿತ್ರವಿರುವ ಹೊಸ ಬ್ಯಾನರ್‌ ತಂದು ಅಳವಡಿಸಿದರು.  ಅರಣ್ಯ ಸಚಿವರು ಬಂದು ಇನ್ನೇನು ಕಾರ್ಯಕ್ರಮ ಆರಂಭವಾಗಲಿತ್ತು. ಅಷ್ಟರಲ್ಲಿಯೇ ಗಮನಿಸಿದ ಅರಣ್ಯ ಅಧಿಕಾರಿಗಳು ಎದ್ದೆವೋ ಬಿದ್ದೆವೋ ಎಂಬಂತೆ ಕೈಬಿಟ್ಟ ಇಬ್ಬರ ಶಾಸಕರ ಸಣ್ಣದೊಂದು ಬ್ಯಾನರ್ ಮಾಡಿಕೊಂಡು ಬಂದು ಸಾವಿರಾರು ಪ್ರೇಕ್ಷಕರ ಎದುರು ಅಳವಡಿಸುವ ಮೂಲಕ ತಮ್ಮ ತಪ್ಪನ್ನು ತಿದ್ದಿಕೊಂಡರು. ಒಂದೂವರೆ ತಾಸು ತಡ: ಸೋಮವಾರ ಮಧ್ಯಾಹ್ನ 12.30ಕ್ಕೆ ಕಾರ್ಯಕ್ರಮ ನಿಗದಿ ಆಗಿತ್ತು. ಬೆಳಿಗ್ಗೆ 10.30ರಿಂದಲೇ ಜನರನ್ನು ಕರೆದು ಸಭಾಂಗಣದಲ್ಲಿ ಕೂಡಿಸಿದ ಆಯೋಜಕರು ಬರೋಬ್ಬರಿ 90 ನಿಮಿಷಗಳವರೆಗೆ ಕಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.