
ಗುರುಮಠಕಲ್: ‘ನಮ್ಮ ನಿಷ್ಕಾಳಜಿ, ಸ್ವಾರ್ಥಕ್ಕೆಂದು ಮನುಕುಲ ಮಾತ್ರವಲ್ಲದೆ ಸಮಸ್ತ ಜೀವ ಸಂಕುಲವನ್ನೇ ವಿನಾಶದ ಸಂಕಷ್ಟಕ್ಕೆ ದೂಡುತ್ತಿದ್ದೇವೆ. ಭವಿಷ್ಯದ ಸುರಕ್ಷತೆಗೆ ಈಗಿನಿಂದಲೇ ಪರಿಸರ ರಕ್ಷಣೆ ಮಾಡುವುದು ಅವಶ್ಯ’ ಎಂದು ಹಿರಿಯ ಸಿವಿಲ್ ನ್ಯಾಯಾದೀಶರೂ ಆಗಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಮರಿಯಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್, ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ, ಶಿಕ್ಷಣ ಇಲಾಖೆಗಳು ಹಾಗೂ ಪುರಸಭೆ ಸಹಯೋಗದಲ್ಲಿ ಬುಧವಾರ 'ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ನಿಮಿತ್ತವಾಗಿ ಪರಿಸರ ಜಾಗೃತಿ, ಕಾನೂನು ಅರಿವು-ನೆರವು ಕಾರ್ಯಕ್ರಮ'ದಲ್ಲಿ ಅವರು ಮಾತನಾಡಿದರು.
‘ನಮ್ಮ ಹಿರಿಯರ ಸರಾಸರಿ ಆಯಸ್ಸು 100 ವರ್ಷಗಳು. ಆದರೆ, ಈಗ 60 ಪೂರೈಸಿದರೆ ದೊಡ್ಡದೆಂಬಂತಾಗಿದೆ. ಹೀಗೆ ಮುಂದುವರೆದರೆ ಮುಂದಿನ ಪೀಳಿಗೆಯ ಗತಿಯೇನು? ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಕನಿಷ್ಟ ಮನೆಯೆದುರು ಒಂದಾದರೂ ಸಸಿ ನೆಡುವ ಜತೆಗೆ ಅದನ್ನು ಪೋಷಿಸಿ, ಬೆಳೆಸೋಣ’ ಎಂದರು.
‘ಪೋಕ್ಸೊ ಕಾಯ್ದೆಯ ನಂತರ ಅಪ್ರಾಪ್ತರನ್ನು ನೋಡುವ ದೃಷ್ಟಿಕೋನ ಕೊಂಚ ಬದಲಾಗಿದೆ. ಹಾಗೆಯೇ ಪರಿಸರದ ಕುರಿತಾದ ಕಾಯ್ದೆಗಳ ಪರಿಣಾಮಕಾರಿ ಅನುಷ್ಟಾನ ಅವಶ್ಯ. ಅಭಿವೃದ್ಧಿಗೆಂದು ಸರ್ಕಾರಗಳ ಬಹುಕೋಟಿ ಯೋಜನೆಗಳ ರೂಪಿಸುತ್ತವೆ. ಅಭಿವೃದ್ಧಿ ಮತ್ತು ಪರಿಸರ ರಕ್ಷಣೆ ಎರಡನ್ನೂ ಸರಿದೂಗಿಸುವ ದೃಷ್ಟಿ ಅವಶ್ಯಕ’ ಎಂದರು.
‘ಯಾದಗಿರಿ ಜಿಲ್ಲೆಯ ಗಾಳಿಯಲ್ಲಿನ ಸ್ವಚ್ಛತೆಯ ಪ್ರಮಾಣದ ಅಳತೆಯಲ್ಲಿ ಎಕ್ಯೂ-60 ಇದ್ದದ್ದು ಈಗ 200ಕ್ಕೆ ಏರಿಕೆಯಾಗಿದೆ. ದೆಹಲಿ ಪ್ರಮಾಣ 400. ಹೀಗಾದರೆ ಮುಂದಿನ ದಿನಗಳಲ್ಲಿ ಸಂಕಷ್ಟ ತಪ್ಪದು’ ಎಂದು ಕಳವಳಗೊಂಡರು.
ಜಿಲ್ಲಾ ಪರಿಸರ ಅಧಿಕಾರಿ ಆದಮ್ ಪಟೇಲ್, ಸಹಾಯಕ ಪರಿಸರ ಅಧಿಕಾರಿಗಳಾದ ಶಕುಂತಲಾ ಮತ್ತು ಹನಮಪ್ಪ ಮಾತನಾಡಿ, ‘ಕೆಲ ಭಾಗಗಳಲ್ಲಿ ಸಾವಿರ ಅಡಿ ಕೊರೆದರೂ ನೀರು ಸಿಗದಾಗಿದೆ. ಕೈಗಾರಿಕೆ, ಕಾರ್ಖಾನೆಗಳ ಬಳಕೆ, ಅನಗತ್ಯ ಪೋಲು ಮಾಡುವುದು, ಕೆರೆಗಳ ಒತ್ತುವರಿಯಿಂದ ಅಂತರಜಲ ಕುಸಿದಿದೆ. ಜತೆಗೆ ಮಾಲಿನ್ಯವೂ ಹೆಚ್ಚಳವಾಗುತ್ತಿದ್ದು, ನಾವೆಲ್ಲಾ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕಿದೆ. ಸ್ವಯಂ ಪ್ರೇರಿತರಾಗಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಲಿ, ಜಲ ಮೂಲಗಳ ಸ್ವಚ್ಛತೆ ಮತ್ತು ರಕ್ಷಣೆ, ಪ್ರಾಕೃತಿಕ.ಸಂಪತ್ತಿನ ಮಿತವ್ಯಯ, ಪರಿಸರಸ್ನೇಹಿ ದಿನಚರಿ ನಮ್ಮದಾಗಲಿ’ ಎಂದು ಕೋರಿದರು.
‘ಹಸಿ ಮತ್ತು ಒಣ ಕಸ ಬೇರ್ಪಡಿಸಿದಾಗ ಹಸಿ ಕಸದಿಂದ ಸಾವಯವ ಗೊಬ್ಬರ ತಯಾರಿ, ಒಣ ಕಸದಿಂದ ಕಾರ್ಖಾನೆಗಳಿಗೆ ಉರುವಲು ಅಥವಾ ಇತರೇ ಕಚ್ಚಾ ಪದಾರ್ಥಗಳಾಗಿ ಬಳಸಲು ವಿಲೇವಾರಿ ಮಾಡುತ್ತೇವೆ. ಇದರಿಂದ ಪರಿಸರಕ್ಕೆ ಪೂರಕ ಕಸ ನಿರ್ವಹಣೆಯ ಜತೆಗೆ ನೈಸರ್ಗಿ ಸಂಪನ್ಮೂಲಗಳ ಮಿತ ಬಳಕೆ ಸಾಧ್ಯ’ ಎಂದು ವಿವರಿಸಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ರಚನೆ, ಕಾರ್ಯಗಳು, ವ್ಯಾಪ್ತಿ ಹಾಗೂ ಪರಿಸರ ಸಂಬಂಧಿತ ಕಾನೂನುಗಳು ಮತ್ತು ಅನುಷ್ಟಾನದ ಇಲಾಖೆಗಳ ಕುರಿತು ತಿಳಿಸಿದರು.
ಪಟ್ಟಣದ ಸಿಹಿನೀರ ಬಾವಿಯಿಂದ (ಗಂಗಾಪರಮೇಶ್ವರಿ ವೃತ್ತ) ಪುರಸಭೆ ಕಚೇರಿವರೆಗೆ ಜಾಗೃತಿ ಜಾಥಾ ಜರುಗಿತು.
ಕಾರ್ಯಕ್ರಮದಲ್ಲಿ ಪತ್ರಕರ್ತರಿಗೆ ಬಟ್ಟೆಯ ಕೈ ಚೀಲಗಳನ್ನು ವಿತರಿಸಲಾಯಿತು.
ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಪುರಸಭೆ ಸಿಒ ಶರಣಪ್ಪ ಮಡಿವಾಳ, ಜಿಲ್ಲಾ ನ್ಯಾಯವಾದಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಎಸ್.ಆಶನಾಳ, ಆರ್‌ಎಫ್‌ಒ ರಾಹುಲ್ ಸಾಗರೆ, ಎಎಸ್‌ಐ ಮಹಿಪಾಲರೆಡ್ಡಿ, ಹವೀಶ್ ಪ್ಯಾರಾ ಮೆಡಿಕಲ್ ಕಾಲೇಜಿನ ಡಾ.ಎಸ್.ಎಸ್.ಪಟೀಲ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.