ADVERTISEMENT

ಶಾಲಾ ಶಿಕ್ಷಣ ಇಲಾಖೆ ಯಡವಟ್ಟು: 9ನೇ ತರಗತಿ ಪುಸ್ತಕಕ್ಕೆ 4ನೇ ತರಗತಿಯ ರಕ್ಷಾಪುಟ

ವಿದ್ಯಾರ್ಥಿಗಳು, ಪೋಷಕರು ತಬ್ಬಿಬ್ಬು

​ಪ್ರಜಾವಾಣಿ ವಾರ್ತೆ
ಎಂ.ಪಿ.ಚಪೆಟ್ಲಾ
Published 21 ಜೂನ್ 2025, 6:02 IST
Last Updated 21 ಜೂನ್ 2025, 6:02 IST
ಗುರುಮಠಕಲ್ ತಾಲ್ಲೂಕಿನ ವಿದ್ಯಾರ್ಥಿಯೊಬ್ಬರಿಗೆ ವಿತರಿಸಿದ 9ನೇ ತರಗತಿಯ ‘ಸೆಕೆಂಡ್ ಲ್ಯಾಂಗ್ವೆಜ್ ಇಂಗ್ಲಿಷ್ ಪಾರ್ಟ್ 2 (ರಿವೈಸಡ್)’ ಶಿರ್ಷಿಕೆಯ ಪಠ್ಯ ಪುಸ್ತಕಕ್ಕೆ ನಾಲ್ಕನೇ ತರಗತಿಯ ಸವಿ ಕನ್ನಡ ಪಠ್ಯ ಪುಸ್ತಕದ ರಕ್ಷಾಪುಟವಿದೆ.
ಗುರುಮಠಕಲ್ ತಾಲ್ಲೂಕಿನ ವಿದ್ಯಾರ್ಥಿಯೊಬ್ಬರಿಗೆ ವಿತರಿಸಿದ 9ನೇ ತರಗತಿಯ ‘ಸೆಕೆಂಡ್ ಲ್ಯಾಂಗ್ವೆಜ್ ಇಂಗ್ಲಿಷ್ ಪಾರ್ಟ್ 2 (ರಿವೈಸಡ್)’ ಶಿರ್ಷಿಕೆಯ ಪಠ್ಯ ಪುಸ್ತಕಕ್ಕೆ ನಾಲ್ಕನೇ ತರಗತಿಯ ಸವಿ ಕನ್ನಡ ಪಠ್ಯ ಪುಸ್ತಕದ ರಕ್ಷಾಪುಟವಿದೆ.   

ಗುರುಮಠಕಲ್‌: ತಾಲ್ಲೂಕು ವ್ಯಾಪ್ತಿಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆಂದು ಉಚಿತ ಪಠ್ಯ ಪುಸ್ತಕಗಳ ವಿತರಿಸುತ್ತಿದೆ. ಆದರೆ, ಇಲಾಖೆಯಿಂದ ಸರಬರಾಜಾದ ಪಠ್ಯ ಪುಸ್ತಕವು ‘ಡೋಂಟ್ ಜಡ್ಜ್ ಎ ಬುಕ್ ಬೈ ಇಟ್ಸ್ ಕವರ್’ ಎನ್ನುವ ಗಾದೆಯನ್ನು ನೆನಪಿಸುವಂತಿದೆ!

9ನೇ ತರಗತಿಯ ಇಂಗ್ಲಿಷ್ ದ್ವಿತೀಯ ಭಾಷೆಯಾಗಿರುವ ಪಠ್ಯಕ್ಕೆ ಸಂಬಂಧಿಸಿದಂತೆ ‘ಸೆಕೆಂಡ್ ಲ್ಯಾಂಗ್ವೇಜ್ ಇಂಗ್ಲಿಷ್ ಪಾರ್ಟ್ 2 (ರಿವೈಸಡ್), ನೈಂತ್ ಸ್ಟಾಂಡರ್ಡ್’ ಎನ್ನುವ ಶೀರ್ಷಿಕೆಯಿರುವ ಪಠ್ಯ ಪುಸ್ತಕವಿದೆ. ಆದರೆ, ಇಲಾಖೆ ಸರಬರಾಜು ಮಾಡಿದ ಈ ಪುಸ್ತಕದ ರಕ್ಷಾ ಪುಟವು ‘ಸವಿ ಕನ್ನಡ, ಅಭ್ಯಾಸ ಸಹಿತ ಪಠ್ಯ ಪುಸ್ತಕ ಭಾಗ–2, ನಾಲ್ಕನೇ ತರಗತಿ’ ಶೀರ್ಷಿಕೆಯನ್ನು ಹೊಂದಿದೆ.

ಪುಸ್ತಕ ನೋಡಿ ಪೋಷಕರು ತಬ್ಬಿಬ್ಬಾಗಿದ್ದು, ‘9ನೇ ತರಗತಿಯ ವಿದ್ಯಾರ್ಥಿಗೆ ಯಾಕೆ 4ನೇ ತರಗತಿ ಪುಸ್ತಕ ಕೊಟ್ಟಿದ್ದಾರೆ ? ಎಂದು ಅನುಮಾನಗೊಂಡು ಪುಸ್ತಕ ತೆರೆದು ನೋಡಿದ ನಂತರ ಇಲಾಖೆಯ ಯಡವಟ್ಟು ತಿಳಿಯಿತು’ ಎಂದು ಪೋಷಕರೊಬ್ಬರು ತಿಳಿಸಿದರು.

ADVERTISEMENT

‘4ನೇ ತರಗತಿಯ ಕನ್ನಡ ಪುಸ್ತಕ’ ಎಂದು ಇದ್ದದ್ದರಿಂದ ನಾಳೆ ಶಾಲೆಯಲ್ಲಿ ಪುಸ್ತಕ ವಾಪಿಸ್ ಕೊಟ್ಟು, 9ನೇ ಇಂಗ್ಲಿಷ್ ಕೇಳಿ ತಗೋಬೇಕು ಅನ್ಕೊಂಡಿದ್ದೆ. ಆದರೆ ಪುಸ್ತಕ ತೆರೆದ್ರೆ ಅದು ನಮ್ 9ನೇ ತರಗತಿದೇ ಅಂತ ಗೊತ್ತಾಯ್ತು ಸರ್’ ಎಂದು ಹೆಸರು ಹೇಳಲಿಚ್ಚಿಸದ ವಿದ್ಯಾರ್ಥಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಲ್ಲೂಕಿನ ಇನ್ನಷ್ಟು ಶಾಲೆಗಳಲ್ಲಿಯೂ ಹೀಗೆ ಅದಲು ಬದಲು ಆಗಿರುವ ಸಾಧ್ಯತೆಯಿದೆ. ಕೂಡಲೇ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಸರಿಪಡಿಸಿ ಮಕ್ಕಳಿಗೆ ಪಠ್ಯ ಪುಸ್ತಕ ಒದಗಿಸಬೇಕು
– ರವೀಂದ್ರರೆಡ್ಡಿ ಪೋತುಲ್ ಸಾಮಾಜಿಕ ಕಾರ್ಯಕರ್ತ
ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಹಲವು ಸಮಸ್ಯೆಗಳಿವೆ. ಈ ರೀತಿಯ ಯಡವಟ್ಟು ಮಾಡಿರುವುದು ಶಾಲಾ ಶಿಕ್ಷಣದ ಕುರಿತ ಅಸಡ್ಡೆಯನ್ನು ತೋರುತ್ತದೆ. ಈ ಬೇಜವಾಬ್ದಾರಿ ನಿರ್ವಹಣೆ ಕುರಿತು ತನಿಖೆ ನಡೆಸಿ ಕ್ರಮವಹಿಸಬೇಕು
– ಶರಣಬಸಪ್ಪ ಎಲ್ಲೇರಿ ಶಿಕ್ಷಣ ಪ್ರೇಮಿ

ಮಾಹಿತಿ ಪಡೆದು ಸಮಸ್ಯೆ ಪರಿಹಾರಕ್ಕೆ ಯತ್ನ

ಮೊದಲ ಸುತ್ತಿನಲ್ಲಿ ನಮ್ಮಲ್ಲಿರುವ ಪಠ್ಯ ಪುಸ್ತಕಗಳನ್ನು ಸರಬರಾಜು ಮಾಡಲಾಗಿದೆ. ಇನ್ನೂ ಒಂದು ವಾರದಲ್ಲಿ 42 ಶೀರ್ಷಿಕೆಗಳ ಪುಸ್ತಕಗಳು ಬರಲಿವೆ. ಬಂದ ಕೂಡಲೇ ಶಾಲೆಗಳಿಗೆ ವಿತರಿಸಲಾಗುವುದು. 9ನೇ ತರಗತಿ ಪಠ್ಯ ಪುಸ್ತಕದ ರಕ್ಷಾ ಪುಟದಲ್ಲಿ 4ನೇ ತರಗತಿಯ ಶೀರ್ಷಿಕೆಯಿರುವ ಕುರಿತು ಶಾಲಾ ಮುಖ್ಯಶಿಕ್ಷಕರಲ್ಲಿ ತಿಳಿದುಕೊಂಡು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಸಮಸ್ಯೆಯನ್ನು ಸರಿಪಡಿಸಲು ಅಗತ್ಯ ಕ್ರಮಕ್ಕೆ ಯತ್ನಿಸಲಾಗುವುದು ಎಂದು ಶಿಕ್ಷಣ ಸಂಯೋಜಕ ಮಲ್ಲಿಕಾರ್ಜುನ ಕಾವಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.