ADVERTISEMENT

ಯಾದಗಿರಿ ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಅನಿವಾರ್ಯವಾದ ‘ಭತ್ತ’ ಬೆಳೆ

ಸುರಪುರ, ಶಹಾಪುರ, ಯಾದಗಿರಿ ತಾಲ್ಲೂಕಿನಲ್ಲಿ 70,388 ಹೆಕ್ಟೇರ್‌ ಭತ್ತ ನಾಟಿ

ಬಿ.ಜಿ.ಪ್ರವೀಣಕುಮಾರ
Published 21 ಆಗಸ್ಟ್ 2021, 1:25 IST
Last Updated 21 ಆಗಸ್ಟ್ 2021, 1:25 IST
ಹುಣಸಗಿ ಪಟ್ಟಣದ ಹೊರವಲಯದಲ್ಲಿ 2 ವಾರದ ಹಿಂದೆ ನಾಟಿ ಮಾಡಿದ ಭತ್ತ
ಹುಣಸಗಿ ಪಟ್ಟಣದ ಹೊರವಲಯದಲ್ಲಿ 2 ವಾರದ ಹಿಂದೆ ನಾಟಿ ಮಾಡಿದ ಭತ್ತ   

ಯಾದಗಿರಿ: ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಭತ್ತಬೆಳೆಮಾಡುವುದು ಅನಿವಾರ್ಯವಾಗಿ ಪರಿಣಮಿಸಿದೆ. ಭತ್ತ ಬಿಟ್ಟರೆ ಬೇರೆ ಯಾವ ಬೆಳೆದರೂ ಅಲ್ಲಿ ಫಸಲು ಬರುವುದಿಲ್ಲ. ಇದರಿಂದ ನಷ್ಟವಾದರೂ ಭತ್ತಕ್ಕೆ ರೈತರು ಹೊಂದಿಕೊಂಡಿದ್ದಾರೆ.

ಜಿಲ್ಲೆಯ ನಾರಾಯಣಪುರ ಜಲಾಶಯದಿಂದ ನೀರಿನ ಲಭ್ಯತೆ ಹೆಚ್ಚಿನ ಪ್ರಮಾಣದಲ್ಲಿ ಇದ್ದುದ್ದರಿಂದ ಹುಣಸಗಿ, ಸುರಪುರ, ಶಹಾಪುರ ತಾಲ್ಲೂಕುಗಳಲ್ಲಿ ಯಥೇಚ್ಛವಾಗಿ ಭತ್ತ ನಾಟಿ ಮಾಡಲಾಗುತ್ತಿದೆ. ವಡಗೇರಾ ತಾಲ್ಲೂಕು ಕಾಲುವೆ ಜಾಲದ ಕೊನೆ ಭಾಗವಾಗಿದ್ದರಿಂದ ಇಲ್ಲಿ ಭತ್ತಕ್ಕಿಂತ ಮಳೆಯಾಶ್ರಿತ ಬೆಳೆ ಬೆಳೆಯುವುದು ಹೆಚ್ಚು. ನದಿ ಪಾತ್ರದಲ್ಲಿ ಮಾತ್ರ ಭತ್ತ ನಾಟಿ ಮಾಡಲಾಗುತ್ತಿದೆ.

140ರಿಂದ 150 ದಿನಗಳ ಅವಧಿಯಲ್ಲಿ ಭತ್ತ ಕೊಯ್ಲಿಗೆ ಬರುತ್ತದೆ. ಮುಂಗಾರು, ಹಿಂಗಾರು ಹಂಗಾಮಿನಲ್ಲಿ ಭತ್ತ ಬೆಳೆಯಲಾಗುತ್ತಿದೆ. ಮೊದಲು ಈ ಭಾಗದಲ್ಲಿ ಹೆಸರು, ಸಜ್ಜೆ, ಜೋಳ, ಕಡಲೆ ಬೆಳೆಯುತ್ತಿದ್ದರು. ಆಂಧ್ರದ ರೈತರು ಜಮೀನುಗಳನ್ನು ಗುತ್ತಿಗೆ ಪಡೆದು ಭತ್ತ ಬೆಳೆದ ಬಂತರ ಮೊದಲಿಗೆ ಹೆಚ್ಚು ಲಾಭ ತಂದಿತ್ತು. ಆ ನಂತರ ಈಗ ಖರ್ಚು ಹೆಚ್ಚಾಗಿದ್ದು, ರೈತರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ADVERTISEMENT

ಭತ್ತ ನಾಟಿ ಮಾಡಿದ ಜಮೀನುಗಳಲ್ಲಿ ಸವಳು ಭೂಮಿ ಹೆಚ್ಚಾಗಿದ್ದು, ಅಕ್ಕಪಕ್ಕದ ಜಮೀನುಗಳವರು ಬೇರೆ ಬೆಳೆದರೆ ತೇವಾಂಶ ಹೆಚ್ಚಾಗಿ ಒಣಗಿ ಒಗುತ್ತವೆ. ಹೀಗಾಗಿ ಭತ್ತವೇ ಅನಿವಾರ್ಯವಾಗಿ ನಾಟಿ ಮಾಡಲಾಗುತ್ತಿದೆ.

ಜೀವನಾಧಾರ: ಕಾಲುವೆ ಜಾಲದ ಮೂರು ತಾಲ್ಲೂಕುಗಳಲ್ಲಿ ಭತ್ತವೇ ಜೀವನಾಧಾರವಾಗಿದೆ. ಭತ್ತದ ಮೂಲಕವೇ ಅನೇಕರು ಬದುಕು ಕಟ್ಟಿಕೊಂಡಿದ್ದಾರೆ. ಕೆಲವರು ಜಮೀನು ಗುತ್ತಿಗೆ ಹಾಕಿದರೆ, ಹೆಚ್ಚು ಅಣ್ಣ ತಮ್ಮಂದಿರುವ ಇರುವ ಕುಟುಂಬಗಳು ತಾವೇ ಕೃಷಿ ಕೆಲಸ ಮಾಡುತ್ತಾರೆ.

ಚಿನ್ನದ ಬೆಳೆ ಬಾಳುವ ಭೂಮಿ: ನೀರಾವರಿ ಪ್ರದೇಶದಲ್ಲಿ ಭೂಮಿಗೆ ಚಿನ್ನದ ಬೆಲೆ ಇದೆ. ಲಕ್ಷಾಂತರ ರೂಪಾಯಿ ಬೆಳೆ ಬಾಳುವ ಜಮೀನುಗಳಿದ್ದು, ಭೂಮಿಯ ಬೆಲೆ ಗಗನಕ್ಕೇರಿದೆ. ಕೃಷಿ ಮಾಡುವ ಮನೆಗಳಲ್ಲಿ ತಲಾ ಒಂದೊಂದು ದ್ವಿಚಕ್ರ ವಾಹನ, ಕೆಲವರ ಬಳಿ ಟ್ರ್ಯಾಕ್ಟರ್‌, ಕಾರು ಕೂಡ ಇವೆ. ಇದು ನೀರಾವರಿ ಪ್ರದೇಶದ ಮಹಿಮೆ.

‘ಭತ್ತ ನಾಟಿ ಹಿಡಿದುಕೊಂಡು ರಾಶಿಯಾಗುವವರೂ ಒಂದು ಎಕರೆಗೆ ಸುಮಾರು ₹20–30 ಸಾವಿರ ಖರ್ಚು ಆಗುತ್ತದೆ. ಮನೆಯವರು ಜಮೀನಿನಲ್ಲಿ ಕೆಲಸ ಮಾಡಿದರೆ ಸ್ವಲ್ಪ ದರ ಕಡಿಮೆಯಾಗುತ್ತದೆ. ಅದರೆ, ಈಗಿನ ಕಾಲದಲ್ಲಿ ಶ್ರಮಕ್ಕೆ ಬೆಲೆ ಇಲ್ಲ. ರೈತರಿಗೆ ವೈಜ್ಞಾನಿಕ ಬೆಲೆಯೂ ಇಲ್ಲ. ರೈತರ ಕೈಹಿಡಿಯದೇ ಹೋದರೆ ವ್ಯವಸ್ಯಾಯ ಮುಂದೊಂದು ದಿನ ಮಾಡುವವರೇ ಇಲ್ಲದಂತಾಗಿದೆ. ಹೀಗಾಗಿ ಸರ್ಕಾರಗಳು ರೈತರತ್ತ ಗಮನಹರಿಸಿ ಸೌಲಭ್ಯ ಕಲ್ಪಿಸಬೇಕು’ ಎಂದು ರೈತ ಮಲ್ಲಿಕಾರ್ಜುನ ಸತ್ಯಂಪೇಟ ಹೇಳುತ್ತಾರೆ.

‘ಭತ್ತಕ್ಕೆ ಸರಿಯಾದಬೆಂಬಲ ಬೆಲೆ ಇಲ್ಲ. ಇದ್ದರೂ ಕನ್ನಡಿಯೊಳಗಿನ ಗಂಟಾಗಿದೆ. ಬೆಂಬಲ ಯೋಜನೆಯಡಿ ಸರ್ಕಾರ ಇಷ್ಟೆ ಕ್ವಿಂಟಲ್‌ ಭತ್ತ ಮಾರಾಟಕ್ಕೆ ನಿಗದಿ ಮಾಡಿದೆ. ಹೆಚ್ಚು ಜಮೀನು ಇರುವ ರೈತರ ಬಳಿ 500ರಿಂದ 1,000 ಚೀಲ ಭತ್ತ ಇರುತ್ತವೆ.ಉಳಿದ ಭತ್ತವನ್ನು ಮತ್ತೆ ದಲ್ಲಾಳಿಗಳ ಬಳಿ ಮಾರಾಟ ಮಾಡಬೇಕು. ಇದರಿಂದ ರೈತಶೋಷಣೆಗೆ ಒಳಗಾಗುತ್ತಾನೆ. ದಲ್ಲಾಳಿಗಳಿಗೆಲಾಭ ಆಗುತ್ತದೆ. ಸೂಕ್ತ ಗೋದಾಮುಗಳನ್ನು ನಿರ್ಮಿಸ ಬೇಕು’ ಎನ್ನುತ್ತಾರೆರೈತ ನಿಂಗನಗೌಡ ಬಸನಗೌಡ್ರು ವಜ್ಜಲ್‌.

***

ಪಟ್ಟಿ: ಭತ್ತದ ಬೆಳೆ ವಿವರ

ವರ್ಷ; ಹೆಕ್ಟೇರ್‌

2018–19; 62,274

2019–20;99,488

2020–21;92,955

2021–22;70,388

ಒಟ್ಟು; 3,25,105

ಆಧಾರ: ಕೃಷಿ ಇಲಾಖೆ

***

15 ಎಕರೆಯಲ್ಲಿ ಭತ್ತ ನಾಟಿ ಮಾಡಿದ್ದೇನೆ. ₹50 ಸಾವಿರ ಖರ್ಚು ಮಾಡಿದ್ದೇನೆ. ಈಗ ಟ್ರ್ಯಾಕ್ಟರ್‌ ಬಳಕೆ ಹೆಚ್ಚಾಗಿದೆ. ಇದು ಆರಾಮದಾಯಕವೂ ಆಗಿದೆ

ಮಲ್ಲಿಕಾರ್ಜುನ ಸತ್ಯಂಪೇಟ, ರೈತ

***

15 ಎಕರೆ ನಾಟಿ ಎಕರೆಯಲ್ಲಿ ಭತ್ತ ನಾಟಿ ಮಾಡಿದ್ದೇನೆ. ನಾಟಿಯಿಂದ ಹಿಡಿದು ಕೊಯ್ಲುವರೆಗೆ ₹4ರಿಂದ 5 ಲಕ್ಷ ವರೆಗೆ ಬರುತ್ತದೆ. ಇಷ್ಟು ಖರ್ಚು ಮಾಡಿದರೂ ಲಾಭ ಬರುತ್ತದೆ ಎನ್ನುವ ನಿರೀಕ್ಷೆ ಇಲ್ಲ
ಹೊನ್ನಕೇಶವ ದೇಸಾಯಿ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.