ADVERTISEMENT

ಹುಣಸಗಿ: ಅವಳಿ ಜಲಾಶಯಗಳಿಂದ ಅಧಿಕ ನೀರು

ಜುಲೈ 1 ರಂದು ನೀರಾವರಿ ಸಲಹಾ ಸಮಿತಿ ಸಭೆ

ಭೀಮಶೇನರಾವ ಕುಲಕರ್ಣಿ
Published 24 ಜೂನ್ 2025, 5:03 IST
Last Updated 24 ಜೂನ್ 2025, 5:03 IST
ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯ
ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯ   

ಹುಣಸಗಿ: ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ನೀರಾವರಿ ಕ್ಷೇತ್ರವನ್ನು ಹೊಂದಿರುವ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ನೀರು ಹರಿಸುವ ಕುರಿತಂತೆ ನೀರಾವರಿ ಸಲಹಾ ಸಮಿತಿ ಸಭೆ ಜುಲೈ 1ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿದೆ ಎಂದು ಕೆಬಿಜೆಎನ್ಎಲ್ ಮೂಲಗಳಿಂದ ತಿಳಿದುಬಂದಿದೆ.

ಮುಂಗಾರು ಹಂಗಾಮಿಗೆ ನೀರು ಹರಿಸುವ ಕುರಿತಂತೆ ಇದೇ ಮೊದಲ ಬಾರಿಗೆ ಇಷ್ಟು ಬೇಗ ದಿನಾಂಕ ನಿಗದಿ ಮಾಡಿರುವುದು ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಸಂತಸಕ್ಕೆ ಕಾರಣವಾಗಿದೆ. ಪ್ರತಿ ವರ್ಷವೂ ಜೂನ್ ತಿಂಗಳ ಕೊನೆ ವಾರದಲ್ಲಿ ಹಾಗೂ ಜುಲೈ ಮೊದಲ ವಾರದಿಂದ ನಾರಾಯಣಪುರ ಮತ್ತು ಬಸವಸಾಗರ ಜಲಾಶಯಕ್ಕೆ ನೀರು ಹರಿದು ಬರುತ್ತಿತ್ತು. ಆ ಬಳಿಕ ಈ ಐಸಿಸಿ ಸಭೆ ನಡೆಯುತಿತ್ತು.

ಆದರೆ, ಈ ಬಾರಿ ಪೂರ್ವ ಮುಂಗಾರು ಆರಂಭದಲ್ಲಿಯೇ ವೇಗ ಪಡೆದಿತ್ತು ಹಾಗೂ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆಯಾಗಿದ್ದರ ಹಿನ್ನೆಲೆಯಲ್ಲಿ ಎರಡು ವಾರ ಮೊದಲೇ ಜಲಾಶಯಗಳಿಗೆ ಒಳಹರಿವು ದಾಖಲಾಗಿತ್ತು. ಇದರಿಂದಾಗಿ ಅವಳಿ ಜಲಾಶಯಗಳು ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಐಸಿಸಿ ಸಭೆ ಬೇಗನೆ ಆಯೋಜಿಸಿರುವುದಾಗಿ ತಿಳಿದು ಬಂದಿದೆ.

ADVERTISEMENT

ಪ್ರತಿ ವರ್ಷವೂ ಜುಲೈ ಎರಡು ಹಾಗೂ ಮೂರನೇ ವಾರದಲ್ಲಿ ಕಾಲುವೆಗಳಿಗೆ ನೀರು ಹರಿಸಲಾಗುತ್ತಿತ್ತು. ಅದರಂತೆ ಅಚ್ಚುಕಟ್ಟು ಪ್ರದೇಶದ ಭತ್ತ ಬೆಳೆಗಾರರರು ಸಸಿ ಹಾಕಿಕೊಳ್ಳುತ್ತಿದ್ದರು. ಸದ್ಯ ಕಳೆದ ಒಂದು ವಾರದಿಂದ ಭತ್ತದ ಸಸಿ ಹಾಕಿಕೊಳ್ಳುಲು ವ್ಯವಸ್ಥೆ ಮಾಡಿಕೊಂಡಿರುವುದಾಗಿ ರೈತರು ಹೇಳಿದರು. ಆದರೆ ಒಂದು ತಿಂಗಳ ಬಳಕ ಮಾತ್ರ ಸಸಿ ಕಿತ್ತು ಮರು ನಾಟಿ ಮಾಡಲು ಸಾಧ್ಯವಾಗುತ್ತದೆ. ಅವಧಿಗೂ ಮುನ್ನ ನಾಟಿ ಮಾಡಿದರೂ ಸಸಿ ಕರಗಿ ಹೋಗುತ್ತದೆ ಎಂದು ವಜ್ಜಲ, ಇಸಾಂಪುರ ಗ್ರಾಮದ ರೈತರು ಹೇಳಿದರು.

ಭತ್ತದ ಸಸಿ ಹಾಕಿಕೊಳ್ಳುಲು ರೈತರಿಂದ ವ್ಯವಸ್ಥೆ ಆರಂಭದಲ್ಲಿಯೇ ವೇಗ ಪಡೆದ ಪೂರ್ವ ಮುಂಗಾರು ಆಲಮಟ್ಟಿ ಜಲಾಶಯ: 50 ಸಾವಿರ ಕ್ಯೂಸೆಕ್ ಹೊರಹರಿವು
ದೇವರ ಕೃಪೆಯಿಂದ ಅವಳಿ ಜಲಾಶಯ ಭರ್ತಿಯಾಗುತ್ತಿದ್ದು ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗೆ ಶೀಘ್ರವೇ ನೀರು ಹರಿಸುವ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಗವುದು
ರಾಜಾ ವೇಣುಗೊಪಾಲನಾಯಕ ಸುರಪುರ ಶಾಸಕ

65 ಸಾವಿರ ಕ್ಯೂಸೆಕ್ ನೀರು ನದಿಗೆ

ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಸೋಮವಾರ ರಾತ್ರಿ 70 ಸಾವಿರ ಕ್ಯೂಸೆಕ್ ಒಳಹರಿವು ದಾಖಲಾಗಿದ್ದು 22 ಕ್ರಸ್ಟ್‌ಗೇಟ್‌ಗಳ ಮೂಲಕ 65 ಸಾವಿರ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ. ಆದರೆ ರಾತ್ರಿ ಒಳಹರಿವು ಹೆಚ್ಚಾದಲ್ಲಿ ಇನ್ನೂ ಅಧಿಕ ನೀರನ್ನು ನದಿಗೆ ಹರಿಸುವುದಾಗಿ ಅಣೆಕಟ್ಟು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಅದರಂತೆ ಆಲಮಟ್ಟಿ ಲಾಲ್ ಬಹದ್ದೂರ್‌ ಶಾಸ್ತ್ರಿ ಜಲಾಶಯಕ್ಕೆ 98611 ಕ್ಯೂಸೆಕ್ ಒಳಹರಿವು ಇದ್ದು 50 ಸಾವಿರ ಕ್ಯೂಸೆಕ್ ಹೊರಹರಿವು ಕೂಡಾ ಇದೆ. ಅವಳಿ ಜಲಾಶಯಗಳಲ್ಲಿ ಒಟ್ಟು 101 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ ಎಂದು ಡ್ಯಾಂ ಡಿವಿಜನ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.