
ಯಾದಗಿರಿ: ಕಳಪೆ ತೊಗರಿ ಬೀಜದಿಂದ ಬೆಳೆನಷ್ಟ ಅನುಭವಿಸಿದ ರೈತನಿಗೆ ₹99 ಸಾವಿರ ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ರಾಜ್ಯ ಬೀಜ ನಿಗಮದ ಭೀಮರಾಯನಗುಡಿಯ ಇಬ್ಬರು ಅಧಿಕಾರಿಗಳಿಗೆ ಆದೇಶಿಸಿದೆ.
ವಡಗೇರಾ ತಾಲ್ಲೂಕಿನ ಗುಲಸರಂ ಗ್ರಾಮದ ರೈತ ಚನ್ನಾರೆಡ್ಡಿ ಬಸವರಾಜ ಈ ಬಗ್ಗೆ ದೂರು ನೀಡಿದ್ದರು. ಅವರು ನಿಗಮದ ಭೀಮರಾಯನಗುಡಿ ಕೇಂದ್ರದಿಂದ ₹ 7,200 ಕೊಟ್ಟು 60 ಕೆ.ಜಿ. ತೊಗರಿ ಬೀಜ ಖರೀದಿಸಿದ್ದರು. ಬಿತ್ತನೆ ವೇಳೆ ಬೀಜಗಳಿಗೆ ಹುಳು ಹತ್ತಿ ಪೌಡರ್ ಆಗಿದ್ದರ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ‘ಬೀಜಗಳು ಸರಿಯಾಗಿವೆ’ ಎಂದು ಹೇಳಿದ್ದರು. ಬಿತ್ತನೆ ಮಾಡಿ ಬೆಳೆ ನಷ್ಟ ಅನುಭವಿಸಿದ್ದರ ಬಗ್ಗೆ ಆಯೋಗಕ್ಕೆ ದೂರು ನೀಡಿದ್ದರು.
ವಿಚಾರಣೆ ನಡೆಸಿದ ಆಯೋಗದ ಪ್ರಭಾರ ಅಧ್ಯಕ್ಷೆ ಮಾಲತಿ ಗುರಣ್ಣ ಅವರು, ದೂರುದಾರನಿಗೆ ಉದ್ದೇಶಪೂರ್ವಕವಾಗಿ ಕಳಪೆ ಬೀಜ ನೀಡಿ, ಸೇವಾ ನ್ಯೂನತೆ ಎಸಗಲಾಗಿದೆ. ಪ್ರಕರಣದ ಖರ್ಚು ₹ 5 ಸಾವಿರ, ಮಾನಸಿಕ ಹಿಂಸೆಗೆ ₹10 ಸಾವಿರ ಪರಿಹಾರ ಸೇರಿ ಒಟ್ಟು ₹ 99 ಸಾವಿರವನ್ನು ರೈತರಿಗೆ ಪಾವತಿಸಬೇಕು ಎಂದು ಅಧಿಕಾರಿ ಅಶೋಕ ವಾಗ್ಮೋರೆ ಹಾಗೂ ಮ್ಯಾನೇಜರ್‌ಗೆ ಆದೇಶಿಸಿದ್ದಾರೆ.
ಆದೇಶದ ದಿನದಿಂದ 45 ದಿನಗಳಲ್ಲಿ ಹಣ ನೀಡಲು ತಪ್ಪಿದ್ದಲ್ಲಿ ಶೇ 8ರಷ್ಟು ಬಡ್ಡಿ ನೀಡುವಂತೆ ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.