ADVERTISEMENT

21ಕ್ಕೆ ರೈತ ಹುತಾತ್ಮ ದಿನಾಚರಣೆ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 17:08 IST
Last Updated 16 ಜುಲೈ 2019, 17:08 IST
ಮಲ್ಲಿಕಾರ್ಜುನ ಸತ್ಯಂಪೇಟೆ
ಮಲ್ಲಿಕಾರ್ಜುನ ಸತ್ಯಂಪೇಟೆ   

ಯಾದಗಿರಿ: ರಾಜ್ಯ ಸರ್ಕಾರ ಸಾಲಮನ್ನಾ ಗೊಂದಲ ಸರಿಪಡಿಸಬೇಕು. ಭೂ ಸ್ವಾಧೀನ ಕಾಯ್ದೆ ಹಿಂಪಡೆಯಬೇಕು. ಕಬ್ಬಿನ ಬಾಕಿ ಹಣ ಶೀಘ್ರ ಪಾವತಿಸಬೇಕು ಸೇರಿದಂತೆ ವಿವಿಧ ಬೇಡಿಕೆಗೆ ಈಡೇರಿಕೆಗಾಗಿ ಜುಲೈ 21ರಂದು ಬೆಳಗಾವಿಯಲ್ಲಿ ರೈತರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಸೇನೆ ಕಲಬುರ್ಗಿ ವಿಭಾಗೀಯ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಮುಕ್ತ ಕರ್ನಾಟಕ ನಿರ್ಮಾಣಕ್ಕೆ ಸಂಕಲ್ಪ ಮಾಡಲು, ರಾಜ್ಯದ ಸಮ್ಮಿಶ್ರ ಸರ್ಕಾರದ ವೈಫಲ್ಯ ಹಾಗೂ ಪಕ್ಷದ ದಿವಾಳಿತನವನ್ನು ಬಯಲಿಗೆಳೆಯಲು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಲು ಬೆಳಗಾವಿಯ ಗಾಂಧಿ ಭವನದಲ್ಲಿ ರೈತರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

ರೈತರ ಸಾಲ ಮನ್ನಾ ವಿಷಯದಲ್ಲಿ ಗೊಂದಲ ಉಂಟಾಗಿದೆ. ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಳ್ಳುತ್ತಿಲ್ಲ. ಸಹಕಾರಿ ಬ್ಯಾಂಕ್‌ನಲ್ಲಿ ಹೊಸ ಸಾಲ ನೀಡುತ್ತಿಲ್ಲ. ಇದರಿಂದ ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಾಲ ಮನ್ನಾ ಗೊಂದಲ ನಿವಾರಿಸಿ ಈ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ಡಾ.ಎಂ.ಎಸ್‌.ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿತ್ತು. ಅದು ಭರವಸೆಯಾಗಿಯೇ ಉಳಿದಿದೆ. ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ನಿಗದಿ ಪಡಿಸಿ ಅದನ್ನು ಶಾಸನಾತ್ಮಕವಾಗಿ ಜಾರಿಗೆ ತಾರದೆ ರೈತರಿಗೆ ಮೋಸ ಮಾಡುತ್ತಿದೆ. ಹೀಗಾಗಿ ಶೀಘ್ರ ಕೃಷಿ ಬೆಲೆ ಆಯೋಗ ನೀಡಿರುವ ವರದಿಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಭೂಸ್ವಾಧೀನ ಕಾಯ್ದೆ ಹಿಂಪಡೆಯಬೇಕು. ಮಹಾದಾಯಿ ತೀರ್ಪು ಗೆಜೆಟ್‌ ನೋಟಿಫಿಕೇಷನ್ ಹೊರಡಿಸಿ ಕಳಸಾ ಬಂಡೋರಿ ನಾಲಾ ಯೋಜನೆಯನ್ನು ತ್ವರಿತವಾಗಿ ಮುಗಿಸಬೇಕು. ಕಬ್ಬಿನ ಹಣ ಬಾಕಿ ವಾವತಿಸಿ ಕಬ್ಬಿನ ಬೆಲೆ ನಿಗದಿಗೊಳಿಸಬೇಕು. ಜಿಂದಾಲ್‌ಗೆ ಭೂಮಿಯನ್ನು ಮಾರಾಟ ಮಾಡಬಾರದು ಎಂದು ಆಗ್ರಹಿಸಿದರು.

ADVERTISEMENT

ರೈತರ ಸಮಾವೇಶಕ್ಕೆ ಜಿಲ್ಲೆಯಿಂದ 70–80 ಜನ ರೈತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಮಾವೇಶದಲ್ಲಿ ರಾಜ್ಯಾದ್ಯಂತ ಸುಮಾರು 25 ಸಾವಿರ ರೈತ ಸಮುದಾಯ ಪಾಲ್ಗೊಳ್ಳಲಿದ್ದಾರೆ ಎಂದರು.

ಮಹಿಳಾ ಕಾರ್ಯದರ್ಶಿ ನಾಗರತ್ನ ಪಾಟೀಲ ಮಾತನಾಡಿ, ಬರಮುಕ್ತ ಕರ್ನಾಟಕ ನಿರ್ಮಾಣ ಮಾಡಲು ಈಗಾಗಲೇ ರಾಜ್ಯದ್ಯಾಂತ ವಿವಿಧ ಜಿಲ್ಲೆಗಳಲ್ಲಿ ಸಮಾವೇಶ ನಡೆಸಲಾಗಿದೆ. ಜಲ ತಜ್ಞ ಡಾ.ರಾಜೇಂದ್ರ ಸಿಂಗ್‌, ಸ್ವರಾಜ್ ಪಕ್ಷದ ಅಪೇಕ್ಷ ಸೇರಿದಂತೆ ಮತ್ತಿತತರನ್ನು ಒಳಗೊಂಡಂತೆ ತಂಡ ರಚಿಸಲಾಗಿದೆ. ಈ ತಂಡದ ಮೂಲಕ ಬರ ನಿರ್ವಹಣೆ ಹೇಗೆ ಮಾಡಬೇಕು ಎನ್ನುವುದು ತಿಳಿಸಿಕೊಡಲಾಗುತ್ತಿದೆ ಎಂದರು.

ಈ ವೇಳೆ ನರಸಿಂಹ ವಡಗೇರಾ, ಅನಸೂಯ, ಚಂದ್ರಕಲಾ ವಡಗೇರಾ, ಮಲ್ಕಪ್ಪ ಚಿಲ್ಕಿ, ಭೀಮರಾಯ ಯಡ್ಡಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.